ಬಂಟ್ವಾಳ, ಅಕ್ಟೋಬರ್ 22, 2024 (ಕರಾವಳಿ ಟೈಮ್ಸ್) : ಕಲ್ಲಡ್ಕದ ರಾಷ್ಟ್ರೀಯ ಹೆದ್ದಾರಿಯ ಎಲ್ಲೆಂದರಲ್ಲಿ ಬೀದಿ ನಾಯಿಗಳ ಹಾವಳಿ ನಿತ್ಯ ನಿರಂತರವಾಗಿದ್ದು, ವಾಹನ ಸವಾರರು ಹಾಗೂ ಸಾರ್ವಜನಿಕರು ತೀವ್ರ ಆತಂಕ ಎದುರಿಸುವಂತಾಗಿದೆ. ಅದರಲ್ಲು ದ್ವಿಚಕ್ರ ವಾಹನ ಸವಾರರು ಅಪಾಯದ ಪರಿಸ್ಥಿತಿಯನ್ನು ಎದುರಿಸುವಂತಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.
ಒಂದೆಡೆ ಹೆದ್ದಾರಿ ಪರಿಸ್ಥಿತಿಯೇ ಆಯೋಮಯವಾಗಿ ಇಲ್ಲಿ ವಾಹನ ಸವಾರರು ಪಡುವ ಪಾಡು ಅಷ್ಟಿಷ್ಟಲ್ಲ. ಹೆದ್ದಾರಿ ಅವ್ಯವಸ್ಥೆಯನ್ನು ಹೇಗಾದರೂ ನಿಭಾಯಿಸಿಕೊಂಡು ಮುಂದೆ ಹೋಗುವ ಎಂದು ವಾಹನ ಸವಾರರು ಅಂದುಕೊಂಡರೆ ಇತ್ತ ಕಡೆ ಬೀದಿ ನಾಯಿಗಳು ಹಿಂಡು-ಹಿಂಡಾಗಿ ಹೆದ್ದಾರಿಯಲ್ಲೇ ಅಲೆದಾಡುತ್ತಿರುವ ಪರಿಣಾಮವಾಗಿ ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಸಂಚರಿಸಬೇಕಾದ ಪರಿಸ್ಥಿತಿ ಇದೆ.
ಇಲ್ಲಿನ ಹೆದ್ದಾರಿ ಕಾಮಗಾರಿಯ ನಡುವೆ ಬೇಸಿಗೆ ಕಾಲದಲ್ಲಿ ಧೂಳು, ಮಳೆ ಬಂದರೆ ಕೆಸರು ಇವುಗಳನ್ನು ಸಂಭಾಳಿಸುತ್ತಿರುವ ಮಧ್ಯೆ ಇದೀಗ ವಾಹನ ಸವಾರರಿಗೆ ಬೀದಿ ನಾಯಿಗಳ ಕಾಟ ತೀವ್ರ ಆತಂಕವನ್ನು ತಂದೊಡ್ಡಿದೆ. ಇಲ್ಲಿನ ಬೀದಿ ನಾಯಿಗಳ ಹಾವಳಿಗೆ ಸಂಬಂಧಪಟ್ಟ ಇಲಾಖೆ, ಅಧಿಕಾರಿಗಳು ಸೂಕ್ತ ಸಮಯದಲ್ಲಿ ಎಚ್ಚೆತ್ತು ತುರ್ತು ಕ್ರಮ ಕೈಗೊಳ್ಳದೆ ಇದ್ದಲ್ಲಿ ವಾಹನ ಸವಾರರ ಪಾಲಿಗೆ ಅಪಾಯವಂತೂ ಕಟ್ಟಿಟ್ಟ ಬುತ್ತಿ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ಅಲ್ಲದೆ ರಾತ್ರಿ ಸಂಜೆ, ಮಬ್ಬುಗತ್ತಲು ಹಾಗೂ ರಾತ್ರಿ ಸಮಯದಲ್ಲಿ ಶಾಲಾ-ಕಾಲೇಜು, ಮದ್ರಸ ವಿದ್ಯಾರ್ಥಿಗಳ ಸಹಿತ ಸಾರ್ವಜನಿಕರು ಬೀದಿ ನಾಯಿ ಹಾವಳಿಯಿಂದ ತೀವ್ರ ಅಪಾಯವನ್ನು ಎದುರಿಸುತ್ತಿದ್ದಾರೆ.
0 comments:
Post a Comment