ತೆಂಕುತಿಟ್ಟಿನ ಪ್ರಸಿದ್ದ ಹಾಸ್ಯ ಕಲಾವಿದ ಬಂಟ್ವಾಳ ಜಯರಾಮ ಆಚಾರ್ಯ ಇನ್ನಿಲ್ಲ - Karavali Times ತೆಂಕುತಿಟ್ಟಿನ ಪ್ರಸಿದ್ದ ಹಾಸ್ಯ ಕಲಾವಿದ ಬಂಟ್ವಾಳ ಜಯರಾಮ ಆಚಾರ್ಯ ಇನ್ನಿಲ್ಲ - Karavali Times

728x90

20 October 2024

ತೆಂಕುತಿಟ್ಟಿನ ಪ್ರಸಿದ್ದ ಹಾಸ್ಯ ಕಲಾವಿದ ಬಂಟ್ವಾಳ ಜಯರಾಮ ಆಚಾರ್ಯ ಇನ್ನಿಲ್ಲ

ಬೆಂಗಳೂರಿನಲ್ಲಿ ಯಕ್ಷಗಾನ ಪ್ರದರ್ಶನಕ್ಕೆಂದು ತೆರಳಿದ್ದ ವೇಳೆ ಹೃದಯಾಘಾತದಿಂದ ನಿಧನ 


ಬಂಟ್ವಾಳ, ಅಕ್ಟೋಬರ್ 21, 2024 (ಕರಾವಳಿ ಟೈಮ್ಸ್) : ಯಕ್ಷಗಾನ ಪ್ರದರ್ಶನಕ್ಕೆಂದು ಬೆಂಗಳೂರಿಗೆ ತೆರಳಿದ್ದ ತೆಂಕುತಿಟ್ಟಿನ ಪ್ರಸಿದ್ಧ ಹಾಸ್ಯ ಕಲಾವಿದ ಬಂಟ್ವಾಳ ಜಯರಾಮ ಆಚಾರ್ಯ (67) ಅವರು ಸೋಮವಾರ (ಅ 21) ಮುಂಜಾನೆ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಹಿರಿಯ ಕಲಾವಿದ ಚಂದ್ರಶೇಖರ ಧರ್ಮಸ್ಥಳ ಅವರ ನೇತೃತ್ವದ ತಂಡದಲ್ಲಿ ಸೋಮವಾರದಿಂದ ನಡೆಯಬೇಕಿದ್ದ ಯಕ್ಷಗಾನ ಕಾರ್ಯಕ್ರಮದಲ್ಲಿ ಭಾಗವಹಿಸಲು ಭಾನುವಾರ ಬೆಳಿಗ್ಗೆ ಬೆಂಗಳೂರಿನ ಆರ್ ಕೆ ಭಟ್ಟರ ಮನೆಗೆ ತೆರಳಿದ್ದ ಅವರಿಗೆ ಸೋಮವಾರ ಮುಂಜಾನೆ ಹೃದಯ ಸ್ಥಂಭನವಾಗಿದೆ. ತಕ್ಷಣ ಜೊತೆಗಿದ್ದ ಸಹ ಕಲಾವಿದರು ಅವರನ್ನು ಆಸ್ಪತ್ರೆಗೆ ಸಾಗಿಸಿದರಾದರೂ ಚಿಕಿತ್ಸೆಗೆ ಸ್ಪಂದಿಸದ ಅವರು ಮೃತಪಟ್ಟಿದ್ದಾರೆ ಎನ್ನಲಾಗಿದೆ. 

ಸ್ಥಳೀಯ ಆಸ್ಪತ್ರೆಯಲ್ಲಿರುವ ಆಚಾರ್ಯ ಅವರ ಮೃತದೇಹವನ್ನು ಬೆಂಗಳೂರಿನ ಆರ್ ಕೆ ಭಟ್ಟರ ಮನೆಗೆ ತಂದು ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಿದ ಬಳಿಕ ಆಂಬುಲೆನ್ಸ್ ಮೂಲಕ ಊರಿಗೆ ತರಲಾಗುವುದು ಎಂದು ಭಾಗವತ ಗಿರೀಶ್ ರೈ ಕಕ್ಕೆಪದವು ತಿಳಿಸಿದ್ದಾರೆ.

ಬರೋಬ್ಬರಿ 55 ವರ್ಷಗಳ ಕಾಲ ಯಕ್ಷಗಾನ ರಂಗದಲ್ಲಿ ಕಲಾವಿದರಾಗಿ ಸೇವೆ ಸಲ್ಲಿಸಿದ ಹಿರಿಯ ಹಾಸ್ಯ ಕಲಾವಿದ ಬಂಟ್ವಾಳ ಜಯರಾಮ ಆಚಾರ್ಯ ಅವರು ಯಾವುದೇ ಅತಿರೇಕಗಳಿಲ್ಲದೇ, ಪಾರಂಪರಿಕ ಶೈಲಿಯಲ್ಲಿ ಶುದ್ಧ ಹಾಸ್ಯವನ್ನು ಮಾಡುವ ಮೂಲಕ ಲಕ್ಷಾಂತರ ಅಭಿಮಾನಿಗಳನ್ನು ಸಂಪಾದಿಸಿದ್ದರು. ಯಾವುದೇ ಪಾತ್ರವನ್ನು ನೀಡಿದರೂ ಅದಕ್ಕೆ ನ್ಯಾಯ ಒದಗಿಸುತ್ತಿದ್ದ ಬಂಟ್ವಾಳ ಜಯರಾಮ ಆಚಾರ್ಯ ಅವರು ಯಕ್ಷಗಾನ ರಂಗದಲ್ಲಿ ಬಂಟ್ವಾಳ ಎಂದೇ ಚಿರಪರಿಚಿತರಾಗಿದ್ದರು. 

1957ರ ಅಕ್ಟೋಬರ್ 12ರಂದು ಬಂಟ್ವಾಳ ಗಣಪತಿ ಆಚಾರ್ಯ ಮತ್ತು ಭವಾನಿ ದಂಪತಿಯ ಪುತ್ರರಾಗಿ  ಬಂಟ್ವಾಳದಲ್ಲಿ ಜನಿಸಿದ ಬಂಟ್ವಾಳ ಜಯರಾಮ ಆಚಾರ್ಯ ಅವರು ಬಂಟ್ವಾಳ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾಭ್ಯಾಸ ನಡೆಸಿ, ತಂದೆಯ ಪ್ರೇರಣೆಯಿಂದ ಅಮ್ಟಾಡಿ, ಸೊರ್ನಾಡು ಮೇಳಗಳಲ್ಲಿ ತಿರುಗಾಟ ನಡೆಸಿ ವೇಷವನ್ನೂ ಮಾಡಿದ್ದರು. ಬಳಿಕ ಧರ್ಮಸ್ಥಳ ಮಂಜುನಾಥೇಶ್ವರ ಯಕ್ಷಗಾನ ಮೇಳದಿಂದ ನಡೆಸಲ್ಪಡುತ್ತಿದ್ದ ‘ಲಲಿತ ಕಲಾ ಕೇಂದ್ರ’ಕ್ಕೆ ಸೇರಿ ಯಕ್ಷಗಾನ ನೃತ್ಯ ಕಲಿತಿದ್ದರು. ಆ ನಂತರ ಕಟೀಲು ಮೇಳದಲ್ಲಿ 4 ವರ್ಷ, ಪುತ್ತೂರು ಮೇಳ, ಕದ್ರಿ ಮೇಳ, ಕುಂಬಳೆ ಮೇಳದಲ್ಲಿ ತಿರುಗಾಟ ನಡೆಸಿದರು. ಪುನಃ ಕಟೀಲು ಮೇಳ, ಎಡನೀರು ಮೇಳ, ಹೊಸನಗರ ಮೇಳ, ಬಳಿಕ ಹನುಮಗಿರಿ ಮೇಳ ಹೀಗೆ ಸುಮಾರು 50 ವರ್ಷಗಳ ಕಾಲ ಯಕ್ಷಗಾನ ತಿರುಗಾಟದಲ್ಲಿ ಪ್ರಧಾನ ಹಾಸ್ಯಗಾರ ಮಾತ್ರವಲ್ಲದೆ, ಇತರ ಪ್ರಮುಖ ಪಾತ್ರಗಳನ್ನೂ ಯಶಸ್ವಿಯಾಗಿ ನಿರ್ವಹಿಸಿದ್ದಾರೆ.

ಯಕ್ಷಗಾನ ಕಾರ್ಯಕ್ರಮದಲ್ಲಿ ಜಯರಾಮ ಆಚಾರ್ಯ ಅವರು ಪಾತ್ರ ಮಾಡುತ್ತಿದ್ದಾರೆ ಎಂದರೆ ಅಭಿಮಾನಿಗಳು ದೂರದೂರುಗಳಿಂದ ಬಂದು ಅವರ ನಟನೆಯನ್ನು ಕಣ್ತುಂಬಿಕೊಳ್ಳುತ್ತಿದ್ದರು. ಬಂಟ್ವಾಳ ಜಯರಾಮ ಆಚಾರ್ಯ ಅವರ ಹಠಾತ್ ನಿಧನಕ್ಕೆ ಯಕ್ಷಗಾನ ರಂಗದ ದಿಗ್ಗಜರು, ಕಲಾಭಿಮಾನಿಗಳು, ವಿವಿಧ ಗಣ್ಯರು ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ. ಮೃತ ಜಯರಾಮ ಆಚಾರ್ಯ ಅವರ ಬಂಟ್ವಾಳದ ಮನೆಗೆ ಭೇಟಿ ನೀಡಿದ ಬಂಟ್ವಾಳ ಶಾಸಕ ಯು ರಾಜೇಶ್ ನಾಯಕ್ ಅವರು ಪತ್ನಿ, ಮನೆ ಮಂದಿಗೆ ಸಾಂತ್ವನ ಹೇಳಿದರು. ಬುಡಾ ಮಾಜಿ ಅಧ್ಯಕ್ಷ ದೇವದಾಸ ಶೆಟ್ಟಿ, ಹಿರಿಯ ಯಕ್ಷಗಾನ ಕಲಾವಿದ ಸರಪಾಡಿ ಅಶೋಕ್ ಶೆಟ್ಟಿ ಜೊತೆಗಿದ್ದರು. 

  • Blogger Comments
  • Facebook Comments

0 comments:

Post a Comment

Item Reviewed: ತೆಂಕುತಿಟ್ಟಿನ ಪ್ರಸಿದ್ದ ಹಾಸ್ಯ ಕಲಾವಿದ ಬಂಟ್ವಾಳ ಜಯರಾಮ ಆಚಾರ್ಯ ಇನ್ನಿಲ್ಲ Rating: 5 Reviewed By: karavali Times
Scroll to Top