ಬಂಟ್ವಾಳ, ಅಕ್ಟೋಬರ್ 04, 2024 (ಕರಾವಳಿ ಟೈಮ್ಸ್) : ಕರ್ನಾಟಕ ರಾಜ್ಯದಲ್ಲಿ ಸಿದ್ದರಾಮಯ್ಯ ಕಳೆದ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದ ವೇಳೆ ಬಡವರ ಹೊಟ್ಟೆ ತಣಿಸಲು ಘೋಷಿಸಿದ್ದ ಜನಪರ, ಬಡವರ ಪರ ಯೋಜನೆಯಾಗಿರುವ “ಇಂದಿರಾ ಕ್ಯಾಂಟೀನ್’ ಬಂಟ್ವಾಳ ತಾಲೂಕಿನ ಬಿ ಸಿ ರೋಡಿನ ಹೃದಯ ಪಟ್ಟಣದ ಮಿನಿ ವಿಧಾನಸೌಧ ಪಕ್ಕದಲ್ಲಿ ಕಳೆದ 6 ವರ್ಷಗಳ ಹಿಂದೆ ಆರಂಭಗೊಂಡಿದ್ದು, ಇದೀಗ ಬಂಟ್ವಾಳದ ಈ ‘ಇಂದಿರಾ ಕ್ಯಾಂಟೀನ್’ ಹೊಸ ಆಹಾರ ಮೆನುವಿನೊಂದಿಗೆ ಇನ್ನಷ್ಟು ಜನರನ್ನು ಆಕರ್ಸಿಸುತ್ತಿದೆ. ಕ್ಯಾಂಟೀನಿನಲ್ಲಿ ನಿತ್ಯ ತಯಾರಾಗುವ ಆಹಾರ ತಿಂಡಿಗಳು ಸಮಯಕ್ಕೆ ಮೊದಲೇ ಪೂರ್ಣ ಪ್ರಮಾಣದಲ್ಲಿ ಖಾಲಿಯಾಗುತ್ತಿದ್ದು, ಸಾಕಷ್ಟು ಮಂದಿ ಪ್ರಯೋಜನ ಪಡೆಯುತ್ತಿದ್ದಾರೆ. ಈ ಹಿಂದೆ ಮಧ್ಯಾಹ್ನದ ಊಟಕ್ಕೆ 10 ರೂಪಾಯಿ, ಬೆಳಿಗ್ಗೆ ಹಾಗೂ ಸಂಜೆಯ ತಿಂಡಿಗೆ ಕೇವಲ 5 ರೂಪಾಯಿ ನಿಗದಿಪಡಿಸಿ ಕ್ಯಾಂಟೀನ್ ಆರಂಭವಾಗಿತ್ತು. ಇದೀಗ ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ಈ ಅವಧಿಯ ಸರಕಾರ ಅಧಿಕಾರದಲ್ಲಿ ಒಂದೂವರೆ ವರ್ಷ ಪೂರೈಸುತ್ತಿದ್ದಂತೆ ಕ್ಯಾಂಟೀನನ್ನು ಮತ್ತಷ್ಟು ಜನಾಕರ್ಷಣೀಯಗೊಳಿಸುವ ನಿಟ್ಟಿನಲ್ಲಿ ನೂತನ ಮೆನು ಜಾರಿಗೊಳಿಸಿದೆ.
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಈ ಮಹತ್ವಾಕಾಂಕ್ಷಿ ಬಡವರ ಪರ ಯೋಜನೆಯನ್ನು 2018ರಲ್ಲಿ ಜಾರಿಗೆ ತಂದಿದ್ದು, ಬಂಟ್ವಾಳದಲ್ಲಿ 2018ರ ಮಾರ್ಚ್ 12 ರಂದು ಬಿ ಸಿ ರೋಡಿನ ಮಿನಿ ವಿಧಾನಸೌಧ ಪಕ್ಕದಲ್ಲೇ ಮಾಜಿ ಸಚಿವ ಬಿ ರಮಾನಾಥ ರೈ ಅವರ ವಿಶೇಷ ಮುತುವರ್ಜಿಯಿಂದ ಶಿಲಾನ್ಯಾಸ ನೆರವೇರಿಸಲಾಗಿತ್ತು. ಅದೇ ವರ್ಷ ಡಿಸೆಂಬರ್ 9ರಂದು ಅಂದಿನ ನಗರಾಭಿವೃದ್ಧಿ ಸಚಿವರೂ, ಇಂದಿನ ವಿಧಾನಸಭಾ ಸ್ಪೀಕರ್ ಯು ಟಿ ಖಾದರ್ ಮತ್ತು ಅಂದಿನ ಕಂದಾಯ ಸಚಿವ ಆರ್ ವಿ ದೇಶಪಾಂಡೆ ಉದ್ಘಾಟಿಸಿದ್ದರು. ಬಂಟ್ವಾಳದಲ್ಲಿ ತಕ್ಷಣ ಇಂದಿರಾ ಕ್ಯಾಂಟೀನ್ ಆರಂಭಿಸಲು ವಿಶೇಷ ಮುತುವರ್ಜಿಯಿಂದ ಕೆಲಸ ಮಾಡಿ ಅದರಲ್ಲಿ ಯಶಸ್ವಿಯೂ ಆಗಿದ್ದ ಅಂದಿನ ಅರಣ್ಯ ಸಚಿವ ಹಾಗೂ ಬಂಟ್ವಾಳ ಶಾಸಕರಾಗಿದ್ದ ಬಿ ರಮಾನಾಥ ರೈ ಅವರು ಉದ್ಘಾಟನೆ ವೇಳೆ ಮಾಜಿಯಾಗಿದ್ದರು. ಹಾಲಿ ಶಾಸಕ ಯು ರಾಜೇಶ ನಾಯ್ಕ್ ಅವರು ಶಾಸಕರಾಗಿದ್ದರು. ಆದರೂ ಜನಪರ-ಬಡವರ ಪರ ಮಹತ್ವಾಕಾಂಕ್ಷಿ ಯೋಜನೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಬಿ ರಮಾನಾಥ ರೈ ಅವರು ಅತ್ಯುತ್ಸಾಹದಿಂದ ಭಾಗವಹಿಸಿ ಗಮನ ಸೆಳೆದಿದ್ದರು.
ಬಂಟ್ವಾಳದ ಇಂದಿರಾ ಕ್ಯಾಂಟೀನಿನ ನೂತನ ಮೆನು ಈ ರೀತಿ ಇದೆ :
ಬೆಳಿಗ್ಗಿನ ಅವಧಿಯಲ್ಲಿ ಸೋಮವಾರ ಎರಡು ನೀರು ದೋಸೆ ಮೂರು ಇಡ್ಲಿ ಹಾಗೂ ಚಟ್ನಿ-ಸಾಂಬಾರು, ಮಂಗಳವಾರ : ಉಪ್ಪಿಟ್ಟು ಅವಲಕ್ಕಿ ಹಾಗೂ ಮೂರು ಇಡ್ಲಿ ಸಾಂಬಾರು, ಬುಧವಾರ : ಪುಂಡಿಗಸಿ ಹಾಗೂ ಇಡ್ಲಿ ಸಾಂಬಾರ್, ಗುರುವಾರ : ಸ್ಪೆಷಲ್ ಪಾಲಾವ್ ಹಾಗೂ ಇಡ್ಲಿ ಸಾಂಬಾರ್, ಶುಕ್ರವಾರ : ಟೊಮೆಟೋ ಬಾತ್-ಅವಲಕ್ಕಿ ಹಾಗೂ ಇಡ್ಲಿ ಸಾಂಬಾರ್, ಶನಿವಾರ : ಮಂಗಳೂರು ಬನ್ಸ್ ಹಾಗೂ ಇಡ್ಲಿ ಸಾಂಬಾರ್, ಭಾನುವಾರ : ಕೇಸರಿ ಬಾತ್ ಹಾಗೂ ಇಡ್ಲಿ ಸಾಂಬಾರ್ ನೀಡಲಾಗುತ್ತಿದ್ದು, 10 ರೂಪಾಯಿ ದರ ವಿಧಿಸಲಾಗುತ್ತಿದೆ. ಪ್ರತಿ ದಿನ ಮಧ್ಯಾಹ್ನ ಊಟ ಸಾಂಬಾರು ಹಾಗೂ ಎರಡು ಚಪಾತಿ ನೀಡಲಾಗುತ್ತಿದ್ದು, 20 ರೂಪಾಯಿ ದರ ವಿಧಿಸಲಾಗುತ್ತಿದೆ. ಸೋಮವಾರ, ಬುಧವಾರ ಹಾಗೂ ಶನಿವಾರ ದಿನಗಳಂದು ಊಟದೊಂದಿಗೆ ಹೆಚ್ಚುವರಿಯಾಗಿ ಪಾಯಸ ನೀಡಲಾಗುತ್ತಿದೆ.
ರಾತ್ರಿ ಹೊತ್ತಿನಲ್ಲಿ ಕೇವಲ 5 ರೂಪಾಯಿಗೆ ಇಡ್ಲಿ ಸಾಂಬಾರ್ ನೀಡಲಾಗುತ್ತದೆ. ಬೆಳಿಗ್ಗೆ 7.30 ರಿಂದ, ಮಧ್ಯಾಹ್ನ 12.30 ರಿಂದ ಹಾಗೂ ಸಂಜೆ 5 ಗಂಟೆಯಿಂದ ಈ ಆಹಾರ ನೀಡಲು ಆರಂಭಿಸಲಾಗುತ್ತಿದೆ. ಪ್ರತಿ ದಿನ ಬೆಳಿಗ್ಗೆ ಹಾಗೂ ಮಧ್ಯಾಹ್ನ 300 ರಷ್ಟು ಮಂದಿಗೆ ಬೇಕಾಗುವ ಆಹಾರ ತಯಾರಿಸಲಾಗುತ್ತಿದ್ದು, ಸಂಜೆ 150 ಮಂದಿಯ ಆಹಾರ ಸಿದ್ದಪಡಿಸಲಾಗುತ್ತಿದೆ. ಇದು ಮುಗಿಯುವವರೆಗೂ ಸಾರ್ವಜನಿಕರಿಗೆ ನೀಡಲಾಗುತ್ತದೆ. ಇಲ್ಲಿನ ಇಂದಿರಾ ಕ್ಯಾಂಟೀನಿನಲ್ಲಿ ಮೂವರು ಗಂಡಸರು ಹಾಗೂ ಇಬ್ಬರು ಮಹಿಳೆಯರ ಸಹಿತ ಒಟ್ಟು 5 ಮಂದಿ ಸಿಬ್ಬಂದಿಗಳಿದ್ದು, ಸಮಯಕ್ಕೆ ಸರಿಯಾಗಿ ಆಹಾರ ತಯಾರಿಸಿ ಇಂದಿರಾ ಕ್ಯಾಂಟೀನಿಗೆ ಬರುವ ಬಡವರ ಹೊಟ್ಟೆ ತಣಿಸಲು ಬೇಕಾಗುವ ರೀತಿಯಲ್ಲಿ ಎಲ್ಲ ಸಿಬ್ಬಂದಿಗಳೂ ನಗುಮುಖದ ಸೇವೆ ನೀಡುತ್ತಿದ್ದಾರೆ ಎನ್ನುತ್ತಾರೆ ಇಲ್ಲಿನ ಕ್ಯಾಶಿಯರ್ ಹಾಗೂ ಉಸ್ತುವಾರಿ ಅಬ್ದುಲ್ ರಝಾಕ್ ಬೊಳ್ಳಾಯಿ ಹಾಗೂ ಸಿಬ್ಬಂದಿ ಆನಂದ ಪೂಜಾರಿ ಅವರು.
ಇಲ್ಲಿನ ಇಂದಿರಾ ಕ್ಯಾಂಟೀನಿನ ಬೇಡಿಕೆಗೆ ತಕ್ಕಂತೆ ಅಡುಗೆ ಕೆಲಸಕ್ಕೆ ಬೇಕಾಗುವ ಎಲ್ಲ ರೀತಿಯ ಯಂತ್ರೋಪಕರಣಗಳು, ಫ್ರಿಜ್ ಸಹಿತ ಸಕಲ ವ್ಯವಸ್ಥೆಗಳನ್ನು ಅಳವಡಿಸಲಾಗಿದೆ. ಕ್ಯಾಂಟೀನಿನ ಮೇಲ್ಭಾಗದ ಶೀಟ್ ಈಗಾಗಲೇ ದುರಸ್ತಿಪಡಿಸಲಾಗಿದ್ದು, ಮುಂದಿನ ದಿನಗಳಲ್ಲಿ ಪೈಂಟಿಂಗ್ ಕೆಲಸವೂ ನಡೆಯಲಿದೆ ಎನ್ನಲಾಗುತ್ತಿದೆ. ಇಲ್ಲಿನ ಸಿಬ್ಬಂದಿಗಳನ್ನು ಸೂಕ್ತ ಭದ್ರತೆಯೊಂದಿಗೆ ಖಾಯಂಗೊಳಿಸಿ ವೇತನ ಹೆಚ್ಚಳ, ವಿಮೆ, ಪಿಂಚಣಿ ಸೌಲಭ್ಯ ಹೆಚ್ಚಿಸುವ ಕುರಿತು ಕೂಡಾ ಆಗ್ರಹಗಳು ಕೇಳಿ ಬರುತ್ತಿದೆ.
0 comments:
Post a Comment