ಬೆಳ್ತಂಗಡಿ, ಅಕ್ಟೋಬರ್ 10, 2024 (ಕರಾವಳಿ ಟೈಮ್ಸ್) : ಎಟಿಎಂ ಕೇಂದ್ರದ ಒಳಗೆ ಪ್ರವೇಶಿಸಿ ಸಹಾಯ ಮಾಡುವ ನೆಪದಲ್ಲಿ ಮಾತನಾಡಿದ ಅಪರಿಚಿತರು ಬಳಿಕ ವ್ಯಕ್ತಿಯ ಎಟಿಎಂ ಕಾರ್ಡ್ ಬದಲಾಯಿಸಿ ಹಣ ಡ್ರಾ ಮಾಡಿ ವಂಚಿಸಿದ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಬಗ್ಗೆ ಠಾಣೆಗೆ ದೂರು ನೀಡಿರುವ ನ್ಯಾಯತರ್ಪು ನಿವಾಸಿ ಕೆ ಎಂ ಅಬೂಬಕ್ಕರ್ (71) ಅವರು, ತಾನು ಗೇರುಕಟ್ಟೆಯ ಬ್ಯಾಂಕ್ ಶಾಖೆಯಲ್ಲಿ ಖಾತೆ ಹೊಂದಿದ್ದು, ಸುಮಾರು 5 ವರ್ಷಗಳಿಂದ ಎಟಿಎಂ ಬಳಸುತ್ತಿದ್ದೇನೆ. ಅ 2 ರಂದು ಮಧ್ಯಾಹ್ನ ವೇಳೆ ಬೆಳ್ತಂಗಡಿ ತಾಲೂಕು ಕಳಿಯ ಗ್ರಾಮದ ಗೇರುಕಟ್ಟೆಯಲ್ಲಿರುವ ಎಟಿಎಂ ಯಂತ್ರದಿಂದ ಅವರು ಹಣ ಡ್ರಾ ಮಾಡುತ್ತಿರುವಾಗ, ಇಬ್ಬರು ಅಪರಿಚಿತರು ಎಟಿಎಂ ಕೇಂದ್ರದ ಒಳಗಡೆ ಬಂದು ಸಹಾಯ ಮಾಡುವ ಬಗ್ಗೆ ಹಿಂದಿಯಲ್ಲಿ ಮಾತನಾಡಿದ್ದಾರೆ. ಆದರೆ ಅಬೂಬಕ್ಕರ್ ಅವರು ತನಗೆ ಸಹಾಯದ ಅಗತ್ಯವಿಲ್ಲ ಎಂದು ತಿಳಿಸಿದರೂ ಅಪರಿಚಿತರು ಹೊರಗಡೆ ಹೋಗದೆ ಅಬೂಬಕ್ಕರ್ ಅವರನ್ನು ಗಮನಿಸಿದ್ದಾರೆ. ಬಳಿಕ ಅಬೂಬಕ್ಕರ್ ಅವರು ಎಟಿಎಂ ಕೇಂದ್ರದಿಂದ ಹೊರಗೆ ಹೋಗಿದ್ದಾರೆ. ನಂತರ ಅ 4 ರಂದು ಮರಳಿ ಅಬೂಬಕ್ಕರ್ ಅವರು ಎಟಿಎಂ ಕೇಂದ್ರಕ್ಕೆ ಹಣ ಡ್ರಾ ಮಾಡಲು ಹೋದಾಗ ಎಟಿಎಂ ಕಾರ್ಡ್ ಪಾಸ್ ವರ್ಡ್ ಸರಿಬಾರದೇ ಇದ್ದು, ಈ ಬಗ್ಗೆ ಬ್ಯಾಂಕಿನಲ್ಲಿ ವಿಚಾರಿಸಿದಾಗ ಯಾರೋ ಅಪರಿಚಿತರು ಎಟಿಎಂ ಕಾರ್ಡ್ ಬದಲಾಯಿಸಿ 49,200/- ರೂಪಾಯಿ ಹಣವನ್ನು ವಿತ್ ಡ್ರಾ ಮಾಡಿ ವಂಚಿಸಿರುವುದು ಬೆಳಕಿಗೆ ಬಂದಿದೆ ಎಂದು ನೀಡಿದ ದೂರಿನ ಮೇರೆಗೆ ಈ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 comments:
Post a Comment