ಬಂಟ್ವಾಳ, ಸೆಪ್ಟೆಂಬರ್ 24, 2024 (ಕರಾವಳಿ ಟೈಮ್ಸ್) : ಬಂಟ್ವಾಳ ತಾಲೂಕು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನ ಮಹಾಸಭೆ ವೇಳೆ ಇತ್ತೀಚೆಗೆ ಆಡಳಿತ ಮಂಡಳಿ ಉದ್ದೇಶಪೂರ್ವಕವಾಗಿ ಗೊಂದಲ-ಗದ್ದಲ ಉಂಟು ಮಾಡಿ ರೈತರ ಪ್ರಶ್ನೆಗಳಿಗೆ ಉತ್ತರಿಸದೆ ಕಾಟಾಚಾರದ ಮಹಾಸಭೆ ನಡೆಸಿರುವುದು ಸಹಕಾರಿ ರಂಗದ ಇತಿಹಾಸದಲ್ಲೇ ಪ್ರಥಮ ಎಂದು ಬಂಟ್ವಾಳ ಭೂ ಅಭಿವೃದ್ದಿ ಬ್ಯಾಂಕ್ ಮಾಜಿ ಅಧ್ಯಕ್ಷ, ಜಿಲ್ಲಾ ಕಾಂಗ್ರೆಸ್ ಸಹಕಾರಿ ಘಟಕದ ಸಂಚಾಲಕ ಸುದರ್ಶನ್ ಜೈನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ಬ್ಯಾಂಕ್ ಮಹಾಸಭೆ ವೇಳೆ ಗದ್ದಲ ಎಬ್ಬಿಸಿದ ಬಗ್ಗೆ ಮಂಗಳವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಬ್ಯಾಂಕ್ ಇತಿಹಾಸದಲ್ಲೇ ಪ್ರಥಮ ಬಾರಿಗೆ ಲಾಭದಲ್ಲಿದೆ ಎಂದು ಡಂಗುರ ಸಾರಿದ್ದಾರೆ. ಬ್ಯಾಂಕಿನ ಈ ಲಾಭ ಗಳಿಕೆಗೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕೃಷಿ ಸಾಲಗಳ ಬಡ್ಡಿಮನ್ನಾ ಕಾರ್ಯಕ್ರಮ ಕಾರಣ ಎಂಬುದನ್ನು ಬ್ಯಾಂಕಿನ ಆಡಳಿತ ಮಂಡಳಿ ಎಲ್ಲಿಯೂ ಪ್ರಸ್ತಾಪನೆ ಮಾಡಿಲ್ಲದೆ ಇರುವುದು ಆಡಳಿತ ಮಂಡಳಿಯ ದಿವಾಳಿತನಕ್ಕೆ ಸಾಕ್ಷಿ ಎಂದವರು ಆರೋಪಿಸಿದರು.
ಬ್ಯಾಂಕಿನ ಕಟ್ಟಡವು ಹಿಂದಿನ ಆಡಳಿತ ಮಂಡಳಿಯ ಸಾಧನೆಯಾಗಿದ್ದು, ಈ ವಾಣಿಜ್ಯ ಸಂಕೀರ್ಣದಿಂದಾಗಿ ವಾರ್ಷಿಕ 30 ಲಕ್ಷ ರೂಪಾಯಿ ಬಾಡಿಗೆ ಬರುತ್ತಿದೆ. ಇದು ಕೂಡಾ ಬ್ಯಾಂಕಿನ ಲಾಭ ಗಳಿಕೆಗೆ ಕಾರಣ ಎಂಬುದನ್ನು ಸಂಪೂರ್ಣವಾಗಿ ಮುಚ್ಚಿ ಹಾಕಲಾಗಿದೆ ಎಂದು ಜೈನ್ ಪ್ರಸ್ತುತ ಬ್ಯಾಂಕಿನ ಆಡಳಿತ ಮಂಡಳಿಯು ಕಾಂಗ್ರೆಸ್ ಬೆಂಬಲಿತ ರೈತಾಪಿ ವರ್ಗದ ಜನರನ್ನು ನೇರವಾಗಿ ಟಾರ್ಗೆಟ್ ಮಾಡಿ ಬಲವಂತದ ಸಾಲ ವಸೂಲಿಯ ಪ್ರಕರಣ ದಾಖಲಿಸುತ್ತಿದ್ದಾರೆ. ರಾಜ್ಯದ ಇತಿಹಾಸದಲ್ಲೇ ರೈತರ ಮೇಲೆ ಸಹಕಾರಿ ಬ್ಯಾಂಕ್ ಪ್ರಕರಣ ದಾಖಲಿಸಿ ದೌರ್ಜನ್ಯ ಎಸಗುತ್ತಿರುವುದು ಪ್ರಥಮವಾಗಿ ಗುರುತಿಸಲಾಗುತ್ತಿದೆ ಎಂದರು.
ಬಂಟ್ವಾಳ ಪಿ ಎಲ್ ಡಿ ಬ್ಯಾಂಕ್ ಚುನಾವಣೆಯ ಸಂದರ್ಭ ನಡೆದ ಅಕ್ರಮ ನಡೆ ಇತ್ತೀಚೆಗೆ ಮತದಾನ ಹಕ್ಕು ತಿದ್ದುಪಡಿ ಮಸೂದೆ ತಿದ್ದುಪಡಿ ಸಂದರ್ಭ ಉದಾಹರಣೆಯಾಗಿ ಪ್ರಸ್ತಾಪವಾಗಿರುವುದು ಇತಿಹಾಸದಲ್ಲೇ ಬಂಟ್ವಾಳ ಪಿ ಎಲ್ ಡಿ ಬ್ಯಾಂಕಿಗೆ ಕಪ್ಪು ಚುಕ್ಕೆಯಾಗಿದೆ ಎಂದ ಸುದರ್ಶನ ಜೈನ್, ಇತ್ತೀಚೆಗೆ ನಡೆದ ಮಹಾಸಭೆಯಲ್ಲಿ ರೈತರ ಪ್ರಶ್ನೆಗಳಿಗೆ ಉತ್ತರ ನೀಡುವ ಬದಲು ರೌಡಿಸಂ ಪ್ರದರ್ಶಿಸಿ ಕಾಟಾಚಾರದ ಮಹಾಭೆ ನಡೆಸಲಾಗಿದೆ ಎಂದರು. ಬ್ಯಾಂಕಿನ ಇತಿಹಾಸದಲ್ಲೇ ಕಲಂ 64ರಡಿ ವಿಚಾರಣೆ ನಡೆಯುತ್ತಿದ್ದು, ಅದಕ್ಕೂ ರಾಜಕೀಯ ಹಸ್ತಕ್ಷೇಪ ನಡೆಸಿ ತನಿಖೆಯ ಮೂರು ತಿಂಗಳ ಅವಧಿ ಮುಗಿದು ಸಮಯಾವಕಾಶ ಕೇಳುತ್ತಿದ್ದಾರೆ ಎಂದು ಆರೋಪಿಸಿದರು.
ನಿರ್ದೇಶಕ ಸ್ಥಾನ ಅನರ್ಹತೆಯ ಪ್ರಶ್ನೆಗೆ ಉತ್ತರಿಸಿದ ಅವರು, ಅದರ ಕುರಿತು ಯಾವುದೇ ಆದೇಶ ಪತ್ರ ನನಗೆ ಬಂದಿಲ್ಲ. ನಾನು ಸಾಲದ ಮರುಪಾವತಿ ಮಾಡಿ ಅವರೇ ದೃಢಪತ್ರ ನೀಡಿದ್ದಾರೆ ಎಂದರು.
ಈ ಸಂದರ್ಭ ಬ್ಯಾಂಕ್ ಮಾಜಿ ನಿದೇರ್ಶಕ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಶಿವಪ್ಪ ಪೂಜಾರಿ ಹಟದಡ್ಕ, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷರುಗಳಾದ ಸುದೀಪ್‍ಕುಮಾರ್ ಶೆಟ್ಟಿ, ಮಾಯಿಲಪ್ಪ ಸಾಲ್ಯಾನ್, ಸೀತಾರಾಮ ಶೆಟ್ಟಿ ಕಾಂತಾಡಿಗುತ್ತು, ಮಧುಸೂಧನ್ ಶೆಣೈ, ಮಹಮ್ಮದ್ ನಂದಾವರ ಜೊತೆಗಿದ್ದರು.
0 comments:
Post a Comment