ಸಮಾಜದ ಅಭಿವೃದ್ದಿಯಲ್ಲಿ ಸಹಕಾರಿ ಸಂಘ ಹಾಗೂ ಶಿಕ್ಷಣ ಪ್ರಮುಖ ಪಾತ್ರ ವಹಿಸುತ್ತದೆ : ಮಾಜಿ ಸಚಿವ ರೈ - Karavali Times ಸಮಾಜದ ಅಭಿವೃದ್ದಿಯಲ್ಲಿ ಸಹಕಾರಿ ಸಂಘ ಹಾಗೂ ಶಿಕ್ಷಣ ಪ್ರಮುಖ ಪಾತ್ರ ವಹಿಸುತ್ತದೆ : ಮಾಜಿ ಸಚಿವ ರೈ - Karavali Times

728x90

17 September 2024

ಸಮಾಜದ ಅಭಿವೃದ್ದಿಯಲ್ಲಿ ಸಹಕಾರಿ ಸಂಘ ಹಾಗೂ ಶಿಕ್ಷಣ ಪ್ರಮುಖ ಪಾತ್ರ ವಹಿಸುತ್ತದೆ : ಮಾಜಿ ಸಚಿವ ರೈ

 ಗ್ರಾಹಕರ ವಿಶ್ವಾಸದ ಮೇಲೆ ನಡೆಯುವ ಸಹಕಾರಿ ಸಂಘಗಳಿಂದ ಉತ್ತಮ ಸೇವೆ ಸಾಧ್ಯ : ಶಾಸಕ ಭರತ್ ಶೆಟ್ಟಿ 


ಸವಿತಾ ಸೌಹಾರ್ದ ಸಹಕಾರಿ ಬ್ಯಾಂಕಿನ ಸುರತ್ಕಲ್ ಶಾಖೆ ಹಾಗೂ ಸೌಂದರ್ಯ ವರ್ಧಕ ಉತ್ಪನ್ನಗಳ ಮಾರಾಟ ಮಳಿಗೆಯ ಉದ್ಘಾಟನೆ


ಮಂಗಳೂರು, ಸೆಪ್ಟೆಂಬರ್ 17, 2024 (ಕರಾವಳಿ ಟೈಮ್ಸ್) : ಸಮಾಜದ ಅಭಿವೃದ್ದಿಯಾಗಬೇಕಾದರೆ ಸಹಕಾರಿ ಸಂಘ ಹಾಗೂ ಶಿಕ್ಷಣ ಸಂಸ್ಥೆಗಳು ಪ್ರಮುಖ ಪಾತ್ರ ವಹಿಸುತ್ತದೆ ಎಂದು ಮಾಜಿ ಸಚಿವ ಬಿ ರಮಾನಾಥ ರೈ ಅಭಿಪ್ರಾಯಪಟ್ಟರು. 

ತಾಲೂಕಿನ ಬಿ ಸಿ ರೋಡಿನಲ್ಲಿ ಮುಖ್ಯ ಕಚೇರಿ ಹೊಂದಿರುವ ಸವಿತಾ ಸೌಹಾರ್ದ ಸಹಕಾರಿ ನಿಯಮಿತ ಇದರ ಸುರತ್ಕಲ್ ಶಾಖೆ ಹಾಗೂ ಉತ್ಪನ್ನಗಳ ಮಾರಾಟ ಮಳಿಗೆಯನ್ನು ಸುರತ್ಕಲ್ ಅಂಚೆ ಕಚೇರಿ ಮುಂಭಾಗದ ಶಂಕರ ಸದನದಲ್ಲಿ ಮಂಗಳವಾರ ಶುಭಾರಂಭಗೊಳಿಸಿದ ಬಳಿಕ ನಡೆದ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಸವಿತಾ ಸಮಾಜ ಸಾಮಾಜಿಕ ನ್ಯಾಯದಿಂದ ವಂಚಿತವಾದ ಸಮಾಜ. ಸಮಾಜಕ್ಕಾಗಿ ಕೆಲಸ ಮಾಡಿದವರನ್ನು ಯಾವತ್ತೂ ಮರೆಯಬಾರದು. ಕಾಲ ಸ್ಥಿತಿಗೆ ಅನುಗುಣವಾಗಿ ನಾವು ಬದಕಬೇಕಾಗಿದೆ. ನಾವು ಸ್ವಾವಲಂಭಿಗಳಾದಾಗ ಸಮಾಜದಲ್ಲಿ ಮುಂದೆ ಬರಲು ಸಾಧ್ಯವಿದೆ. ಸಂಘ ಗಟ್ಟಿಯಾದಾಗ ಸಮಾಜವೂ ಗಟ್ಟಿಯಾಗುತ್ತದೆ ಎಂದರು. 

ನೂತನ ಶಾಖೆ ಹಾಗೂ ಮಾರಾಟ ಮಳಿಗೆಯನ್ನು ಉದ್ಘಾಟಿಸಿದ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾ ವೈ ಭರತ್ ಶೆಟ್ಟಿ ಮಾತನಾಡಿ, ಸವಿತಾ ಸೌಹಾರ್ದ ಸಹಕಾರಿ ಸಂಘ ಹಾಗೂ ಸೌಂದರ್ಯ ವರ್ಧಕ ಉತ್ಪನ್ನಗಳ ಮಾರಾಟ ಮಳಿಗೆಯ ಉದ್ಘಾಟನೆಯು ಸುರತ್ಕಲ್ ಪರಿಸರದ ಜನರಿಗೆ ದೊರೆತ ಒಂದು ಅವಕಾಶವಾಗಿದೆ. ಅದನ್ನು ಇಲ್ಲಿನ ಜನ ಬಳಸಿಕೊಂಡು ಸಂಘದ ಅಭಿವೃದ್ದಿಗೆ ಶ್ರಮಿಸಬೇಕು ಎಂದರಲ್ಲದೆ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಗ್ರಾಹಕರು ಸಾಲಕ್ಕಾಗಿ ಸಾಕಷ್ಟು ದಾಖಲೆಗಳನ್ನು ನೀಡಬೇಕಾಗುತ್ತದೆ. ಆದರೆ ಸಹಕಾರಿ ಸಂಘಗಳು ಗ್ರಾಹಕನ ವಿಶ್ವಾಸದ ಮೇಲೆ ವ್ಯವಹಾರ ಮಾಡುತ್ತದೆ. ಗ್ರಾಹಕರಿಗೆ ಉತ್ತಮ ಸೇವೆ ನೀಡಲು ಸಹಕಾರಿ ಸಂಘದಿಂದ ಸಾಧ್ಯ ಎಂದರು. 

ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ವಿಶ್ವನಾಥ ಸಾಲ್ಯಾನ್ ಬಂಟ್ವಾಳ ಮಾತನಾಡಿ, ಸುರತ್ಕಲ್ ಶಾಖೆ ಅಭಿವೃದ್ದಿಯಾಗಲು ಎಲ್ಲರ ಸಹಕಾರ ಬೇಕು. ಮುಂದಿನ ದಿನಗಳಲ್ಲಿ ಕಿನ್ನಿಗೋಳಿ ಅಥವಾ ಮೂಡಬಿದಿರೆಯಲ್ಲಿ ಶಾಖೆ ತೆರೆಯುವ ಉದ್ದೇಶ ಹೊಂದಲಾಗಿದೆ ಎಂದರು. 

ಇದೇ ವೇಳೆ ವಿವಿಧ ಕ್ಷೇತ್ರಗಳ ಸಾಧಕರಾದ ಸತೀಶ್ ಸದಾನಂದ, ರಮೇಶ್ ಭಂಡಾರಿ ಬೊಟ್ಯಾಡಿ ರವೀಂದ್ರ ಭಂಡಾರಿ ಕಾಟಿಪಳ್ಳ, ಕುಶಲ್, ಸಂಘದ ಉಪಾಧ್ಯಕ್ಷ ಸುರೇಶ್ ನಂದೊಟ್ಟು, ನಿರ್ದೇಶಕ ದಿನೇಶ್ ಎಲ್ ಬಂಗೇರ ಅವರನ್ನು ಸನ್ಮಾನಿಸಲಾಯಿತು. 

ಎಸ್ ಸಿ ಡಿ ಸಿ ಸಿ ಬ್ಯಾಂಕ್ ನಿವೃತ್ತ ಡಿಜಿಎಂ ಉಗ್ಗಪ್ಪ ಶೆಟ್ಟಿ ಕೊಂಬಿಲ, ಸವಿತಾ ಸಮಾಜದ ಜಿಲ್ಲಾಧ್ಯಕ್ಷ ಆನಂದ ಭಂಡಾರಿ ಹೊಸಬೆಟ್ಟು, ಪಾಲಿಕೆ ಸದಸ್ಯರಾದ ವರುಣ್ ಚೌಟ, ನಯನ ಆರ್ ಕೋಟ್ಯಾನ್, ಸವಿತಾ ಶಶಿಧರ್, ಸವಿತಾ ಸಮಾಜ ವಿವಿಧೋದ್ದೇಶ ಸೌಹಾರ್ದ ಸಹಕಾರಿ ನಿ ಇದರ ಅಧ್ಯಕ್ಷ ನವೀನ್ ಚಂದ್ರ ಭಂಡಾರಿ, ಸವಿತಾ ಸಮಾಜ ಸುರತ್ಕಲ್ ವಲಯದ ಅಧ್ಯಕ್ಷ ಜಗದೀಶ್, ಮಂಗಳೂರು ತಾಲೂಕು ಭಂಡಾರಿ ಸಮಾಜದ ಅಧ್ಯಕ್ಷ ಮುರಳೀಧರ ಭಂಡಾರಿ, ಉಡುಪಿ ಜಿಲ್ಲಾ ಪರಿಯಾಳ ಸುಧಾರಕ ಸಂಘದ ಮಾಜಿ ಅಧ್ಯಕ್ಷ ಜಯಂತ್ ಸುವರ್ಣ ಬಜ್ಪೆ, ಭವಾನಿ ವಿಠಲ ಭಂಡಾರಿ ಕುಳಾಯಿ, ಕಟ್ಟಡದ ಮಾಲಕ ಐ ವಿಠಲ ಭಾಗವಹಿಸಿದ್ದರು. 

ಸಂಘದ ಉಪಾಧ್ಯಕ್ಷ ಸುರೇಶ್ ನಂದೊಟ್ಟು ಸ್ವಾಗತಿಸಿ, ದಿನೇಶ್ ಎಲ್ ಬಂಗೇರ ಪ್ರಸ್ತಾವನೆಗೈದರು. ಶಾಖಾ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕಿಶನ್ ವಂದಿಸಿದರು. ಪತ್ರಕರ್ತ ಕಿರಣ್ ಸರಪಾಡಿ ಕಾರ್ಯಕ್ರಮ ನಿರೂಪಿಸಿದರು. 

  • Blogger Comments
  • Facebook Comments

0 comments:

Post a Comment

Item Reviewed: ಸಮಾಜದ ಅಭಿವೃದ್ದಿಯಲ್ಲಿ ಸಹಕಾರಿ ಸಂಘ ಹಾಗೂ ಶಿಕ್ಷಣ ಪ್ರಮುಖ ಪಾತ್ರ ವಹಿಸುತ್ತದೆ : ಮಾಜಿ ಸಚಿವ ರೈ Rating: 5 Reviewed By: karavali Times
Scroll to Top