ಬಂಟ್ವಾಳ, ಸೆಪ್ಟೆಂಬರ್ 10, 2024 (ಕರಾವಳಿ ಟೈಮ್ಸ್) : ಶ್ರೀ ಗಣೇಶ ಚತುರ್ಥಿ ಹಬ್ಬದ ದಿನದಂದು (ಸೆಪ್ಟೆಂಬರ್ 7) ಬಂಟ್ವಾಳ ಸಂಚಾರಿ ಪೆÇಲೀಸ್ ಠಾಣಾ ವ್ಯಾಪ್ತಿಯ, ಬಂಟ್ವಾಳ ತಾಲೂಕು ಬಿ ಮೂಡ ಗ್ರಾಮದ ತಲಪಾಡಿ ಎಂಬಲ್ಲಿ, ಭೀಕರ ರೀತಿಯಲ್ಲಿ ಅಪಘಾತಕ್ಕೀಡಾದ ಕಾರಿನಲ್ಲಿದ್ದ ದಂಪತಿಗಳ ಪೈಕಿ ಪತ್ನಿ ಮೃತಪಟ್ಟು ಪತಿ ಗಂಭೀರ ಗಾಯಗೊಂಡ ಘಟನೆಗೆ ಸಂಬಂಧಿಸಿದಂತೆ ಘಟನಾ ಸ್ಥಳಕ್ಕೆ ಜಿಲ್ಲಾ ಎಸ್ಪಿ ಯತೀಶ್ ಎನ್ ಅವರು ಸೋಮವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದೊಂದು ಗಂಭೀರ ರೀತಿಯ ಅಪಘಾತವಾಗಿದ್ದು, ಈ ಕಾರಣಕ್ಕಾಗಿ ಎಸ್ಪಿ ಅವರು ಭೇಟಿ ನೀಡಿ ಅಪಘಾತಕ್ಕೆ ಕಾರಣ ಏನು ಎಂಬ ನಿಟ್ಟಿನಲ್ಲಿ ವರದಿ ನೀಡುವಂತೆ ಸ್ಥಳೀಯ ಸಾರಿಗೆ ಅಧಿಕಾರಿ ಹಾಗೂ ಟ್ರಾಫಿಕ್ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಭೀಕರ ರೀತಿಯಲ್ಲಿ ಈ ಅಪಘಾತ ನಡೆದಿದ್ದು, ಕಾರು ಚಾಲಕನ ನಿಯಂತ್ರಣ ಮೀರಿ ಹೆದ್ದಾರಿಯ ಡಿವೈಡರ್ ದಾಟಿ ರಸ್ತೆಯ ಇನ್ನೊಂದು ಬದಿಯಲ್ಲಿ ವಿರುದ್ದ ದಿಕ್ಕಿನಲ್ಲಿ ಬರುತ್ತಿದ್ದ ಕೆ ಎಸ್ ಆರ್ ಟಿ ಸಿ ಬಸ್ಸು ಹಾಗೂ ಬೈಕೊಂದಕ್ಕೆ ಡಿಕ್ಕಿ ಹೊಡೆದು ಬಳಿಕ ಕಾರು ರಸ್ತೆಯಲ್ಲೇ ಮಗುಚಿ ಬಿದ್ದಿತ್ತು. ಅಪಘಾತದ ತೀವ್ರತೆಗೆ ಕಾರು ಪೂರ್ಣ ರೀತಿಯಲ್ಲಿ ಜಖಂಗೊಂಡಿದ್ದು, ಕಾರಿನಲ್ಲಿದ್ದ ಸಹಪ್ರಯಾಣಿಕೆ ನವವಿವಾಹಿತೆ ಮಾನಸ ಅವರು ಸ್ಥಳದಲ್ಲೇ ಮೃತಪಟಿದ್ದರೆ, ಪತಿ, ಕಾರು ಚಾಲಕ ಅನೀಶ್ ಕೃಷ್ಣ ಅವರು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ರೀತಿಯ ಭೀಕರ ಅಪಘಾತ ಕಾರಿನ ನ್ಯೂನ್ಯತೆ ಕಾರಣದಿಂದಲೋ, ಚಾಲಕನ ಅಚಾತುರ್ಯವೋ ಅಥವಾ ಹೆದ್ದಾರಿ ಅವ್ಯವಸ್ಥೆ ಕಾರಣದಿಂದಲೋ ಎಂಬ ಬಗ್ಗೆ ತನಿಖೆ ನಡೆಸುವಂತೆ ಜಿಲ್ಲಾ ಎಸ್ಪಿ ಅವರು ಸ್ಥಳೀಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
0 comments:
Post a Comment