ಎಲ್ಲರನ್ನು ಪ್ರೀತಿಸುವ ಮೂಲಕ ಜೀವನ ಪರಿಶುದ್ದವಾಗಿಸಬೇಕಾಗಿದೆ : ಶ್ರೀ ಮೋಹನದಾಸ ಸ್ವಾಮೀಜಿ ಮಾಣಿಲ
ಬಂಟ್ವಾಳ, ಸೆಪ್ಟೆಂಬರ್ 09, 2024 (ಕರಾವಳಿ ಟೈಮ್ಸ್) : ಎಲ್ಲ ಧರ್ಮೀಯರು ಸೇರಿ ಆಚರಿಸುತ್ತಿದ್ದ ನಮ್ಮ ಬಾಲ್ಯದ ದಿನಗಳ ಹಬ್ಬ ಹರಿದಿನಗಳ ಸಂಭ್ರಮ ಅದೇಗೆ ಈಗಿನ ಕಾಲದಲ್ಲಿ ಹೊರಟು ಹೋಯಿತು ಎಂಬ ಬಗ್ಗೆ ನಾವೆಲ್ಲರೂ ಒಂದು ಕ್ಷಣ ಹಿಂತಿರುಗಿ ನೋಡುವ ಅನಿವಾರ್ಯತೆ ಇದೆ ಎಂದು ಅಲ್ಲಿಪಾದೆ ಸಂತ ಅಂಥೋನಿ ದೇವಾಲಯದ ಧರ್ಮಗುರು ವಂದನೀಯ ಫಾದರ್ ರಾಬರ್ಟ್ ಡಿ’ಸೋಜ ಕರೆ ನೀಡಿದರು.
ಮಾಜಿ ಸಚಿವ, ಕೆಪಿಸಿಸಿ ಉಪಾಧ್ಯಕ್ಷ ಬಿ ರಮಾನಾಥ ರೈ ಅವರ ನೇತೃತ್ವದಲ್ಲಿ ಬಂಟ್ವಾಳ-ಜಕ್ರಿಬೆಟ್ಟುವಿನಲ್ಲಿ ನಡೆಯುತ್ತಿರುವ ಸಾರ್ವಜನಿಕ ಶ್ರೀ ಗಣೇಶೋತ್ಸವ ಆಚರಣಾ ಸಮಿತಿ ವತಿಯಿಂದ ನಡೆಯುವ 21ನೇ ವರ್ಷದ ಶ್ರೀ ಗಣೇಶೋತ್ಸವ ಕಾರ್ಯಕ್ರಮದ ಪ್ರಯುಕ್ತ ಭಾನುವಾರ ರಾತ್ರಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು ಹಿಂದಿನ ಕಾಲದಲ್ಲಿ ನಾವೆಲ್ಲರೂ ಜಾತಿ-ಮತ-ಧರ್ಮಗಳ ಎಲ್ಲೆಗಳನ್ನು ಮೀರಿ ಎಲ್ಲ ಧರ್ಮೀಯರ ಹಬ್ಬ-ಹರಿದಿನಗಳನ್ನು ಒಟ್ಟಾಗಿ ಆಚರಿಸುವ ಮೂಲಕ ಸಾಮಾಜಿಕ ಭ್ರಾತೃತ್ವವನ್ನು ಎಲ್ಲ ಊರುಗಳಲ್ಲೂ ನಾವೇ ಉಂಟು ಮಾಡುತ್ತಿದ್ದೆವು. ಆದರೆ ಇಂದು ಒಂದು ಧರ್ಮದ ಹಬ್ಬಗಳು ಸೀಮಿತ ಜನಾಂಗಕ್ಕೆ ಮಾತ್ರ ಸೀಮಿತವಾಗುವ ಮೂಲಕ ಸಮಾಜದಲ್ಲಿ ವಿಶಾಲತೆ ಸೃಷ್ಟಿಸಬೇಕಾದ ಧಾರ್ಮಿಕ ಆಚರಣೆಗಳು ಜನರಲ್ಲಿ ಸಂಕುಚಿತ ಭಾವನೆಗಳನ್ನು ಉಂಟು ಮಾಡುತ್ತಿರುವುದು ಅತ್ಯಂತ ವಿಷಾದನೀಯವಾಗಿದೆ. ಈ ನಿಟ್ಟಿನಲ್ಲಿ ರಮಾನಾಥ ರೈ ಅವರ ನೇತೃತ್ವದಲ್ಲಿ ನಡೆಯುವ ಶ್ರೀ ಗಣೇಶೋತ್ಸವ ಕಾರ್ಯಕ್ರಮ ಎಲ್ಲ ಜಾತಿ-ಧರ್ಮೀಯರನ್ನು ಒಟ್ಟುಗೂಡಿಸಿ ನಡೆಯುತ್ತಿರುವುದು ಕಾಲದ ಅನಿವಾರ್ಯತೆಯನ್ನು ಸಾಬೀತುಪಡಿಸುತ್ತಿದೆ ಎಂದರು.
ಮಾಜಿ ಸಚಿವ ರಮಾನಾಥ ರೈ ಅವರ ಪ್ರಯತ್ನದಿಂದ ವಾಮದಪದವಿನಲ್ಲಿ ಮಂಜೂರುಗೊಂಡ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಧ್ಯಯನ ಮಾಡಿ ಇಂದು ನಾನು ಈ ಹಂತಕ್ಕೆ ಬೆಳೆದು ಬಂದಿದ್ದೇನೆ. ಇಂತಹ ಹಲವು ಸಾಮಾಜಿಕ ಕಾರ್ಯಗಳನ್ನು ರಾಜಕೀಯ ರಂಗದಲ್ಲಿ ಮಾಡಿ ತೋರಿಸಿರುವ ರೈಗಳು ಮಾಡಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ ಎಂದು ಫಾದರ್ ರಾಬರ್ಟ್ ಡಿ ಸೋಜ ಶ್ಲಾಘಿಸಿದರು.
ಆಶಿರ್ವಚನಗೈದು ಮಾತನಾಡಿದ ಶ್ರೀ ಕ್ಷೇತ್ರ ಮಾಣಿಲ ಶ್ರೀ ಮಹಾಲಕ್ಷ್ಮಿ ಸೇವಾ ಪ್ರತಿಷ್ಠಾನದ ಶ್ರೀ ಮೋಹನದಾಸ ಸ್ವಾಮೀಜಿ ಅವರು, ಜಗತ್ತಿಗೆ ಶಾಂತಿಯ ಸಂದೇಶ ಸಾರಿದ ದೇಶ ಭಾರತ. ಋಷಿ ಮುನಿಗಳು ಇದನ್ನು ಸಾಧಿಸಿ ತೋರಿದ್ದಾರೆ. ಎಲ್ಲರನ್ನು ಪ್ರೀತಿ ಮಾಡುವ ಮೂಲಕ ಮನುಷ್ಯ ಜೀವನ ಪರಿಶುದ್ದವಾಗಿಸಬೇಕಿದೆ. ಕಣ್ಣಿಗೆ ಕಾಣದ ದೇವರನ್ನು ಪೂಜಿಸುವುದರ ಜೊತೆಗೆ ಕಣ್ಣಿಗೆ ಕಾಣದ ದೇವರುಗಳಾದ ಜನ್ಮ ನೀಡಿದ ತಂದೆ-ತಾಯಿಯಂದಿರು, ಜೀವನ ಮೌಲ್ಯ ಕಲಿಸಿದ ಗುರುಗಳು, ಕಷ್ಟ ಕಾಲದಲ್ಲಿ ಸಹಾಯ ಮಾಡಿದವರು ಇವರೆಲ್ಲರನ್ನು ಗೌರವಿಸುವ ಮೂಲಕ ಜೀವನ ಧನ್ಯಗೊಳಿಸಬೇಕು ಎಂದರು.
ತಾಯಿ ಜೀವನದ ಮೊದಲ ದೇವರು. ಮಗುವನ್ನು ಹೆತ್ತು ಸಾಕಿ ಸಲಹಿ ಜೀವನ ಮೌಲ್ಯ ಕಲಿಸಿದಾಕೆ. ಆಕೆಗೆ ಮಹತ್ವದ ಸ್ಥಾನ ಇದೆ ಎಂದ ಸ್ವಾಮೀಜಿಗಳು ಮನುಷ್ಯನಿಗೆ ನೋವು ಮಾಡಿದರೆ, ಹಿಂಸೆ ಮಾಡಿದರೆ ಅದು ನಮಗೆ ತಿರುಗಿ ಬಂದೇ ಬರುತ್ತದೆ. ಶತ್ರುತ್ವ ಎಲ್ಲಿಯೂ ಶಾಶ್ವತವಾಗಿ ಉಳಿಯೋದಿಲ್ಲ, ಅದು ನಾಶವಾಗುತ್ತದೆ. ಸರ್ವರೊಂದಿಗೂ ಪ್ರೀತಿತ್ವ ಮೈಗೂಡಿಸಿಕೊಳ್ಳಬೇಕು. ಜಾತಿ ಮತ ಪಂಥ ಧರ್ಮ ಬೇಧ ಮರೆತು ಒಂದಾಗಿ ಜೀವಿಸುವ ಮೂಲಕ ಪ್ರೀತಿ ಸ್ನೇಹ ಸೌಹಾರ್ದತೆಯನ್ನು ಉಳಿಸಿಕೊಂಡು ಬರಬೇಕಾಗಿದೆ. ಈ ಮೂಲಕ ಅಮಾಯಕರ ಜೀವ ಹಾನಿಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಕರೆಯಿತ್ತರು.
ಮಾಜಿ ಸಚಿವ, ಗಣೇಶೋತ್ಸವ ಸಮಿತಿ ಗೌರವಾಧ್ಯಕ್ಷ ಬಿ ರಮಾನಾಥ ರೈ ಅಧ್ಯಕ್ಷತೆ ವಹಿಸಿದ್ದರು. ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ರಾಮಯ್ಯ, ಉದ್ಯಮಿ ರಘುನಾಥ ಸೋಮಯಾಜಿ ಅತಿಥಿಗಳಾಗಿ ಭಾಗವಹಿಸಿದ್ದರು.
ಗಣೇಶೋತ್ಸವ ಸಮಿತಿ ಅಧ್ಯಕ್ಷ ಬಿ ಪದ್ಮಶೇಖರ ಜೈನ್, ಪದಾಧಿಕಾರಿಗಳಾದ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಕೆ ಮಾಯಿಲಪ್ಪ ಸಾಲ್ಯಾನ್, ಸುದೀಪ್ ಕುಮಾರ್ ಶೆಟ್ಟಿ, ಬೇಬಿ ಕುಂದರ್, ಚಂದ್ರಶೇಖರ್ ಭಂಡಾರಿ ಮೊದಲಾದವರು ಉಪಸ್ಥಿತರಿದ್ದರು.
ರಾಜೀವ್ ಶೆಟ್ಟಿ ಎಡ್ತೂರು ಸ್ವಾಗತಿಸಿ, ಸಂಪತ್ ಕುಮಾರ್ ಶೆಟ್ಟಿ ವಂದಿಸಿದರು. ರಾಜೀವ್ ಕಕ್ಕೆಪದವು ಕಾರ್ಯಕ್ರಮ ನಿರೂಪಿಸಿದರು.
0 comments:
Post a Comment