“ಸಾಮರಸ್ಯದ ಬಂಟ್ವಾಳ” ಸ್ಥಾಪಿಸುವ ನಾಡಹಬ್ಬವಾಗಿ ಜಕ್ರಿಬೆಟ್ಟು ಗಣೇಶೋತ್ಸವ ಮುಂದುವರಿಕೆ : ರೈ
ಬಂಟ್ವಾಳ, ಸೆಪ್ಟೆಂಬರ್ 07, 2024 (ಕರಾವಳಿ ಟೈಮ್ಸ್) : ಮಾಜಿ ಸಚಿವ, ಕೆಪಿಸಿಸಿ ಉಪಾಧ್ಯಕ್ಷ ಬಿ ರಮಾನಾಥ ರೈ ಅವರ ನೇತೃತ್ವದಲ್ಲಿ ಬಂಟ್ವಾಳ-ಜಕ್ರಿಬೆಟ್ಟು ಸಾರ್ವಜನಿಕ ಶ್ರೀ ಗಣೇಶೋತ್ಸವ ಆಚರಣಾ ಸಮಿತಿ ವತಿಯಿಂದ ನಡೆಯುವ 21ನೇ ವರ್ಷದ ಶ್ರೀ ಗಣೇಶೋತ್ಸವ ಕಾರ್ಯಕ್ರಮಕ್ಕೆ ಬಂಟ್ವಾಳ ಬೈಪಾಸಿನ ಜಕ್ರಿಬೆಟ್ಟು ಮೈದಾನದಲ್ಲಿ ಶನಿವಾರ (ಸೆಪ್ಟೆಂಬರ್ 7) ಬೆಳಿಗ್ಗೆ ಸಂಭ್ರಮದ ಚಾಲನೆ ದೊರೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಾಜಿ ಸಚಿವ, ಗಣೇಶೋತ್ಸವ ಸಮಿತಿ ಗೌರವಾಧ್ಯಕ್ಷ ಬಿ ರಮಾನಾಥ ರೈ ಮಾತನಾಡಿ, ಕಳೆದ 20ವರ್ಷಗಳ ಹಿಂದೆ ನಾಡಿನ ಸಮಸ್ತ ಸದ್ಭಕ್ತರ ಸದ್ಭಾವನೆಯ ಪ್ರತಿರೂಪವಾಗಿ ಬಂಟ್ವಾಳದ ಜತ್ರಿಬೆಟ್ಟಿನಲ್ಲಿ ಆರಂಭಗೊಂಡ ಸಾರ್ವಜನಿಕ ಶ್ರೀ ಗಣೇಶೋತ್ಸವವು ಇಡೀ ನಾಡಿಗೆ ಮಾದರಿಯಾಗಿ ನಡೆದುಕೊಂಡು ಬಂದಿದೆ. ಬಂಟ್ವಾಳದ ಗಣೇಶೋತ್ಸವವೆಂದರೆ ಒಂದು ಜಾತಿ, ಮತ, ಧರ್ಮಕ್ಕೇ ಸೀಮಿತವಾಗಿರದೆ ಎಲ್ಲರೂ ಒಂದಾಗಿ ಬೆಸೆಯುವ, ಬೆರೆಯುವ ಸೌಹಾರ್ದತೆಯ ಸಮ್ಮೇಳನವಾಗಿ ರೂಪುಗೊಂಡು “ಬಂಟ್ವಾಳದ ಹಬ್ಬ”ವಾಗಿ ಆಚರಿಸಲ್ಪಡುತ್ತಿರುವುದು ಸಂತಸದ ವಿಚಾರವಾಗಿದೆ. ಜಾತಿ-ಜಾತಿ, ಧರ್ಮ-ಧರ್ಮಗಳ ನಡುವೆ ವಿಷಬೀಜ ಬಿತ್ತಿ ಈ ಮಣ್ಣಿನ ಸಾಮರಸ್ಯದ, ಸಹಭಾಳ್ವೆಯ ಸಹಜೀವನವನ್ನು ನಾಶ ಮಾಡಲು ಸ್ಥಾಪಿತ ಹಿತಾಸಕ್ತಿಗಳು ಹರಸಾಹಸ ಪಡುತ್ತಿರುವ ಪ್ರಸಕ್ತ ಸನ್ನಿವೇಶದಲ್ಲಿ ಮನುಷ್ಯ-ಮನುಷ್ಯರ ನಡುವೆ ಸಾಮರಸ್ಯದ ಕೊಂಡಿಯೊಂದು ಬಲವಾಗಿ ಬೆಸೆಯಬೇಕಾದ ಅನಿವಾರ್ಯತೆ ಮನಗಂಡು ಮನುಷ್ಯರೆಲ್ಲರೂ ಎಲ್ಲಾ ಭೇದಭಾವವನ್ನು ತೊರೆದು ಒಂದೇ ಸೂರಿನಡಿ ಒಂದಾಗಬೇಕೆಂಬ ಸದುದ್ದೇಶದಿಂದ ಅಂದು ಆರಂಭಿಸಿದ ಬಂಟ್ವಾಳದ ಶ್ರೀ ಗಣೇಶೋತ್ಸವ ಅತ್ಯಂತ ಅರ್ಥಪೂರ್ಣವಾಗಿ, ಆಭೂತಪೂರ್ವವಾಗಿ ನಡೆದುಕೊಂಡು ಬಂದಿದೆ ಎಂದರು.
ಸಾಮಾಜಿಕ ಸಾಮರಸ್ಯವನ್ನು ಕಾಪಾಡುವಲ್ಲಿ ಬಂಟ್ವಾಳದ ಗಣೇಶೋತ್ಸವ ತನ್ನದೇ ಆದ ವಿಶೇಷ ಕೊಡುಗೆಯನ್ನು ನೀಡಿದೆ. ಮುಂದೆಯೂ ನಮ್ಮಿ ಗಣೇಶೋತ್ಸವವು ಜನಾಕರ್ಷಣೆಯ ಉತ್ಸವ ಆಗುವುದರ ಜತೆಯಲ್ಲಿ ಜನರ ಹೃನ್ಮನವನ್ನು ಗೆಲ್ಲುವ, ಭಾಂದವ್ಯವನ್ನು ಬೆಸೆಯುವ, “ಸಾಮರಸ್ಯದ ಬಂಟ್ವಾಳ” ಸ್ಥಾಪಿಸುವ ನಾಡಹಬ್ಬವಾಗಿ ರೂಪುಗೊಳ್ಳಬೇಕೆನ್ನುವ ಸದಾಶಯದೊಂದಿಗೆ ಜಕ್ರಿಬೆಟ್ಟು ಗಣೇಶೋತ್ಸವ ಮುಂದುವರಿಯಲಿದೆ ಎಂದ ರಮಾನಾಥ ರೈ ಈ ಬಾರಿ ಸೆ 11ರವರೆಗೆ ವಿವಿಧ ವೈಧಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದ್ದು ಸೆ 11 ರಂದು ಬೃಹತ್ ಹಾಗೂ ಆಕರ್ಷಕ ಶೋಭಾಯಾತ್ರೆಯೊಂದಿಗೆ ಸಂಪನ್ನಗೊಳ್ಳಲಿದೆ ಎಂದರು.
ಶನಿವಾರ ಬೆಳಿಗ್ಗೆ 10 ಗಂಟೆಗೆ ಪ್ರಾರ್ಥನೆ, ಪುಣ್ಯಾಹ ವಾಚನ, 11 ಗಂಟೆಗೆ ವಿಗ್ರಹ ಪ್ರತಿಷ್ಠಾಪನೆ, ಪ್ರತಿಷ್ಠಾ ಹೋಮ, ಗಣಪತಿ ಹೋಮ, ಅಪ್ಪದ ಪೂಜೆ, 11.30ಕ್ಕೆ ಉಗ್ರಾಣ ಮುಹೂರ್ತ ನಡೆದ ಬಳಿಕ ವಿವಿಧ ಕಾರ್ಯಕ್ರಮಗಳಿಗೆ ಮಂಗಳೂರಿನ ಖ್ಯಾತ ವೈದ್ಯ ಡಾ ಶಿವಪ್ರಸಾದ್ ರೈ ಚಾಲನೆ ನೀಡಿದರು.
ಬಂಟ್ವಾಳ ಪುರಸಭಾಧ್ಯಕ್ಷ ಬಿ ವಾಸು ಪೂಜಾರಿ ಲೊರೆಟ್ಟೊ, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಶ್ರೀಮತಿ ಮಲ್ಲಿಕಾ ಪಕ್ಕಳ, ಕೆಪಿಸಿಸಿ ಸದಸ್ಯ ಪಿಯೂಸ್ ಎಲ್ ರೋಡ್ರಿಗಸ್, ಜಿಲ್ಲಾ ಕಾಂಗ್ರೆಸ್ ಅಸಂಘಟಿತ ಕಾರ್ಮಿಕ ಘಟಕಾಧ್ಯಕ್ಷ ಬಿ ಎಂ ಅಬ್ಬಾಸ್ ಅಲಿ, ಸಮಿತಿ ಅಧ್ಯಕ್ಷ ಬಿ ಪದ್ಮಶೇಖರ್ ಜೈನ್ ಮೊದಲಾದವರು ಭಾಗವಹಿಸಿದ್ದರು.
0 comments:
Post a Comment