ಬಂಟ್ವಾಳ, ಸೆಪ್ಟೆಂಬರ್ 17, 2024 (ಕರಾವಳಿ ಟೈಮ್ಸ್) : ತಾಲೂಕಿನ ಪ್ರತಿಷ್ಠಿತ ಸಹಕಾರಿ ಬ್ಯಾಂಕ್ ಬಂಟ್ಚಾಳ ತಾಲೂಕು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನಿ. (ಪಿಎಲ್ ಡಿ ಬ್ಯಾಂಕ್) ಇದರ ವಾರ್ಷಿಕ ಮಹಾಸಭೆಯು ಇತ್ತೀಚೆಗೆ ಬಿ ಸಿ ರೋಡಿನ ಗೀತಾಂಜಲಿ ಸಭಾಂಗಣದಲ್ಲಿ ನಡೆಯಿತು.
ಸಭಾಧ್ಯಕ್ಷತೆ ವಹಿಸಿದ್ದ ಬ್ಯಾಂಕ್ ಅಧ್ಯಕ್ಷ, ನೋಟರಿ-ನ್ಯಾಯವಾದಿ ಅರುಣ್ ರೋಶನ್ ಡಿ’ಸೋಜ ಮಾತನಾಡಿ, 2020ರ ಫೆಬ್ರವರಿ ತಿಂಗಳಲ್ಲಿ ನಮ್ಮ ಆಡಳಿತ ಮಂಡಳಿ ಅಧಿಕಾರ ಸ್ವೀಕರಿಸಿದಾಗ ನಷ್ಟದಲ್ಲಿದ್ದ ಬ್ಯಾಂಕ್ ಪ್ರಸ್ತುತ ನಿರ್ದೇಶಕರು, ಎಲ್ಲಾ ಸದಸ್ಯರು ಹಾಗೂ ಸಿಬ್ಬಂದಿಗಳ ಸಹಕಾರದಿಂದ ಎಲ್ಲಾ ನಷ್ಟವನ್ನು ಭರಿಸಿ 2023-24ನೇ ಸಾಲಿನಲ್ಲಿ ಬ್ಯಾಂಕ್ 1.05 ಕೋಟಿ ರೂಪಾಯಿ ಲಾಭ ಗಳಿಸಿದ್ದು, ಬ್ಯಾಂಕ್ ಸದಸ್ಯರಿಗೆ ಶೇ. 11 ರ ಪ್ರಮಾಣದಲ್ಲಿ ಡೆವಿಡೆಂಡ್ ಘೋಷಿಸಲಾಗಿದೆ ಎಂದರು.
ಪ್ರಸ್ತುತ ಬ್ಯಾಂಕ್ 11,303 ಮಂದಿ ಸದಸ್ಯರನ್ನು ಹೊಂದಿದ್ದು, ಒಟ್ಟು ಪಾಲು ಬಂಡವಾಳ 178.50 ಲಕ್ಷ ರೂಪಾಯಿಗಳು. 2024 ರ ಮಾರ್ಚ್ 31 ರ ಅಂತ್ಯಕ್ಕೆ 37.36 ಲಕ್ಷ ರೂಪಾಯಿ ಕ್ಷೇಮ ನಿಧಿ, 146.66 ಲಕ್ಷ ರೂಪಾಯಿ ಇತರ ನಿಧಿ ಹಾಗೂ 1974.96 ಲಕ್ಷ ರೂಪಾಯಿ ಠೇವಣಿ ಹೊಂದಿದೆ. ಎಂದರು.
2023-24ನೇ ಸಾಲಿನಲ್ಲಿ 506.66 ಲಕ್ಷ ರೂಪಾಯಿ ವಸೂಲಿ ತಗಾದೆ ಹೊಂದಿದ್ದು, ಆ ಪೈಕಿ 476.26 ಲಕ್ಷ ರೂಪಾಯಿ ವಸೂಲಿ ಮಾಡುವ ಮೂಲಕ ಶೇ. 94% ವಸೂಲಾತಿ ಸಾಧನೆ ಮಾಡಿದೆ ಎಂದ ಅಧ್ಯಕ್ಷ ರೋಶನ್ ಅವರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಭೂ ಬ್ಯಾಂಕುಗಳ ಪೈಕಿ ಸಾಲ ವಸೂಲಾತಿಯಲ್ಲು ಬಂಟ್ವಾಳ ಭೂ ಬ್ಯಾಂಕ್ ಪ್ರಥಮ ಸ್ಥಾನದಲ್ಲಿದೆ. 2024 ರ ಮಾರ್ಚ್ 31ಕ್ಕೆ ಸಂದಾಯವಾಗಬೇಕಿದ್ದ ಕ.ರಾ.ಸ.ಕೃ ಮತ್ತು ಗ್ರಾ.ಅ ಬ್ಯಾಂಕಿನ ತಗಾದೆಯನ್ನು ಸಂಪೂರ್ಣ ಮರುಪಾವತಿಸಲಾಗಿದೆ ಎಂದರು.
ರಾಜ್ಯದ 183 ಪಿಎಲ್‍ಡಿ ಬ್ಯಾಂಕುಗಳಲ್ಲಿ ಲಾಭಗಳಿಸಿದ ಕೆಲವೇ ಬ್ಯಾಂಕುಗಳ ಪೈಕಿ ಬಂಟ್ವಾಳ ಭೂ ಅಭಿವೃದ್ದಿ ಬ್ಯಾಂಕ್ ಕೂಡ ಒಂದಾಗಿದೆ. ಈ ಸಾಧನೆಗೆ ಸಹಕರಿಸಿದ ಬ್ಯಾಂಕಿನ ಎಲ್ಲಾ ರೈತ ಸದಸ್ಯರಿಗೆ ಹಾಗೂ ಸಿಬ್ಬಂದಿಗಳಿಗೆ ಅಧ್ಯಕ್ಷ ರೋಶನ್ ಡಿ ಸೋಜ ಇದೇ ವೇಳೆ ಕೃತಜ್ಞತೆ ಸಲ್ಲಿಸಿದರು.
ಮುಂದಿನ ದಿನಗಳಲ್ಲಿ ಕೃಷಿಕರ ವಿವಿಧ ಸಮಸ್ಯೆಗಳ ಬಗ್ಗೆ ಸಮಾಲೋಚನೆ ನಡೆಸಿ, ಪರಿಹರಿಸುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು ಎಂದ ಅವರು 2024-25ನೇ ಸಾಲಿನಲ್ಲಿ 15 ಕೋಟಿ ರೂಪಾಯಿ ಸಾಲ ಹಂಚಿಕೆಯ ಗುರಿ ಹೊಂದಿದೆ. ಇದನ್ನು ತಲುಪಲು ಪ್ರಯತ್ನಿಸಲಾಗುವುದು ಎಂದ ಅವರು, ಬ್ಯಾಂಕಿನ ಮಾಣಿ ಶಾಖೆಯಲ್ಲಿ ಸದಸ್ಯರಿಂದ ಠೇವಣಿಗಳನ್ನು ಸಂಗ್ರಹಿಸಿ ಈ ಯೋಜನೆಯಲ್ಲಿ ಚಿನ್ನಾಭರಣ ಮೇಲಿನ ಸಾಲ ಹಾಗೂ ರೈತರ ಬೇಡಿಕೆಗೆ ಅನುಗುಣವಾಗಿ ವಿವಿಧ ಯೋಜನೆಗಳಲ್ಲಿ ಕೃಷಿಯೇತರ ಸಾಲಗಳನ್ನು ವಿತರಿಸಲಾಗುತ್ತಿದೆ ಎಂದರು.
ಬ್ಯಾಂಕ್ ನಿರ್ದೇಶಕರುಗಳಾದ ಲಿಂಗಪ್ಪ ಪೂಜಾರಿ, ವಿಜಯಾನಂದ, ಸುಂದರ ಪೂಜಾರಿ, ಲೋಲಾಕ್ಷಿ, ಲತಾ, ಚಂದ್ರಹಾಸ ಕರ್ಕೇರ, ಕೆ ಸಂಜೀವ ಪೂಜಾರಿ ಬೊಳ್ಳಾಯಿ, ಹೊನ್ನಪ್ಪ ನಾಯ್ಕ್ ಭಾಗವಹಿಸಿದ್ದರು.
ಇದೇ ವೇಳೆ ಬ್ಯಾಂಕಿನ ಸೇವೆಯಿಂದ ನಿವೃತ್ತರಾದ ಸಿಬ್ಬಂದಿ ಕಸ್ತೂರಿ ಅವರನ್ನು ಸನ್ಮಾನಿಸಿ ಬೀಳ್ಕೋಡಲಾಯಿತು.
ಬ್ಯಾಂಕ್ ಉಪಾಧ್ಯಕ್ಷ ಚಂದ್ರಶೇಖರ ಬಂಗೇರ ಸ್ವಾಗತಿಸಿ, ವ್ಯವಸ್ಥಾಪಕ ಪದ್ಮನಾಭ ಜಿ ವರದಿ ವಾಚಿಸಿ, ಲೆಕ್ಕಪತ್ರ ಮಂಡಿಸಿದರು. ನಿರ್ದೇಶಕ ರಾಜೇಶ್ ಕುಮಾರ್ ವಂದಿಸಿದರು.
0 comments:
Post a Comment