ಬೊಳ್ಳಾಯಿ ಜಂಕ್ಷನ್ನಿನಲ್ಲಿ ಕಂಡು ಬಂದಿದೆ ಹೀಗೊಂದು ಸೌಹಾರ್ದತೆ ಉಳಿಸುವ ಸನ್ನಿವೇಶ : ಈದ್ ಮಿಲಾದ್ ಸಂದರ್ಭ ಪಣೋಲಿಬೈಲಿನಲ್ಲಿ ಹಿಂದೂ ಯುವಕರಿಂದಲೂ ಸಿಹಿತಿಂಡಿ ವಿತರಣೆ
ಬಂಟ್ವಾಳ, ಆಗಸ್ಟ್ 28, 2024 (ಕರಾವಳಿ ಟೈಮ್ಸ್) : ಕೋಮು ಸೌಹಾರ್ದತೆಗೆ ಸರಕಾರ ಹಾಗೂ ನಾಡಿನ ಸಂಘ-ಸಂಸ್ಥೆಗಳು ಎಷ್ಟೇ ಕ್ರಮ ಕೈಗೊಂಡರೂ ಕ್ಷುಲ್ಲಕ ವಿಚಾರಗಳಿಗೆ ಸಂಬಂಧಿಸಿ ಕೂಡಾ ವಿಘ್ನ ಸಂತೋಷಿಗಳು ಕೋಮು ಸೌಹಾರ್ದ ಕೆಡಿಸುವ ಹುನ್ನಾರ ನಡೆಸುತ್ತಲೇ ಇರುವುದರಿಂದ ಸಹಜವಾಗಿ ದಕ್ಷಿಣ ಕನ್ನಡ ಜಿಲ್ಲೆ ಕೋಮು ಸೂಕ್ಷ್ಮ ಪ್ರದೇಶವಾಗಿ ಗುರುತಿಸಿಕೊಂಡು ಬರುತ್ತಲೇ ಇದೆ.
ಈ ಮಧ್ಯೆ ಅಲ್ಲಲ್ಲಿ ಕೋಮು ಸೌಹಾರ್ದತೆಗೆ ಸಾಕ್ಷಿಯಾಗುತ್ತಿರುವ ಘಟನೆಗಳು ವರದಿಯಾಗುವ ಮೂಲಕ ಈ ಜಿಲ್ಲೆಯ ಬಹುಸಂಖ್ಯಾತ ಜನ ಇನ್ನೂ ಸೌಹಾರ್ದ ವಾತಾವರಣ ಬಯಸುವವರು ಎಂಬುದೂ ಸಾಬೀತಾಗುತ್ತಲೇ ಇದೆ. ಅಂತಹದ್ದೇ ಕೋಮು ಸೌಹಾರ್ದತೆ ಸಾರುವ ಘಟನೆ ಮಂಗಳವಾರ ತಾಲೂಕಿನ ಸಜಿಪಮೂಡ ಗ್ರಾಮದ ಬೊಳ್ಳಾಯಿ ಜಂಕ್ಷನ್ನಿನಲ್ಲಿ ಕಂಡು ಬಂತು.
ಇಲ್ಲಿ ನಡೆದ ಶ್ರೀ ಕೃಷ್ಣ ಜನ್ಮಾಷ್ಠಮಿ ಕಾರ್ಯಕ್ರಮದ ಪ್ರಯುಕ್ತ ನಾಡಿನ ಹೃದಯ ಭಾಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಮೆರವಣಿಗೆಯಲ್ಲಿ ಸಾಗಿ ಬಂದ ಹಿಂದೂ ಬಾಂಧವರಿಗೆ ಬೊಳ್ಳಾಯಿ ಪರಿಸರದ ಮುಸ್ಲಿಂ ಬಾಂಧವರು ಪಾನೀಯ ವಿತರಿಸಿ ನಾಡಿನ ಸೌಹಾರ್ದತೆ ನೆಲೆ ನಿಲ್ಲಿಸುವ ಪ್ರಯತ್ನ ನಡೆಸಿದ್ದಾರೆ.
ಬೊಳ್ಳಾಯಿ ಊರಿನ ಸೌಹಾರ್ದ ಪರಂಪರೆ ಇಂದು ನಿನ್ನೆಯದಲ್ಲ. ಹಲವು ವರ್ಷಗಳಿಂದ ಇದೇ ರೀತಿ ನಡೆದು ಬರುತ್ತಿದೆ ಎನ್ನುವ ಸ್ಥಳೀಯರು ಬೊಳ್ಳಾಯಿಯ ಮುಸ್ಲಿಂ ಸಹೋದರರು ಪ್ರತೀ ವರ್ಷವು ಶ್ರೀ ಕೃಷ್ಣ ಜನ್ಮಾಷ್ಠಮಿಯ ಮೆರವಣಿಗೆಯ ಸಂದರ್ಭದಲ್ಲಿ ಪಾನಕ ವಿತರಣೆ ಎಂಬ ಕಾರ್ಯಕ್ರಮ ಹಮ್ಮಿಕೊಂಡು ಸಿಹಿ ಬಿಸಿ ಪಾನೀಯ ಹಾಗೂ ತಂಪು ಪಾನೀಯವನ್ನು ನಿರಂತರವಾಗಿ ವಿತರಿಸಿ ಈ ನಾಡಿನ ಸೌಹಾರ್ದತೆಯನ್ನು ಎತ್ತಿ ಹಿಡಿಯುತಿದ್ದಾರೆ ಎನ್ನುತ್ತಾರೆ. ಇಲ್ಲಿನ ಜನರ ಸೌಹಾರ್ದ ನಡೆಗೆ ಸ್ಥಳೀಯವಾಗಿ ಪೆÇಲೀಸ್ ಇಲಾಖೆ ಹಾಗೂ ಸಾರ್ವಜನಿಕರು ಮೆಚ್ಚುಗೆ ಯ ಮಾತುಗಳನ್ನಾಡುತ್ತಾರೆ.
ಬೊಳ್ಳಾಯಿಯ ರಿಕ್ಷಾ ಚಾಲಕ ಮಾಲಕರು ಕೂಡಾ ಈ ಬಾರಿ ಈ ಒಂದು ಸೌಹಾರ್ದ ಕಾರ್ಯಕ್ರಮದಲ್ಲಿ ಕೈ ಜೋಡಿಸಿ ತಮ್ಮ ಸೌಹಾರ್ದಕ್ಕೆ ತಮ್ಮ ಕೊಡುಗೆಯನ್ನೂ ನೀಡಿದ್ದಾರೆ. ಕಾರ್ಯಕ್ರಮ ಕೊನೆಯಲ್ಲಿ ಪಾನಕ ವಿತರಿಸಿದ ಮುಸ್ಲಿಂ ಯುವಕರೇ ಪರಿಸರವನ್ನು ಸ್ವಚ್ಛಗೊಳಿಸುವ ಮೂಲಕ ಶುಚಿತ್ವಕ್ಕೂ ಮಹತ್ವ ನೀಡಿದ್ದಾರೆ.
ಈದ್ ಮಿಲಾದ್ ಹಬ್ಬದ ಮೆರವಣಿಗೆ ಸಂದರ್ಭ ಪಣೋಲಿಬೈಲಿನಲ್ಲಿ ಇಲ್ಲಿನ ಶ್ರೀ ಕೃಷ್ಣ ಯುವಕ ಮಂಡಲದ ಹಿಂದೂ ಬಾಂಧವರು ಕೂಡಾ ಪ್ರತಿ ವರ್ಷ ಸಿಹಿ ತಿಂಡಿ ವಿತರಿಸಿ ಸೌಹಾರ್ದತೆ ಮೆರೆಯುತ್ತಿರುವ ಸನ್ನಿವೇಶವನ್ನು ಈ ಸಂದರ್ಭ ಸ್ಮರಿಸಿಕೊಳ್ಳಬಹುದು.
0 comments:
Post a Comment