ಬಂಟ್ವಾಳ, ಆಗಸ್ಟ್ 12, 2024 (ಕರಾವಳಿ ಟೈಮ್ಸ್) : ಇಲ್ಲಿನ ಪುರಸಭಾ ವ್ಯಾಪ್ತಿಯ ಹೃದಯ ಪಟ್ಟಣವಾಗಿರುವ ಬಿ ಸಿ ರೋಡು ಪೇಟೆಯಲ್ಲಿ ಪುರಸಭಾ ಕುಡಿಯುವ ನೀರಿನ ಪೈಪ್ ಲೈನ್ ಒಡೆದು ತಿಂಗಳುಗಳಿಂದ ನೀರು ಪೋಲಾಗುತ್ತಿದೆ. ಇಲ್ಲಿನ ಗಣೇಶ್ ಮೆಡಿಕಲ್ ಎದುರು ಭಾಗದಲ್ಲಿ ಕೆಲ ತಿಂಗಳ ಹಿಂದೆ ಯಾರಿಗೋ ಪೈಪ್ ಲೈನ್ ಸಂಪರ್ಕ ಕಲ್ಪಿಸುವ ವೇಳೆ ಇಲ್ಲಿನ ಪೈಪ್ ಡ್ಯಾಮೇಜ್ ಆಗಿ ಕುಡಿಯುವ ನೀರು ಪೋಲಾಗಲು ಆರಂಭಗೊಂಡು ತಿಂಗಳುಗಳೇ ಕಳೆದಿವೆ ಎನ್ನುತ್ತಾರೆ ಸ್ಥಳೀಯರು.
ಕಳೆದೆರಡು ತಿಂಗಳಿನಿಂದ ನಿರಂತರ ಮಳೆ ಸುರಿಯುತ್ತಿದ್ದ ಹಿನ್ನಲೆಯಲ್ಲಿ ಇಲ್ಲಿನ ಪೈಪ್ ಲೈನ್ ಒಡೆದು ನೀರು ಪೋಲಾಗುತ್ತಿರುವುದು ಸಾರ್ವಜನಿಕರ ಗಮನಕ್ಕೆ ಬಂದಿರಲಿಲ್ಲ. ಇದೀಗ ಮಳೆ ನಿಂತು ಬಿಸಿಲು ಬಂದು ನೆಲ-ರಸ್ತೆ ಎಲ್ಲವೂ ಒಣಗಿದ್ದು, ಪರಿಣಾಮ ಪೈಪ್ ಲೈನ್ ಒಡೆದು ನೀರು ಪೋಲಾಗುತ್ತಿರುವ ದೃಶ್ಯ ಕಂಡು ಬರುತ್ತಿದ್ದು, ಸಾರ್ವಜನಿಕ ರಸ್ತೆಯಲ್ಲೇ ಈ ಪೋಲಾಗುತ್ತಿರುವ ನೀರು ಹರಿಯುತ್ತಿದೆ. ಈ ಬಗ್ಗೆ ಸ್ಥಳೀಯರು ಸಾಕಷ್ಟು ಬಾರಿ ಪುರಸಭಾ ಸದಸ್ಯರು, ಅಧಿಕಾರಿಗಳು ಹಾಗೂ ಪ್ಲಂಬರುಗಳ ಗಮನಕ್ಕೆ ತಂದರೂ ಫಲಿತಾಂಶ ಮಾತ್ರ ಶೂನ್ಯ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.
ಇನ್ನಾದರೂ ಪುರಸಭಾಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ಬಿ ಸಿ ರೋಡಿನ ರಾಜ ರಸ್ತೆಯಲ್ಲೆ ತಿಂಗಳುಗಳಿಂದ ಪೋಲಾಗಿ ಹರಿಯುತ್ತಿರುವ ಕುಡಿಯುವ ನೀರಿಗೆ ಸೂಕ್ತ ಪರಿಹಾರ ಕಲ್ಪಿಸುವಂತೆ ಸ್ಥಳೀಯ ನಾಗರಿಕರು ಆಗ್ರಹಿಸಿದ್ದಾರೆ.
0 comments:
Post a Comment