ಮಂಗಳೂರು, ಆಗಸ್ಟ್ 20, 2024 (ಕರಾವಳಿ ಟೈಮ್ಸ್) : ನಗರದ ನೆಹರು ಮೈದಾನದಲ್ಲಿ ಆಗಸ್ಟ್ 14 ರಂದು ನಡೆದ ಫುಟ್ಬಾಲ್ ಪಂದ್ಯಾಟದ ವೇಳೆ ವಿದ್ಯಾರ್ಥಿಗಳ ತಂಡದ ಮಧ್ಯೆ ಉಂಟಾದ ಮನಸ್ತಾಪ ಬಳಿಕ ವಿಕೋಪಕ್ಕೆ ತಿರುಗಿ ಆಗಸ್ಟ್ 19 ರಂದು ವಿದ್ಯಾರ್ಥಿಗಳ ಒಂದು ಗುಂಪು ಮತ್ತೊಂದು ಗುಂಪಿನ ಮೂವರು ವಿದ್ಯಾರ್ಥಿಗಳನ್ನು ಅಪಹರಿಸಿ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ವರದಿಯಾಗಿದೆ. ಈ ಬಗ್ಗೆ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಇದೀಗ ಪ್ರಕರಣ ದಾಖಲಾಗಿದ್ದು, ಈ ಸಂಬಂಧ ಈಗಾಗಲೇ ಇಬ್ಬರು ವಿದ್ಯಾರ್ಥಿಗಳನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಕೈಗೊಂಡಿದ್ದು, ಉಳಿದವರ ಬಂಧನಕ್ಕೆ ಕ್ರಮ ಕೈಗೊಂಡಿದ್ದಾರೆ.
ಆಗಸ್ಟ್ 14ರಂದು ನಗರದ ನೆಹರು ಮೈದಾನದಲ್ಲಿ ಯೆನೆಪೆÇೀಯ ಕಾಲೇಜು ಫುಟ್‍ಬಾಲ್ ತಂಡ ಮತ್ತು ಸೈಂಟ್ ಅಲೋಶಿಯಸ್ ಕಾಲೇಜು ಫುಟ್‍ಬಾಲ್ ತಂಡದ ನಡುವಿನ ಪಂದ್ಯದಲ್ಲಿ ಯೆನೆಪೆÇಯ ತಂಡ ಜಯಗಳಿಸಿತ್ತು. ಪಂದ್ಯದ ವೇಳೆ ನಡೆದ ವಿವಾದ, ಮಾತಿನ ಚಕಮಕಿ ಬಳಿಕ ಮಾರಣಾಂತಿಕ ಹಲ್ಲೆವರೆಗೂ ಮುಂದುವರಿದಿದೆ ಎನ್ನಲಾಗಿದೆ.
ಸೋಮವಾರ ಸಂಜೆ ಸುಮಾರು 6:15 ರ ವೇಳೆಗೆ ಪಾಂಡೇಶ್ವರ ಫೆÇೀರಂ ಮಾಲ್ ಬಳಿ ದೂರುದಾರ 17 ವರ್ಷದ ಅಪ್ರಾಪ್ತ ಬಾಲಕ, ಯೆನೆಪೆÇೀಯ ಕಾಲೇಜಿನ ವಿದ್ಯಾರ್ಥಿ, 18-19 ವರ್ಷ ವಯಸ್ಸಿನ ವ್ಯಕ್ತಿಗಳ ಗುಂಪೆÇಂದು ಕರೆದುಕೊಂಡು ಹೋಗಿದ್ದಾರೆ. ಆರೋಪಿ ವಿದ್ಯಾರ್ಥಿಗಳನ್ನು ದಿಯಾನ್, ತಸ್ಲಿಮ್, ಸಲ್ಮಾನ್ ಮತ್ತು 17 ವರ್ಷ ವಯಸ್ಸಿನ ಇತರ ಇಬ್ಬರು ಅಪ್ರಾಪ್ತ ವ್ಯಕ್ತಿಗಳು ಎಂದು ಗುರುತಿಸಲಾಗಿದೆ. ಆರೋಪಿಗಳು ಸಂತ್ರಸ್ತ ವಿದ್ಯಾರ್ಥಿಗಳನ್ನು ಕಾರಿನಲ್ಲಿ ಕರೆದೊಯ್ದು ಕೈ ಮತ್ತು ಕಾಲಿನಿಂದ ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ. ನಂತರ ಸಂತ್ರಸ್ತರನ್ನು ಮಹಾಕಾಳಿ ಪಡ್ಡು ಮತ್ತು ಜಪ್ಪು ಮಹಾಕಾಳಿ ಪಡ್ಪು ಮಸೀದಿ ಬಳಿ ಸೇರಿದಂತೆ ವಿವಿಧ ಸ್ಥಳಗಳಿಗೆ ಕರೆದೊಯ್ದು ಅಲ್ಲಿ ಅವರ ಮೇಲೆ ಮತ್ತಷ್ಟು ಹಲ್ಲೆ ನಡೆಸಿದ್ದಾರೆ. ಆರೋಪಿಗಳು ಸಂತ್ರಸ್ತರ ಮೇಲೆ ಹಲ್ಲೆ ನಡೆಸುವಾಗ ಮೊಬೈಲ್ ಚಿತ್ರೀಕರಣವನ್ನೂ ನಡೆಸಿದ್ದಾರೆ.
ಸಂತ್ರಸ್ತ ವಿದ್ಯಾರ್ಥಿಗಳು ಯೆನಪೋಯ ಹಾಗೂ ಮಾತಾ ಸಂಸ್ಥೆಯ ವಿದ್ಯಾರ್ಥಿಗಳು ಎನ್ನಲಾಗಿದ್ದು, ಆರೋಪಿಗಳ ಪೈಕಿ ದಿಯಾನ್ ಮತ್ತು 17 ವರ್ಷದ ಅಪ್ರಾಪ್ತ ವಿದ್ಯಾರ್ಥಿ ಸೇಂಟ್ ಅಲೋಶಿಯಸ್ ಕಾಲೇಜಿನ ವಿದ್ಯಾರ್ಥಿಗಳು ಮತ್ತು 17 ವರ್ಷದ ಇನ್ನೊಬ್ಬ ಅಪ್ರಾಪ್ತ ಹುಡುಗ ಮಾತಾ ಸಂಸ್ಥೆಯ ವಿದ್ಯಾರ್ಥಿ ಎಂದು ಗುರುತಿಸಲಾಗಿದೆ. ಸಂತ್ರಸ್ತರನ್ನು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಸ್ಥಿರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಂತ್ರಸ್ತ ವಿದ್ಯಾರ್ಥಿ ನೀಡಿದ ದೂರಿನಂತೆ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 162/2024 ಕಲಂ 109, 115(2), 118(1), 127(2), 137(2), 189(2), 190, 191 (1), 191(3), 351(2), 352 ಬಿ ಎನ್ ಎಸ್, 2023 ರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ದಿಯಾನ್ ಹಾಗೂ ಸಲ್ಮಾನ್ ಎಂಬಿಬ್ಬರನ್ನು ವಶಕ್ಕೆ ಪಡೆಯಲಾಗಿದ್ದು, ಉಳಿದ ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
ವಿದ್ಯಾರ್ಥಿಗಳ ಮೇಲಿನ ಮಾರಣಾಂತಿಕ ಹಲ್ಲೆ ವೀಡಿಯೋ ಇದೀಗ ಸಾಮಾಜಿಕ ಜಾಲ ತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ವಿದ್ಯಾರ್ಥಿಗಳ ಮೇಲೆ ವಿದ್ಯಾರ್ಥಿಗಳೆನಿಸಿಕೊಂಡವರೇ ಮನಸೋ ಇಚ್ಛೆ ಹಲ್ಲೆ ನಡೆಸುತ್ತಿರುವ ದೃಶ್ಯ ಕಂಡು ಬರುತ್ತಿದೆ. ಸಂತ್ರಸ್ತರನ್ನು ಇನ್ನಿಲ್ಲದಂತೆ ಹಿಂಸಿಸುತ್ತಿದ್ದು, ಕೈ-ಕಾಲು ತಿರುಗಿಸುವುದು, ಕಾಲಿನಿಂದ ಒದೆಯುವುದು, ಮುಖ ಸೇರಿದಂತೆ ದೇಹದ ಸಾಕಷ್ಟು ಭಾಗಗಳಿಗೆ ರಕ್ತ ಬರುವಂತೆ ಹೊಡೆಯುತ್ತಿರುವುದು, ಕ್ಷಮೆ ಕೇಳುವಂತೆ ಬಲವಂತಪಡಿಸಿ ಬಸ್ಕಿ ತೆಗೆಸುವುದು ಸೇರಿದಂತೆ ಎಲ್ಲ ರೀತಿಯಲ್ಲಿಯೂ ರಾಕ್ಷಸೀ ಪ್ರವೃತ್ತಿಗಳೇ ವೀಡಿಯೋದಲ್ಲಿ ಕಂಡು ಬರುತ್ತಿದೆ. ಸಂತ್ರಸ್ತರು ಹಾಗೂ ಹಲ್ಲೆಕೋರ ವಿದ್ಯಾರ್ಥಿಗಳು ಎರಡೂ ತಂಡ ಕೂಡಾ ಒಂದೇ ಸಮುದಾಯಕ್ಕೆ ಸೇರಿರುವುದರಿಂದ ಪ್ರಕರಣ ಅಷ್ಟೊಂದು ಗಂಭೀರತೆ ಪಡೆದುಕೊಂಡಂತೆ ಕಂಡು ಬರುತ್ತಿಲ್ಲ. ಭಿನ್ನ ಸಮುದಾಯವೇನಾದರೂ ಆಗಿರುತ್ತಿದ್ದರೆ ಇದೀಗ ಸೂಕ್ಷ್ಮ ಜಿಲ್ಲೆಯಾಗಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಏನೇನೋ ಆಗುತ್ತಿತ್ತು ಎಂದು ಜನ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿದ್ಯೆ ಕಲಿಯಲು ಕಳಿಸಿರುವ ವಿದ್ಯಾರ್ಥಿಗಳು ಈ ರೀತಿ ಅಮಾನುಷವಾಗಿ ವರ್ತಿಸಲು ಪ್ರೇರಣೆಯಾದರೂ ಏನು ಎಂಬ ಪ್ರಶ್ನೆ ನಾಗರಿಕ ಸಮಾಜದಲ್ಲಿ ಕೇಳಿ ಬರುತ್ತಿದೆ. ಇಂತಹ ಘಟನೆಗಳ ಬಗ್ಗೆ ಪೊಲೀಸರು ಕಠಿಣ ಕ್ರಮ ಕೈಗೊಳ್ಳುವುದರ ಜೊತೆಗೆ ವಿದ್ಯಾರ್ಥಿ ಪೋಷಕರು ಹಾಗೂ ವಿದ್ಯಾ ಸಂಸ್ಥೆಗಳು ಇಂತಹ ವಿದ್ಯಾರ್ಥಿಗಳನ್ನು ಸರಿ ದಾರಿಗೆ ತರಲು ಹಾಗೂ ಇಂತಹ ಘಟನೆಗಳು ಇತರ ವಿದ್ಯಾರ್ಥಿಗಳ ಮೇಲೆ ಋಣಾತ್ಮಕ ಪರಿಣಾಮ ಬೀರದಂತಾಗಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬ ಅಭಿಪ್ರಾಯಗಳು ಕೂಡಾ ನಾಗರಿಕ ಸಮಾಜದಿಂದ ಕೇಳಿ ಬರುತ್ತಿದೆ.
0 comments:
Post a Comment