ಭೌತಿಕ ಅಂಕಪಟ್ಟಿ ನೀಡದೆ ಕೇವಲ ಡಿಜಿಟಲ್ ಅಂಕಪಟ್ಟಿ ನೀಡುತ್ತಿರುವ ಮಂಗಳೂರು ವಿವಿ ಕ್ರಮಕ್ಕೆ ವಿದ್ಯಾರ್ಥಿಗಳ ಅಸಮಾಧಾನ - Karavali Times ಭೌತಿಕ ಅಂಕಪಟ್ಟಿ ನೀಡದೆ ಕೇವಲ ಡಿಜಿಟಲ್ ಅಂಕಪಟ್ಟಿ ನೀಡುತ್ತಿರುವ ಮಂಗಳೂರು ವಿವಿ ಕ್ರಮಕ್ಕೆ ವಿದ್ಯಾರ್ಥಿಗಳ ಅಸಮಾಧಾನ - Karavali Times

728x90

21 August 2024

ಭೌತಿಕ ಅಂಕಪಟ್ಟಿ ನೀಡದೆ ಕೇವಲ ಡಿಜಿಟಲ್ ಅಂಕಪಟ್ಟಿ ನೀಡುತ್ತಿರುವ ಮಂಗಳೂರು ವಿವಿ ಕ್ರಮಕ್ಕೆ ವಿದ್ಯಾರ್ಥಿಗಳ ಅಸಮಾಧಾನ

ಮಂಗಳೂರು, ಆಗಸ್ಟ್ 21, 2024 (ಕರಾವಳಿ ಟೈಮ್ಸ್) : ಮಂಗಳೂರು ವಿಶ್ವವಿದ್ಯಾನಿಲಯಲ್ಲಿ  ವ್ಯಾಸಂಗ ಮಾಡಿದ ಮತ್ತು ಮಾಡುತ್ತಿರುವ 2022-23ನೇ ಸಾಲಿನ ನಂತರದ ವಿದ್ಯಾರ್ಥಿಗಳಿಗೆ ವಿಶ್ವ ವಿದ್ಯಾನಿಲಯದ ಕಡೆಯಿಂದ ದೊರಕಬೇಕಾದ ಭೌತಿಕ ಅಂಕಗಳನ್ನು ಹೊಂದಿದ ಅಂಕಪಟ್ಟಿ ದೊರೆಯುತ್ತಿಲ್ಲ. ಈ ವಿಚಾರವಾಗಿ ಉಪ ಕುಲಪತಿಗಳನ್ನು ಕೇಳಿದಾಗ, ಪ್ರಸ್ತುತ ಭೌತಿಕ ಅಂಕಪಟ್ಟಿಗಳನ್ನು ನೀಡದಿರುವಂತೆ ಸರಕಾರದ ಆದೇಶವಿರುವುದಾಗಿಯೂ, ಈ ವಿಚಾರದಲ್ಲಿ ಬದಲಾವಣೆ ತರಲು ಸರಕಾರಕ್ಕೆ ಮಾತ್ರ ಸಾಧ್ಯವಿರುದಾಗಿಯೂ ಅವರು ತಿಳಿಸಿರುತ್ತಾರೆ. ಆದರೆ ಈಗಾಗಲೇ ಸೆಮಿಸ್ಟರ್ ಒಂದಕ್ಕೆ 230/- ರೂಪಾಯಿಯಂತೆ ಅಂಕಪಟ್ಟಿ ಶುಲ್ಕವನ್ನು ವಿಶ್ವವಿದ್ಯಾಲಯಕ್ಕೆ ವಿದ್ಯಾರ್ಥಿಗಳು ಪಾವತಿಸಿರುತ್ತಾರೆ. ಪ್ರತಿ ವಿದ್ಯಾರ್ಥಿಗಳಿಂದ ಶುಲ್ಕ ಭರಿಸಿಕೊಂಡ ನಂತರವೂ ಸರಿಯಾದ ಅಂಕಪಟ್ಟಿ ದೊರೆಯುತ್ತಿಲ್ಲ ಎಂದು ವಿದ್ಯಾರ್ಥಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ಸುದ್ದಿಗಾರರೊಂದಿಗೆ ಈ ಬಗ್ಗೆ ಅಭಿಪ್ರಾಯ ಹಂಚಿಕೊಂಡ ವಿದ್ಯಾರ್ಥಿ ಪ್ರಮುಖರು, ಪ್ರಸ್ತುತ ಅಂಕಪಟ್ಟಿಗಳನ್ನು ಸರಕಾರದ ಹಲವಾರು ದಾಖಲೆಗಳನ್ನು ಹೊಂದಿರುವ/ ಪಡೆದುಕೊಳ್ಳಲು ಬಳಸುವ ಡಿಜಿಲಾಕರ್ ತಂತ್ರಜ್ಞಾನದ ಮೂಲಕ ಪಡೆದುಕೊಳ್ಳಲು ವಿಶ್ವವಿದ್ಯಾನಿಲಯ ಸೂಚಿಸುತ್ತದೆ. ಆದರೆ ಈ ತಂತ್ರಜ್ಞಾನವು ಹಲವಾರು ಸಮಸ್ಯೆಗಳನ್ನು ಒಳಗೊಂಡಿದ್ದು, ವಿದ್ಯಾರ್ಥಿಗಳಿಗೆ ಸರಿಯಾಗಿ ಅಂಕಪಟ್ಟಿಗಳನ್ನು ಒದಗಿಸುವಲ್ಲಿ ವಿಫಲವಾಗಿದೆ. ವಿದ್ಯಾರ್ಥಿಗಳ ಸಂಕ್ಷಿಪ್ತ ಅಂಕಗಳು, ಭಾವಚಿತ್ರ, ಸಂಬಂದಪಟ್ಟ ಅಧಿಕಾರಿಗಳ ಹಸ್ತಾಕ್ಷರ, ಪಠ್ಯ ವಿಷಯಗಳು ಮತ್ತು ಪೆÇ್ರಜೆಕ್ಟ್ ವಿಷಯಗಳು, ಮತ್ತು ಉತ್ತೀರ್ಣ-ಅನುತ್ತೀರ್ಣತೆಯ ಮಾನದಂಡಗಳನ್ನು ಹೊಂದಿಲ್ಲದ ಡಿಜಿಟಲ್ ಅಂಕಪಟ್ಟಿಗಳು ಕೇವಲ ಆನ್ಲೈನ್ ವ್ಯವಹಾರಗಳಿಗೆ ಸೀಮಿತವಾಗಿದೆ ಎಂಬ ಸೂಚನೆಯನ್ನು ಹೊಂದಿದೆ. 

ಡಿಜಿಟಲ್ ಅಂಕಪಟ್ಟಿಯಲ್ಲಿ ನಮೂದಿಸಿರುವಂತೆ ಆ ಅಂಕಪಟ್ಟಗೆ ಮಾನ್ಯತೆ ಇರುವುದಿಲ್ಲ ಹಾಗೂ ವಿಶ್ವವಿದ್ಯಾಲಯದ ಅಂಕಪಟ್ಟಿಗೂ ಡಿಜಿಟಲ್ ಅಂಕಪಟ್ಟಿಗೂ ವ್ಯತ್ಯಾಸ ಇರುವ ಸಾಧ್ಯತೆ ಇದೆ ಎಂಬ ಸ್ಪಷ್ಟ ಸೂಚನೆಗಳನ್ನು ನೀಡಿರುತ್ತಾರೆ. ಇಂತಹ ಹತ್ತು ಹಲವು ದೋಷಗಳನ್ನು ಒಳಗೊಂಡ ಡಿಜಿಟಲ್ ಅಂಕಪಟ್ಟಿಗಳನ್ನು ಯಾವುದೇ ಕಂಪೆನಿಗಳು ಉದ್ಯೋಗಕ್ಕೆ ಸಂಬಂಧಿಸಿದ ಪರಿಶೀಲನೆ ವೇಳೆ ಮಾನ್ಯ ಮಾಡುತ್ತಿಲ್ಲ, ವಿಶೇಷವಾಗಿ ಹೊರ ದೇಶಗಳಲ್ಲಿ ಕೆಲಸಕ್ಕೆ ಅರ್ಜಿ ಸಲ್ಲಿಸಲು ಭೌತಿಕ ಅಂಕಪಟ್ಟಿ  ಹಾಜರುಪಡಿಸುವುದು ಕಡ್ಡಾಯವಾಗಿದ್ದು ಈ ವೇಳೆ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಇಂತಹ ತೊಡಕುಗಳು ಇರುವ ಡಿಜಿಟಲ್ ಅಂಕಪಟ್ಟಿಗಳನ್ನು ಕೊಡುವ ಬದಲಾಗಿ ಈ ಹಿಂದೆ ನೀಡುತ್ತಿದ್ದ ರೀತಿಯ ಭೌತಿಕ ಅಂಕಪಟ್ಟಿಗಳನ್ನು ನೀಡುವಂತೆ ಈ ಮೂಲಕ ಸಂಬಂಧಿಸಿದ ಅಧಿಕಾರಿಗಳು ಹಾಗೂ ಸರಕಾರಕ್ಕೆ ಎಲ್ಲಾ ವಿದ್ಯಾರ್ಥಿಗಳ ಪರವಾಗಿ ವಿನಂತಿಸುವುದಾಗಿ ವಿದ್ಯಾರ್ಥಿಗಳು ತಿಳಿಸಿದ್ದಾರೆ. 

ಸುದ್ದಿಗೋಷ್ಠಿಯಲ್ಲಿ ಮಂಗಳೂರು ವಿವಿ ವಿದ್ಯಾರ್ಥಿ ಪ್ರಮುಖರಾದ ಸಲ್ಮಾನ್ ಬಂಟ್ವಾಳ, ಲೀನಾ ಮಡಿಕೇರಿ, ಮಹೇಂದ್ರ ಕಳಸ ಉಪಸ್ಥಿತರಿದ್ದರು. 

  • Blogger Comments
  • Facebook Comments

0 comments:

Post a Comment

Item Reviewed: ಭೌತಿಕ ಅಂಕಪಟ್ಟಿ ನೀಡದೆ ಕೇವಲ ಡಿಜಿಟಲ್ ಅಂಕಪಟ್ಟಿ ನೀಡುತ್ತಿರುವ ಮಂಗಳೂರು ವಿವಿ ಕ್ರಮಕ್ಕೆ ವಿದ್ಯಾರ್ಥಿಗಳ ಅಸಮಾಧಾನ Rating: 5 Reviewed By: karavali Times
Scroll to Top