ಬಂಟ್ವಾಳ, ಆಗಸ್ಟ್ 31, 2024 (ಕರಾವಳಿ ಟೈಮ್ಸ್) : ಲಾರಿ ಡಿಕ್ಕಿ ಹೊಡೆದು ಕಾರು ಚಾಲಕ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಸಜಿಪಮುನ್ನೂರು ಗ್ರಾಮದ ಮಾರ್ನಬೈಲು ಜಂಕ್ಷನ್ನಿನಲ್ಲಿ ಶನಿವಾರ ಬೆಳಿಗ್ಗೆ ಸಂಭವಿಸಿದೆ.
ಗಾಯಗೊಂಡ ಕಾರು ಚಾಲಕನನ್ನು ಮೆಲ್ಕಾರ್ ಸಮೀಪದ ಬೋಳಂಗಡಿ ನಿವಾಸಿ, ಉದ್ಯಮಿ ಎಂ ಎಚ್ ಮುಹಮ್ಮದ್ ಮುಸ್ತಫಾ (38) ಎಂದು ಹೆಸರಿಸಲಾಗಿದೆ. ಇವರು ಶನಿವಾರ ಬೆಳಿಗ್ಗೆ ತನ್ನ ಕ್ರೆಟ್ಟಾ ಕಾರಿನಲ್ಲಿ ತೆರಳುತ್ತಿದ್ದ ವೇಳೆ ಲಾರಿಯೊಂದು ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ. ಅಪಘಾತದ ತೀವ್ರತೆಗೆ ಕಾರಿನ ಮುಂಭಾಗ ತೀವ್ರ ಜಖಂಗೊಂಡಿದ್ದು, ಚಾಲಕ ಮುಸ್ತಫಾ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮುಸ್ತಫ ಅವರು ಸಜಿಪ ಕಡೆಯಿಂದ ಬರುತ್ತಿದ್ದ ವೇಳೆ ಮೆಲ್ಕಾರಿನಿಂದ ಸಜಿಪ ಕಡೆಗೆ ತೆರಳುತ್ತಿದ್ದ ಲಾರಿ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ.
ಅಪಘಾತದಿಂದ ಕಾರಿನೊಳಗೆ ಸಿಲುಕಿದ್ದ ಮುಸ್ತಫಾ ಅವರನ್ನು ತಕ್ಷಣ ಹೊರತೆಗೆದ ಸ್ಥಳೀಯರು ಬಿ ಸಿ ರೋಡಿನ ಖಾಸಗಿ ಆಸ್ಪತ್ರೆಗೆ ಸಾಗಿಸಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ.
ಬೋಳಂಗಡಿಯಲ್ಲಿ ಜಿನಸು ಅಂಗಡಿ ಹೊಂದಿರುವ ಮುಸ್ತಫಾ ಸಜಿಪ-ದೇರಾಜೆಯಲ್ಲಿ ಹಾಟ್ ಚಿಪ್ಸ್ ಎಂಬ ಬೇಕರಿ ಉದ್ಯಮವನ್ನೂ ನಡೆಸುತ್ತಿದ್ದಾರೆ. ಜಮಾಅತೆ ಇಸ್ಲಾಮೀ ಹಿಂದ್ ಪಾಣೆಮಂಗಳೂರು ಘಟಕದ ಸಕ್ರಿಯ ಕಾರ್ಯಕರ್ತರಾಗಿರುವ ಇವರು ಎಚ್ ಆರ್ ಎಸ್ ಸಹಿತ ಹಲವು ಸಾಮಾಜಿಕ ಸಂಘಟನೆಗಳಲ್ಲಿ ಸಕ್ರಿಯರಾಗಿದ್ದುಕೊಂಡು ವಿವಿಧ ಸಮಾಜ ಸೇವಾ ಕಾರ್ಯಗಳನ್ನು ನಡೆಸುತ್ತಿದ್ದಾರೆ.
0 comments:
Post a Comment