ಬಂಟ್ವಾಳ, ಆಗಸ್ಟ್ 15, 2024 (ಕರಾವಳಿ ಟೈಮ್ಸ್) : ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾದ ಮಹಾತ್ಮರುಗಳು ಇಟ್ಟ ಒಂದೊಂದು ಇಟ್ಟಿಗೆಯಿಂದ ಇಂದು ಸ್ವತಂತ್ರ ಭಾರತ ಬಲಿಷ್ಠವಾಗಿದೆ. ಅವರನ್ನು ಸ್ಮರಿಸುವ ದಿನವಾಗಿದೆ. ಬಳಿಕ ದೇಶದ ಸ್ಥಿರತೆ, ನ್ಯಾಯ, ನೀತಿಯಿಂದ ಬಲಿಷ್ಠವಾಗಲು ಕಾರಣಕರ್ತರಾದ ಸಂವಿಧಾನ ಶಿಲ್ಪಿ ಡಾ ಅಂಬೇಡ್ಕರ್ ಅವರನ್ನು ಸ್ಮರಿಸುವ ದಿನವಾಗಿದೆ ಎಂದು ಬಂಟ್ವಾಳ ತಹಶೀಲ್ದಾರ್ ಡಿ ಅರ್ಚನಾ ಭಟ್ ಹೇಳಿದರು.
ಬಂಟ್ವಾಳ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಆಶ್ರಯದಲ್ಲಿ ಗುರುವಾರ ಬಿ ಸಿ ರೋಡಿನ ಮಿನಿ ವಿಧಾನಸೌಧ ಆವರಣದಲ್ಲಿ ನಡೆದ ಸ್ವಾತಂತ್ರ್ಯೋತ್ಸವ ಆಚರಣೆಯ ಧ್ವಜಾರೋಹಣಗೈದ ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇಂದು ನಾವು ದೇಶದ ಸ್ವಾತಂತ್ರ್ಯಕ್ಕಾಗಿ ಬಲಿದಾನ, ಕಷ್ಟಗಳನ್ನು ಅನುಭವಿಸುವ ಅಗತ್ಯವಿಲ್ಲ. ದೇಶದ ಸೈನಿಕರು ಗಡಿ ಕಾಯುವ ಮೂಲಕ ದೇಶವನ್ನು ಸುರಕ್ಷಿತವಾಗಿ ಕಾಪಾಡಿಕೊಂಡು ಬರುತ್ತಿದ್ದರೆ, ನಾವು ದೇಶದ ಕಾನೂನು, ನಿಯಮಗಳಿಗೆ ಬದ್ದತೆ ಪ್ರದರ್ಶಿಸುವ ಮೂಲಕ ದೇಶದ ಗೌರವವನ್ನು ಕಾಪಾಡಬೇಕು. ಸ್ವಚ್ಚತೆ ಕಾಪಾಡುವುದು, ಟ್ರಾಫಿಕ್ ನಿಯಮ ಪಾಲನೆ ಮಾಡುವುದು ಸೇರಿದಂತೆ ಕಾನೂನು-ನಿಯಮಗಳಿಗೆ ಬದ್ದತೆ ತೋರುವುದು ಎಲ್ಲವೂ ದೇಶಪ್ರೇಮವೇ ಆಗಿದೆ ಎಂದರು.
ದೇಶದ ಅಭಿವೃದ್ದಿ ಸರಕಾರದ ಕೆಲಸ ಎಂದು ಭಾವಿಸದೆ ಅದು ನಮ್ಮೆಲ್ಲರ ಕರ್ತವ್ಯವೂ ಹೌದು ಎಂದು ಅರಿತುಕೊಂಡು ಎಲ್ಲರ ಭಾಗವಹಿಸುವಿಕೆಯಿಂದ ಪ್ರಗತಿ ಸಾಧ್ಯ. ಜೊತೆಗೆ ಪರಿಸರ ಕಾಪಾಡುವುದೂ ನಮ್ಮೆಲ್ಲರ ಕರ್ತವ್ಯ ಆಗಬೇಕು ಎಂದವರು ಹೇಳಿದರು.
ಬಂಟ್ವಾಳ ಶಾಸಕ ಯು ರಾಜೇಶ್ ನಾಯಕ್ ಅಧ್ಯಕ್ಷತೆ ವಹಿಸಿದ್ದರು. ಸಿದ್ದಕಟ್ಟೆ ಸರಕಾರಿ ಶಾಲಾ ವಿದ್ಯಾರ್ಥಿನಿ ಕುಮಾರಿ ಲಿಖಿತ ಅವರು ಸ್ವಾತಂತ್ರ್ಯೋತ್ಸವ ಸಂದೇಶ ನೀಡಿದರು. ಬುಡಾ ಅಧ್ಯಕ್ಷ ಬೇಬಿ ಕುಂದರ್, ಬಂಟ್ವಾಳ ನಗರ ಪೊಲೀಸ್ ಠಾಣಾ ಪೊಲೀಸ್ ಇನ್ಸ್ ಪೆಕ್ಟರ್ ಅನಂತ ಪದ್ಮನಾಭ ಮೊದಲಾದವರು ಮುಖ್ಯ ಅತಿಥಿಯಾಗಿದ್ದರು.
ಇದೇ ವೇಳೆ ತಾಲೂಕಿನಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆಯಿಂದ ನೀಡಲ್ಪಟ್ಟ ಲ್ಯಾಪ್ ಟಾಪ್ ವಿತರಿಸಲಾಯಿತು. ಅತೀ ಹೆಚ್ಚು ಅಂಕ ಗಳಿಸಿದ ಪಿಯುಸಿ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಪುರಸಭಾ ವ್ಯಾಪ್ತಿಯಲ್ಲಿ ಸ್ವಚ್ಛತೆ ಕಾರ್ಯನಿರ್ವಹಿಸುವ ಪೌರ ಕಾರ್ಮಿಕರನ್ನು ಸನ್ಮಾನಿಸಲಾಯಿತು. ತಾಲೂಕು ಮಟ್ಟದ ವಿವಿಧ ಇಲಾಖಾಧಿಕಾರಿಗಳು ಭಾಗವಹಿಸಿದ್ದರು.
ಇದಕ್ಕೂ ಮುನ್ನ ಪೊಲೀಸ್ ಇಲಾಖೆ, ಗೃಹರಕ್ಷಕ ದಳ ಹಾಗೂ ವಿವಿಧ ಶಾಲಾ ವಿದ್ಯಾರ್ಥಿಗಳಿಂದ ಆಕರ್ಷಕ ಪಥಸಂಚಲನ ನಡೆಯಿತು. ಬಳಿಕ ವಿವಿಧ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು.
0 comments:
Post a Comment