ಬಂಟ್ವಾಳ, ಆಗಸ್ಟ್ 19, 2024 (ಕರಾವಳಿ ಟೈಮ್ಸ್) : ರಾಜ್ಯದ ಬಡವರ, ಶೋಷಿತರ, ಮರ್ದಿತರ ಪರವಾಗಿ ನಿರಂತರ ಕಾರ್ಯಕ್ರಮಗಳನ್ನು ಘೋಷಿಸಿ ಅದನ್ನು ಚಾಚೂ ತಪ್ಪದೆ ಅನುಷ್ಠಾನಗೊಳಿಸಿ ಜನರ ಹೃದಯ ಗೆದ್ದಿರುವ ಧೀಮಂತ ನಾಯಕ, ಸಿಎಂ ಸಿದ್ದರಾಮಯ್ಯ ವಿರುದ್ದ ಬಿಜೆಪಿ ಎಷ್ಟೇ ಬಲೆ ಹೆಣೆದರೂ ಅದರಲ್ಲಿ ಯಶಸ್ವಿಯಾಗುವುದಿಲ್ಲ. ಬಿಜೆಪಿ ಜೊತೆ ಕೇಂದ್ರ ಸರಕಾರ, ರಾಜ್ಯಪಾಲ ಹಾಗೂ ಅಪಪ್ರಚಾರಗಳಿದ್ದರೆ ಸಿದ್ದರಾಮಯ್ಯ ಜೊತೆ ರಾಜ್ಯದ ಕೋಟ್ಯಂತರ ಜನರಿದ್ದಾರೆ ಎಂದು ಮಾಜಿ ಸಚಿವ ಬಿ ರಮಾನಾಥ ರೈ ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ ಕಾನೂನು ಕ್ರಮಕ್ಕೆ ಅನುಮತಿ ನೀಡಿರುವ ರಾಜ್ಯಪಾಲರ ನಡೆಯನ್ನು ಖಂಡಿಸಿ ರಮಾನಾಥ ರೈ ಅವರ ನೇತೃತ್ವದಲ್ಲಿ ಬಿ ಸಿ ರೋಡಿನಲ್ಲಿ ಸೋಮವಾರ ಸಂಜೆ ನಡೆದ ಪಾದಯಾತ್ರೆ, ಪ್ರಕೃತಿ ದಹನ, ರಸ್ತೆ ತಡೆ ಬಳಿಕ ಏರ್ಪಡಿಸಲಾಗಿದ್ದ ಬಹಿರಂಗ ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಆದರೆ ಬಿಜೆಪಿ ಅವರನ್ನು ಹಾಗೂ ಬಹುಮತದ ರಾಜ್ಯ ಸರಕಾರವನ್ನು ರಾಜಭವನವನ್ನು ದುರುಪಯೋಗಪಡಿಸಿಕೊಂಡು ಅತಂತ್ರ ಹಾಗೂ ಗೊಂದಲದಲ್ಲಿ ಮುಳುಗಿಸಲು ಯತ್ನಿಸುತ್ತಿದೆ. ಆದರೆ ಇದು ಯಶಸ್ವಿಯಾಗುವುದಿಲ್ಲ. ಕೇವಲ ರಾಜಕೀಯ ಉದ್ದೇಶಕ್ಕಾಗಿ ಸುಳ್ಳು ಹಾಗೂ ಹುರುಳಿಲ್ಲದ ಆರೋಪಗಳನ್ನು ಹೊರಿಸಿ ರಾಜಕೀಯ ಅಸ್ಥಿರತೆ ಸೃಷ್ಟಿಸುವ ಬಿಜೆಪಿ ಕುತಂತ್ರವನ್ನು ತೀವ್ರವಾಗಿ ಖಂಡಿಸುವುದಾಗಿ ತಿಳಿಸಿದರು.
ಕೈಕಂಬ ದ್ವಾರದಿಂದ ಬಿ ಸಿ ರೋಡು ಆಡಳಿತ ಸೌಧದವರೆಗೆ ಪಾದಯಾತ್ರೆಯ ಮೂಲಕ ಸಾಗಿ ಬಂದ ಪ್ರತಿಭಟನಾಕಾರರು ಬಳಿಕ ಬಿ ಸಿ ರೋಡು ಜಂಕ್ಷನ್ನಿನಲ್ಲಿ ರಸ್ತೆ ತಡೆ ನಡೆಸಿ ರಾಜ್ಯಪಾಲ ಥಾವರ್‍ಚಂದ್ ಗೆಹ್ಲೋಟ್ ಅವರ ಪ್ರತಿಕೃತಿ ದಹಿಸಿ ದಿಕ್ಕಾರ ಘೋಷಣೆಗಳನ್ನು ಕೂಗಿದರು.
ಪಕ್ಷ ಪ್ರಮುಖರಾದ ಪಿಯೂಸ್ ಎಲ್ ರೋಡ್ರಿಗಸ್, ಪದ್ಮರಾಜ್ ಪೂಜಾರಿ, ಜಿ ಎ ಬಾವಾ, ಚಂದ್ರಪ್ರಕಾಶ್ ಶೆಟ್ಟಿ, ಪದ್ಮಶೇಖರ್ ಜೈನ್, ಚಂದ್ರಶೇಖರ್ ಭಂಡಾರಿ, ಬಾಲಕೃಷ್ಣ ಅಂಚನ್, ಬೇಬಿ ಕುಂದರ್, ಬಿ ಎಂ ಅಬ್ಬಾಸ್ ಅಲಿ ಮೊದಲಾದವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.
0 comments:
Post a Comment