ಬಂಟ್ವಾಳ, ಆಗಸ್ಟ್ 15, 2024 (ಕರಾವಳಿ ಟೈಮ್ಸ್) : ಇಲ್ಲಿನ ಪುರಸಭಾ ವ್ಯಾಪ್ತಿಯ ಪಾಣೆಮಂಗಳೂರು ಸಮೀಪದ ವಾರ್ಡ್ ಸಂಖ್ಯೆ 24 ರ ಬಂಗ್ಲೆಗುಡ್ಡೆ ಅಂಗನವಾಡಿ ಕೇಂದ್ರವನ್ನು ಆಧುನೀಕರಣಕ್ಕೆ ಸಕಲ ಪ್ರಯತ್ನಗಳನ್ನು ಮುಂದಿನ ದಿನಗಳಲ್ಲಿ ಮಾಡಲಾಗುವುದು ಎಂದು ಪುರಸಭಾ ಸ್ಥಳೀಯ ಕೌನ್ಸಿಲರ್ ಅಬೂಬಕ್ಕರ್ ಸಿದ್ದೀಕ್ ಗುಡ್ಡೆಅಂಗಡಿ ಭರವಸೆ ನೀಡಿದರು.
ಇಲ್ಲಿನ ಅಂಗನವಾಡಿ ಕೇಂದ್ರದಲ್ಲಿ ಗುರುವಾರ ನಡೆದ ದೇಶದ ಸ್ವಾತಂತ್ರ್ಯೋತ್ಸವ ದಿನಾಚರಣೆಯ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಸರಕಾರ ಪುಟಾಣಿ ಮಕ್ಕಳ ಕೇಂದ್ರವಾಗಿರುವ ಅಂಗನವಾಡಿ ಕೇಂದ್ರಗಳ ಆಧುನೀಕರಣ, ಮೇಲ್ದರ್ಜೆ ಹಾಗೂ ಅಭಿವೃದ್ದಿಗೆ ಸಕಲ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಇದರ ಭಾಗವಾಗಿ ಬಂಗ್ಲೆಗುಡ್ಡೆ ಅಂಗನವಾಡಿ ಕೇಂದ್ರದ ಆಧುನೀಕರಣಕ್ಕೆ ಬೇಕಾದ ಸಕಲ ವ್ಯವಸ್ಥೆಗಳನ್ನು ವಾರ್ಡ್ ಕೌನ್ಸಿಲರ್ ಆಗಿ ಮಾಡುವ ಪ್ರಯತ್ನ ಮಾಡುತ್ತೇನೆ. ಇಲ್ಲಿನ ಅಂಗನವಾಡಿ ಕೇಂದ್ರಕ್ಕೆ ನೂತನ ಸುಸಜ್ಜಿತ ಕಟ್ಟಡ ಸಹಿತ ಮಕ್ಕಳ ಪಠ್ಯೇತರ ಚಟುವಟಿಕೆಗೆ ಪೂರಕವಾದ ಪಾರ್ಕ್, ಆಟಿಕೆ ಸಾಮಾಗ್ರಿ ಮೊದಲಾದ ಎಲ್ಲ ವ್ಯವಸ್ಥೆಗಳನ್ನು ಕಲ್ಪಿಸಲು ಅತ್ಯಂತ ಶೀಘ್ರವಾಗಿ ಪ್ರಯತ್ನಿಸಲಾಗುವುದು ಎಂದರು.
ಇದೇ ವೇಳೆ ಕಳೆದ ಸ್ವಾತಂತ್ರ್ಯೋತ್ಸವ ಆಚರಣೆಯ ಉಸ್ತುವಾರಿ ನಿರ್ವಹಿಸಿದ್ದ ಇಲ್ಲಿನ ಅಂಗನವಾಡಿ ಶಿಕ್ಷಕಿ ಪ್ರೇಮಾ ಟೀಚರ್ ಅವರು ಕಳೆದ ಡಿಸೆಂಬರ್ 9 ರಂದು ಮಧ್ಯರಾತ್ರಿ ವೇಳೆ ಹಠಾತ್ ಅನಾರೋಗ್ಯಕ್ಕೀಡಾಗಿ ಅಕಾಲಿಕ ಮರಣ ಹೊಂದಿದ್ದು, ಅವರನ್ನು ಸ್ಮರಿಸಿ ಅವರಿಗೆ ಶ್ರದ್ದಾಂಜಲಿ ಅರ್ಪಿಸಲಾಯಿತು.
ಅಂಗನವಾಡಿ ಶಿಕ್ಷಕಿಯರಾದ ಹರಿಣಾಕ್ಷಿ ಟೀಚರ್, ಜ್ಯೋತಿ ಟೀಚರ್, ಆಶಾ ಕಾರ್ಯಕರ್ತೆ ಜ್ಯೋತಿ ಲಕ್ಷ್ಮಿ, ಪತ್ರಕರ್ತ ಪಿ ಎಂ ಅಶ್ರಫ್ ಪಾಣೆಮಂಗಳೂರು, ಪ್ರಮುಖರಾದ ಭವ್ಯ, ಶರೀಫ್ ಭೂಯಾ, ಮುನೀರ್ ಬಂಗ್ಲೆಗುಡ್ಡೆ, ಇಕ್ಬಾಲ್ ಬಂಗ್ಲೆಗುಡ್ಡೆ, ರಿಯಾಝ್ ಎಸ್ ಆರ್ ಆಲಡ್ಕ, ಶಮೀರ್ ನಂದಾವರ, ಮುಹಮ್ಮದ್ ಬಂಗ್ಲೆಗುಡ್ಡೆ, ರಫೀಕ್ ಬೋಗೋಡಿ, ಬಶೀರ್ ಬೋಗೋಡಿ, ಜಯಲಕ್ಷ್ಮಿ ಮೊದಲಾದವರು ಭಾಗವಹಿಸಿದ್ದರು.
0 comments:
Post a Comment