ತಮಿಳುನಾಡು ಮಾದರಿಯಲ್ಲಿ ನಗರದ ಅಟೋ ಚಾಲಕರ ಹಿತ ಕಾಪಾಡಲು ಕ್ರಮ ಕೈಗೊಳ್ಳಿ : ಉಸ್ತುವಾರಿ ಸಚಿವರಿಗೆ ರಿಕ್ಷಾ ಚಾಲಕ ಸಂಘದ ಪದಾಧಿಕಾರಿಗಳ ಮನವಿ - Karavali Times ತಮಿಳುನಾಡು ಮಾದರಿಯಲ್ಲಿ ನಗರದ ಅಟೋ ಚಾಲಕರ ಹಿತ ಕಾಪಾಡಲು ಕ್ರಮ ಕೈಗೊಳ್ಳಿ : ಉಸ್ತುವಾರಿ ಸಚಿವರಿಗೆ ರಿಕ್ಷಾ ಚಾಲಕ ಸಂಘದ ಪದಾಧಿಕಾರಿಗಳ ಮನವಿ - Karavali Times

728x90

30 August 2024

ತಮಿಳುನಾಡು ಮಾದರಿಯಲ್ಲಿ ನಗರದ ಅಟೋ ಚಾಲಕರ ಹಿತ ಕಾಪಾಡಲು ಕ್ರಮ ಕೈಗೊಳ್ಳಿ : ಉಸ್ತುವಾರಿ ಸಚಿವರಿಗೆ ರಿಕ್ಷಾ ಚಾಲಕ ಸಂಘದ ಪದಾಧಿಕಾರಿಗಳ ಮನವಿ

ಮಂಗಳೂರು, ಆಗಸ್ಟ್ 30, 2024 (ಕರಾವಳಿ ಟೈಮ್ಸ್) : ಹೊಸ ಬ್ಯಾಟರಿ ಚಾಲಿತ ಇಲೆಕ್ಟ್ರಿಕಲ್ ಅಟೋ ರಿಕ್ಷಾಗಳಿಗೆ ಪರವಾನಿಗೆ ರಹಿತವಾಗಿ ರಿಜಿಸ್ಟ್ರೇಶನ್ ಪ್ರಕ್ರಿಯೆಯನ್ನು ಮಂಗಳೂರು ಸಾರಿಗೆ ಪ್ರಾಧಿಕಾರ ನಡೆಸುತ್ತಿದ್ದು, ಇದು ಇಲ್ಲಿನ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ದುಡಿಯುತ್ತಿರುವ ಪರವಾನಿಗೆ ಹೊಂದಿರುವ ಅಟೋ ರಿಕ್ಷಾ ಚಾಲಕರಿಗೆ ಮಾಡುತ್ತಿರುವ ಅನ್ಯಾಯವಾಗಿದ್ದು, ಈ ಬಗ್ಗೆ ಜಿಲ್ಲಾಧಿಕಾರಿಗಳ ಆದೇಶಕ್ಕೆ ತಡೆ ನೀಡಿ ಈ ಹಿಂದಿನ ಪ್ರಕ್ರಿಯೆಯನ್ನೇ ಮುಂದುವರಿಸಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಅಟೋ ಚಾಲಕರ ಸಂಘದ ಪದಾಧಿಕಾರಿಗಳು ಶುಕ್ರವಾರ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಮನವಿ ಮಾಡಿದರು. 

ಮಂಗಳೂರು ನಗರ ವ್ಯಾಪ್ತಿಯಲ್ಲಿ ಈಗಾಗಲೇ ಪರವಾನಿಗೆ ಹೊಂದಿ ದುಡಿಯುತ್ತಿರುವ ಸಾವಿರಾರು ಮಂದಿ ಅಟೋ ರಿಕ್ಷಾ ಚಾಲಕರಿಗೆ ಜಿಲ್ಲಾಡಳಿತ ಅನುಸರಿಸುತ್ತಿರುವ ಕ್ರಮ ಮಾರಕವಾಗಿ ಪರಿಣಮಿಸಿದ್ದು, ರಿಕ್ಷಾ ಚಾಲನೆ ದುಡಿಮೆಯನ್ನೇ ನಂಬಿಕೊಂಡು ಬದುಕುತ್ತಿರುವ ಚಾಲಕರ ಕುಟುಂಬಗಳಿಗೆ ಆತಂಕ ಎದುರಾಗಿದೆ ಎಂದು ಸಂಘದ ಪದಾಧಿಕಾರಿಗಳು ಸಚಿವರಿಗೆ ವಿವರಿಸಿದ್ದಾರೆ. 

ದೇಶದಲ್ಲಿ ಕಳೆದ 75 ವರ್ಷಗಳಿಂದ ಇದ್ದ ಏಕರೂಪದ ಪರವಾನಿಗೆ ನಿಯಮವನ್ನು ಇತ್ತೀಚೆಗೆ ಕೇಂದ್ರ ಸರಕಾರ ಹೊರಡಿಸಿದ ಹೊಸ ಮೋಟಾರು ವಾಹನ ನಿಯಮ ಉಲ್ಲಂಘನೆ ಮಾಡುತ್ತಿದೆ. ಇದೀಗ ಇತ್ತೀಚೆಗೆ ಮಾರುಕಟ್ಟೆಗೆ ಬಿಡುಗಡೆಗೊಂಡಿರುವ ಹೊಸ ಬ್ಯಾಟರಿ ಚಾಲಿತ ಇಲೆಕ್ಟ್ರಿಕಲ್ ಅಟೋ ರಿಕ್ಷಾಗಳಿಗೆ ಪರವಾನಿಗೆಯೇ ಬೇಡ. ಅಂತಹ ವಾಹನ ಚಾಲಕರು ವ್ಯಾಪ್ತಿಯ ಪರಿಧಿಯಿಲ್ಲದೆ ಎಲ್ಲೆಂದರಲ್ಲಿ ಸಂಚರಿಸಬಹುದು ಎಂಬ ನಿಯಮ  ಅಟೋ ರಿಕ್ಷಾ ಚಾಲಕರ ನಡುವೆ ಘರ್ಷಣೆಗೂ ಕಾರಣವಾಗುತ್ತಿದೆ. ಇದು ಸರಿಯಲ್ಲ. ಎಲ್ಲಾ ವಾಹನಗಳಿಗೂ ಏಕ ರೂಪದ ಪರವಾನಿಗೆ ನಿಯಮ ಈ ಹಿಂದೆ ಇದ್ದುದನ್ನೇ ಊರ್ಜಿತಗೊಳಿಸಬೇಕು ಎಂದು ಪದಾಧಿಕಾರಿಗಳು ಆಗ್ರಹಿಸಿದರು. 

ಈ ಹಿಂದೆ ರಿಕ್ಷಾಗಳಿಗೆ ಡೀಸಿಲ್, ಪೆಟ್ರೋಲ್ ಗಳನ್ನು ಇಂಧನವಾಗಿ ಬಳಸುತ್ತಿದ್ದಾಗ ಅದಕ್ಕನುಗುಣವಾಗಿ ರಿಕ್ಷಾಗಳು ಬದಲಾದಾಗ ಆಗಲೀ, ಟೂ ಸ್ಟ್ರೋಕ್, ಫೋರ್ ಫೋಟ್ ಆದಾಗ ಆಗಲೀ, ಮತ್ತು ಇದೀಗ ಬಳಕೆಯಲ್ಲಿರುವ ಎಲ್ ಪಿ ಜಿ, ಸಿ ಎನ್ ಜಿ ಗಳಿಗೆ ಬದಲಾದಾಗಲೂ ಪರವಾನಿಗೆ ನಿಯಮಗಳು ಬದಲಾಗಿರಲಿಲ್ಲ. ಅದು ಎಲ್ಲರಿಗೂ ಒಂದೇ ರೀತಿಯಾಗಿ ಅನ್ವಯ ಆಗುತ್ತಿತ್ತು. ಅದೇ ನಿಯಮವನ್ನು ಬ್ಯಾಟರಿ ರಿಕ್ಷಾಗಳಿಗೂ ಅನ್ವಯ ಮಾಡಿದಾಗ ಈಗಿರುವ ಎಲ್ಲಾ ಗೊಂದಲಗಳಿಗೂ ಪರಿಹಾರ ದೊರಕಲಿದೆ ಎಂದು ಮನವಿ ಮಾಡಿರುವ ರಿಕ್ಷಾ ಚಾಲಕ ಸಂಘದ ಪದಾಧಿಕಾರಿಗಳು ಈಗಾಗಲೇ ವಲಯ 1 ನೀಡಿರುವ ಬ್ಯಾಟರಿ ರಿಕ್ಷಾಗಳನ್ನು ಬದಲಿಸಲು ಅಥವಾ ನವೀಕರಿಸಲು ಅವಕಾಶ ನೀಡಬಾರದು. ಒಂದು ಊರಿಗೆ, ತಾಲೂಕಿಗೆ ಅಥವಾ ಜಿಲ್ಲೆಗೆ ಅಲ್ಲಿನ ಜನಸಂಖ್ಯೆಗನುಗುಣವಾಗಿ ಅಲ್ಲಿಗೆ ಎಷ್ಟು ಸಾರಿಗೆ ವಾಹನಗಳು ಇರಬೇಕು ಎಂಬುದನ್ನು ಆಯಾ ಪ್ರದೇಶಗಳ ಆಡಳಿತ ಅಥವಾ ಸಾರಿಗೆ ಪ್ರಾಧಿಕಾರ ನಿರ್ಧರಿಸಬೇಕೇ ಹೊರತು ಈ ಬಗ್ಗೆ ನಿರ್ಧರಿಸಲು ರಾಜ್ಯ, ಕೇಂದ್ರ ಸರಕಾರಕ್ಕಾಗಲೀ, ನ್ಯಾಯಾಲಯಕ್ಕಾಗಲೀ ಸಮರ್ಪಕವಾದ ಮಾಹಿತಿ ಇರುವುದಿಲ್ಲ. ಈ ರೀತಿಯ ನಿರ್ವಹಣೆಯನ್ನು ದೇಶಾದ್ಯಂತ ಆಯಾಯ ಪ್ರದೇಶದ ಆಡಳಿತ, ಸಾರಿಗೆ ಪ್ರಾಧಿಕಾರಗಳು ಯಾವುದೇ ಗೊಂದಲವಿಲ್ಲದೆ ಯಶಸ್ವಿಯಾಗಿ ನಿರ್ವಹಿಸುತ್ತಾ ಬಂದಿದ್ದವು. ಆದರೆ 2018 ರಲ್ಲಿ ಭಾರತ ಸರಕಾರ ಜಾರಿಗೆ ತಂದ ಪರವಾನಿಗೆ ವಿನಾಯಿತಿ ತಿದ್ದುಪಡಿ ನಿಯಮದಿಂದಾಗಿ ಈ ಎಲ್ಲ ಗೊಂದಲಗಳು ಸೃಷ್ಟಿಯಾಗಿದ್ದು, ಈ ಬಗ್ಗೆ ರಾಜ್ಯ ಸರಕಾರ ತಮಿಳುನಾಡು ಮಾದರಿಯನ್ನು ಅನುಸರಿಸಿ ನಮ್ಮಲ್ಲಿನ ಅಟೋ ರಿಕ್ಷಾಗಳ ಪರವಾನಿಗೆ ಗೊಂದಲಕ್ಕೆ ಪರಿಹಾರ ಕಲ್ಪಿಸುವಂತೆ ರಿಕ್ಷಾ ಚಾಲಕ ಸಂಘದ ಪದಾಧಿಕಾರಿಗಳು ಜಿಲ್ಲಾ ಉಸ್ತುವಾರಿ ಸಚಿವರ ಮೂಲಕ ರಾಜ್ಯ ಸಾರಿಗೆ ಸಚಿವರು ಹಾಗೂ ಮುಖ್ಯಮಂತ್ರಿಗಳಿಗೆ ಈ ಮನವಿ ಸಲ್ಲಿಸಿದ್ದಾರೆ. 

ದಕ್ಷಿಣ ಕನ್ನಡ ಜಿಲ್ಲಾ ಆಟೋ ರಿಕ್ಷಾ ಚಾಲಕರ ಸಂಘ (ರಿ) ಇದರ ಅಧ್ಯಕ್ಷ ಬಿ ವಿಷ್ಣುಮೂರ್ತಿ ಭಟ್, ಸಮಾನ ಮನಸ್ಕರ ವೇದಿಕೆ ಮಂಗಳೂರು ಇದರ ಪದಾಧಿಕಾರಿಗಳಾದ ದಯಾನಂದ ಶೆಟ್ಟಿ, ಅಲ್ಫೋನ್ಸ್ ಡಿಸೋಜ, ಗಣೇಶ್ ಆರ್ ಶಕ್ತಿನಗರ, ಮೋಹನ್ ಕುಮಾರ್, ಕನಕಪ್ಪ ಮೊದಲಾದವರು ಮನವಿ ನೀಡಿದ ನಿಯೋಗದಲ್ಲಿದ್ದರು. 

  • Blogger Comments
  • Facebook Comments

0 comments:

Post a Comment

Item Reviewed: ತಮಿಳುನಾಡು ಮಾದರಿಯಲ್ಲಿ ನಗರದ ಅಟೋ ಚಾಲಕರ ಹಿತ ಕಾಪಾಡಲು ಕ್ರಮ ಕೈಗೊಳ್ಳಿ : ಉಸ್ತುವಾರಿ ಸಚಿವರಿಗೆ ರಿಕ್ಷಾ ಚಾಲಕ ಸಂಘದ ಪದಾಧಿಕಾರಿಗಳ ಮನವಿ Rating: 5 Reviewed By: karavali Times
Scroll to Top