ನೆಮ್ಮದಿಯ ವಾತಾವರಣ ನಿರ್ಮಾಣವಾಗಲಿ, ಸ್ವತಂತ್ರ ಭಾರತದಲ್ಲಿ - Karavali Times ನೆಮ್ಮದಿಯ ವಾತಾವರಣ ನಿರ್ಮಾಣವಾಗಲಿ, ಸ್ವತಂತ್ರ ಭಾರತದಲ್ಲಿ - Karavali Times

728x90

14 August 2024

ನೆಮ್ಮದಿಯ ವಾತಾವರಣ ನಿರ್ಮಾಣವಾಗಲಿ, ಸ್ವತಂತ್ರ ಭಾರತದಲ್ಲಿ

- ಡಿ.ಎಸ್.ಐ.ಬಿ ಪಾಣೆಮಂಗಳೂರು


ಸ್ವಾತಂತ್ರ್ಯೋತ್ಸವ ಪ್ರಯುಕ್ತ ಕರಾವಳಿ ಟೈಮ್ಸ್ ವಿಶೇಷ ಲೇಖನ

ಪ್ರತಿ ವರ್ಷವೂ ಆಗಸ್ಟ್ 15ರಂದು ಭವ್ಯ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದ ಸಂಭ್ರಮವನ್ನು ನಾವುಗಳು ಆಚರಿಸುತ್ತೇವೆ. ಬೇರೆ ದೇಶಗಳನ್ನು ನೋಡಿದಾಗ ನಮ್ಮ ಭಾರತಕ್ಕಿಂತ ಉತ್ತಮವಾದ ಇನ್ನೊಂದು ದೇಶ ಇಲ್ಲ. ಆಚಾರ ವಿಚಾರ ಸಂಸ್ಕೃತಿ, ಭಾಷೆ, ಜಲ ನೆಲಗಳನ್ನೆಲ್ಲ ಕಂಡಾಗ ಮನಸ್ಸಿನಲ್ಲಾಗುವ ಒಂದು ಸಂತೋಷದ ಭಾಗವೇ ನಮ್ಮ ಭಾರತ ಸ್ವತಂತ್ರವಾಗಿರುವುದು. 1947ರ ಇಸವಿಯಲ್ಲಿ ನಮ್ಮ ಭಾರತ ಸ್ವತಂತ್ರವಾಯಿತು. ಆ ದಿನವನ್ನು ಪ್ರತಿ ಭಾರಿ ನೆನಪಿಸುತ್ತಾ ನಾವುಗಳು ಆಗಸ್ಟ್ 15ರಂದು ಸಂಭ್ರಮಿಸುತ್ತಿದ್ದೇವೆ. ಈ ಸಂಭ್ರಮ ಆನಂದ ಎಲ್ಲವೂ  ಒಂದು ದಿನಕ್ಕೆ ಮಾತ್ರ ಸೀಮಿತದಂತಿದೆ ನಮ್ಮ ಸ್ವತಂತ್ರ. ಈ ದಿನಗಳನ್ನು ಕಂಡಾಗ ನಿಜವಾಗಿಯೂ ನಮ್ಮ ಸ್ವತಂತ್ರ ಎಲ್ಲಿ ಮರೆಯಾಗಿದೆ ಎಂಬುವುದೇ ಬಲು ದೊಡ್ಡ ಪ್ರಶ್ನೆಯಾಗಿದೆ..?

ಅವನು ಬಾವುಟ ಹಾರಿಸುತ್ತಾನೆಂದು ಇವನು ಕೂಡ ಒಂದು ಖರೀದಿಸಿ ಹಾರಿಸುತ್ತಿದ್ದಾನೆ ಅಷ್ಟೇ. ಅದು ಬಿಟ್ಟರೆ ಸ್ವತಂತ್ರದ ಬಗ್ಗೆ ನಿಜವಾದ ತಿಳುವಳಿಕೆ ತುಂಬಾ ಜನರಲ್ಲಿ ಇಲ್ಲ. ಧ್ವಜಾರೋಹಣ ಸಮಯದಲ್ಲಿ ಸೇರುವ ಪ್ರತಿಯೊಬ್ಬ ಪ್ರಜೆಯೂ ಒಂದಲ್ಲ ಒಂದು ಸ್ವತಂತ್ರವನ್ನು ಕಳೆದುಕೊಂಡವರೇ ಆಗಿರುತ್ತಾರೆ. ಆದರೂ ನನ್ನ ದೇಶಕ್ಕೆ ಸಿಕ್ಕಿದ ಸ್ವತಂತ್ರವನ್ನು ಗೌರವದಿಂದ ಆಚರಿಸುತ್ತಾರೆ. ನಿಜವಾಗಿಯೂ ನೆಮ್ಮದಿ ಇಲ್ಲ ಇನ್ನೊಮ್ಮೆ ಹೋರಾಡಿ ನಮ್ಮ ನೆಮ್ಮದಿಯ ಸ್ವತಂತ್ರವನ್ನು ಪಡೆಯಬೇಕಾಗಿದೆ. ಪ್ರತಿಯೊಬ್ಬ ಪ್ರಜೆಯು ಒಂದಲ್ಲ ಒಂದು ಕಷ್ಟ ನಷ್ಟದಲ್ಲಿ ಜೀವಿಸುತ್ತಿದ್ದಾನೆ. ಸ್ವತಂತ್ರವಾಗಿ ಇರಲು ಭಯಪಡುತ್ತಾನೆ. ದುಡಿದು ಬಂದರು ನೆಮ್ಮದಿಲ್ಲ. ಸಿಗುವ ಸಾವಿರಾರು ಸಂಬಳದಲ್ಲಿ ಹೇಗೆ ಜೀವಿಸಲಿ ಎಂಬುದು ಚಿಂತೆ. ಹೆಂಡತಿ ಮಕ್ಕಳೊಂದಿಗೆ ಪ್ರೀತಿಯಿಂದ ಜೀವಿಸಲು ಹಣದ ಕೊರತೆ ದುಬಾರಿಯಾದ ದಿನಬಳಕೆಯ ಬೆಲೆಗಳು. ಮಗು ತಿನ್ನುವ ಚಾಕಲೇಟಿಗೂ ತೆರಿಗೆ, ತಿಂದ ಆಹಾರದಿಂದ ಆರೋಗ್ಯ ಕೆಟ್ಟು ಆಸ್ಪತ್ರೆಗೆ ಹೋದರೆ ಅಲ್ಲಿಯೂ ತೆರಿಗೆ. ನೆಮ್ಮದಿಯಾಗಿ ಸ್ವತಂತ್ರವಾಗಿ ಓಡಾಡಲು ಕೂಡ ಭಯ. ಇಂತಹ ಕಷ್ಟ ನೋವುಗಳಿಂದ ಭವ್ಯ ಭಾರತದ ಪ್ರೀತಿಯಿಂದ ಸ್ವತಂತ್ರ ದಿನವನ್ನು ಆಚರಿಸುತ್ತಾರೆ ವಿನಃ ಸ್ವತಂತ್ರವಾಗಿ ಆಚರಿಸುತ್ತಿಲ್ಲ ಎಂಬುದು ಕಹಿ ಸತ್ಯ. ದೇಶದಿಂದ ಬ್ರಿಟಿಷರು ಹೋಗಿದ್ದಾರೆ ಎಂಬ ಕಾರಣಕ್ಕೆ ಇಲ್ಲಿರುವವರಿಗೆ ಸ್ವತಂತ್ರ ಸಿಕ್ಕಿದೆ ಎಂಬುದನ್ನು ಸಾಕಷ್ಟು ಜನರು ತಿಳಿದಿದ್ದಾರೆ ನಿಜವಾದ ಅರ್ಥದಲ್ಲಿ ಹೇಳುವುದಾದರೆ ಇಲ್ಲಿ ಬ್ರಿಟಿಷರು ಹೋಗಿದ್ದಾರೆ ಅಷ್ಟೆ. ಆದರೆ ಸರಿಯಾದ ಸ್ವತಂತ್ರ ಇನ್ನೂ ಸಿಕ್ಕಿಲ್ಲ. ಸರಿಯಾಗಿ ನೆಮ್ಮದಿಯಿಂದ ಜೀವನ ಸಾಗಿಸಲು ಸಾಧ್ಯವಾಗದಿದ್ದರೆ ಹೇಗೆ ಸ್ವತಂತ್ರ ಇದೆ ಎನ್ನಲು ಸಾಧ್ಯ.? ಎಲ್ಲಿ ತನಕ ಅಧಿಕಾರಿಗಳ ಗುಲಾಮರಂತೆ ಪ್ರಜೆಗಳು ಜೀವಿಸುತ್ತಾರೋ, ಅಲ್ಲಿವರೆಗೆ ನಿಜವಾದ  ಸ್ವತಂತ್ರ ಕನಸು ಅಷ್ಟೇ. 

ನೆಮ್ಮದಿಯ ಜೀವನ ನಡೆಸಲು ಇಂದು ಪ್ರತಿಯೊಬ್ಬ ನಡುಗುತ್ತಿದ್ದಾನೆ. ಸಮಸ್ಯೆಗಳ ಮೇಲೆ ಸಮಸ್ಯೆ ಸ್ವತಂತ್ರ ಭಾರತದಲ್ಲಿ ನಾವುಗಳು ಇದ್ದರೂ ಇನ್ನೊಬ್ಬರಿಗೆ ಹೆದರಿಕೊಂಡು ಜೀವನ ಸಾಗಿಸಬೇಕು. ಸ್ವತಃ ನಿರ್ಧಾರ ತೆಗೆದುಕೊಳ್ಳುವಂತೆ ಇಲ್ಲ. ಇಷ್ಟಪಟ್ಟದನ್ನು ಪಡೆದುಕೊಳ್ಳಲು ನೂರಾರು ಜನರ ಕಾಲು ಹಿಡಿಯಬೇಕು. ಗಂಡ ಹೆಂಡತಿ ಸಮಸ್ಯೆ. ಹೆಂಡತಿ ಜೀವನ ಸಾಗಿಸಬೇಕಾದರೆ ಗಂಡನ ಇನ್ನಿಲ್ಲದ ಷರತ್ತುಗಳು. ಚಿತ್ರ ಹಿಂಸೆ ಇನ್ನಿತರ ಶಿಕ್ಷೆಗಳನ್ನು ಅನುಭವಿಸುತ್ತಾ ಅದೆಷ್ಟೋ ಕುಟುಂಬದೊಳಗೆ ನಡೆಯುತ್ತಿದೆ. ಯಾರಿಗೂ ಹೇಳದೆ ಸಮಾಜದ ಮುಂದೆ ಮಾನವನ್ನು ಕಾಪಾಡುವ ಸಲುವಾಗಿ ಅದೆಷ್ಟೋ ಹೆಣ್ಣು ಮಕ್ಕಳು ಜೀವನ ಸಾಗಿಸುತ್ತಿದ್ದಾರೆ. ಹೆಣ್ಣಿನ ಮೇಲೆ ದೌರ್ಜನ್ಯ ಇನ್ನೂ ಕಡಿಮೆಯಾಗಿಲ್ಲ. ಸ್ವತಂತ್ರವಾಗಿ ಓಡಾಡಲು ಕೂಡ ಅವಳಿಗೆ ಭಯ. ಒಂಟಿಯಾಗಿ ಇರಲು ಕೂಡ ಅಸಾಧ್ಯವಾಗಿದೆ. ಅವಳು ಅವಳ ಸ್ವತಂತ್ರ ಕೇಳಲು ನ್ಯಾಯಲಯದ ಮೆಟ್ಟಿಲು ಏರಬೇಕು ಆದರೂ ಅಲ್ಲಿಯೂ ಕೂಡ ಕೆಲವೊಮ್ಮೆ ನ್ಯಾಯ ವಂಚಿತಳಾಗುತ್ತಾಳೆ. ತಾಯಿಗೆ ತನ್ನ ಮಗಳನ್ನು ಒಂಟಿಯಾಗಿ ಕಳುಹಿಸಲು ಭಯ ಎಲ್ಲಿ ಕಾಮುಕರ ಆಹಾರವಾಗುತ್ತಾಳೆ ಎಂಬುದೇ ಚಿಂತೆ. ನೆಮ್ಮದಿಯಿಂದ ವಿವಾಹ ಮಾಡಿಕೊಟ್ಟರೆ ಕೆಲವೊಂದು ಪತಿ ಕುಟುಂಬದ ಕಿರುಕುಳ ದೌರ್ಜನ್ಯ ಕಷ್ಟನೋವು ಎಲ್ಲವನ್ನೂ ಅನುಭವಿಸುತ್ತಿರುತ್ತಾಳೆ. ಸ್ವತಂತ್ರ ಭಾರತದಲ್ಲಿ ಇದ್ದರು ಅವಳು ಮಾತ್ರ ಸ್ವತಂತ್ರವಾಗಿರುವುದಿಲ್ಲ. ಹೆಣ್ಣು ಮಗು ಇಲ್ಲಿ ಸ್ವತಂತ್ರವಾಗಿಲ್ಲ ಎಂಬುದಕ್ಕೆ ಪ್ರತಿದಿನ ಕೇಳುವ ಅತ್ಯಾಚಾರಗಳ ಸುದ್ದಿಗಳೆ ಸಾಕ್ಷಿ. ನಡು ರಸ್ತೆಯಲ್ಲಿ ಅದು ಕೂಡ ಹಗಲು ಹೊತ್ತಿನಲ್ಲಿ ಸಾರ್ವಜನಿಕರ ಎದುರೇ ಸಾಮೂಹಿಕವಾಗಿ ಅತ್ಯಾಚಾರ ಮಾಡಿ ಕೊಲೆ ಮಾಡುವ ಸ£ನ್ನಿವೇಶಗಳು ನಾವು ಇಂದು ನೋಡಬೇಕಾದ ಪರಿಸ್ಥಿತಿ ಎದುರಾಗಿದೆ ಎಂದರೆ ನಿಜವಾದ ಸ್ವತಂತ್ರ ಯಾವುದು.? ಒಂದು ಹೆಣ್ಣು ಮದ್ಯ ರಾತ್ರಿಯಲ್ಲಿ ನೆಮ್ಮದಿಯಿಂದ ಓಡಾಡಿದರೆ ಅದು ನಿಜವಾದ ಸ್ವಾತಂತ್ರ್ಯ ಎಂದು ಹೇಳಿರಬೇಕಾದರೆ ಇಂದು ಒಬ್ಬ ಪುರುಷ ನೆಮ್ಮದಿಯಿಂದ ಮದ್ಯರಾತ್ರಿ ಬಿಟ್ಟು ಮಧ್ಯಾಹ್ನವೆ ಓಡಾಡಲು ಭಯಪಡಬೇಕಾಗಿದೆ. ಹಲ್ಲೆ, ಕೊಲೆ, ದರೋಡೆಗಳಂತ ಹೀನಾಯ ಕೃತ್ಯಗಳಿಂದಾಗಿ ಜನರಿಂದು ಸಾಕಷ್ಟು ಭಯದ ವಾತಾವರಣದಲ್ಲಿ ಬಿದ್ದಿದ್ದಾರೆ.  ಕೆಲವು ಅಧಿಕಾರಿಗಳೇ ಕಾಮುಕರಾದರೆ ಇನ್ನೂ ಹೆಣ್ಣೊಬ್ಬಳು ನ್ಯಾಯ ನಿರೀಕ್ಷಿತರಾಗಲು ಹೇಗೆ ಸಾಧ್ಯ. ಅಧಿಕಾರದ ಆಸೆಗಾಗಿ ಇಲ್ಲಿ ಬಲಿಪಶು ಆಗುತ್ತಿರುವುದು ಭಾರತೀಯ ಹೆಮ್ಮೆಯ ಪ್ರಜೆಗಳು.

ನಮ್ಮ ದೇಶದೊಳಗೆ ಬದಲಾಗಬೇಕು. ಕೆಲವೊಂದು ಕಾನೂನು ಬದಲಾದರೆ ಮಾತ್ರ ನೆಮ್ಮದಿಯಿಂದ ಸ್ವತಂತ್ರವಾಗಿರಲು ಸಾಧ್ಯ. ಪ್ರೀತಿ, ವಿಶ್ವಾಸ, ವಾತ್ಸಲ್ಯ, ಉತ್ತಮ ಭಾಂದವ್ಯ, ಕರುಣೆ, ಮನುಷ್ಯತ್ವಗಳು ನಿರ್ಮಾಣವಾದರೆ ನಾವು  ಸ್ವತಂತ್ರವಾಗಿ ಜೀವಿಸುವುದರಲ್ಲಿ ಸಂಶಯವಿಲ್ಲ. ದ್ವೇಷ, ಅಸೂಯೆ, ಜಾತಿ ಭೇದ, ಕೋಮುವಾದ ಎಲ್ಲವೂ ಕೊನೆಗೊಳ್ಳಲಿ. ಇದು ಸ್ವತಂತ್ರ ಭೂಮಿ, ಸರ್ವ ಜನಾಂಗದವರ ಶಾಂತಿಯ ತೋಟವಾಗಿದೆ. ಇಲ್ಲಿ ಭ್ರಷ್ಟಾಚಾರ, ಅತ್ಯಾಚಾರ, ಕೋಮು ಗಲಭೆ, ಕೊಲೆ, ದರೋಡೆಗಳನ್ನು ಮಾಡುವವರಿಗೆ ಕಠಿಣ ಶಿಕ್ಷೆಯಾಗಲಿ. ಎಲ್ಲರಿಗೂ ಒಂದೇ ನ್ಯಾಯ, ಕಾನೂನು ಜಾರಿಯಾಗಲಿ.. ಭಾರತೀಯರು ಎಲ್ಲ ಒಂದೇ ತಾಯಿ ಮಕ್ಕಳು ನಮ್ಮ ದೇಶಕ್ಕೆ ಇರುವ ಬೆಲೆ ಗೌರವ ಆಚಾರ ವಿಚಾರಗಳಿಗೆ ಇರುವಷ್ಟು ಬೇರೆ ದೇಶಕ್ಕೆ ಇಲ್ಲ. ಕೆಲವೊಂದು ರಾಜಕಾರಣಿ, ಅಧಿಕಾರಿಗಳ ದುರಾಡಳಿತಕ್ಕೆ ಪ್ರಜೆಗಳು ಸ್ವತಂತ್ರ ಕಳೆದುಕೊಳ್ಳುತ್ತಿದ್ದಾರೆ. ಎಲ್ಲವೂ ಕೊನೆಗೊಳ್ಳಲಿ.. ದೇಶದ ಬಾವುಟ ಹಾರುವುದರೊಂದಿಗೆ ನಮ್ಮಲ್ಲಿ ಅಡಗಿರುವ ನಿಷ್ಕಳಂಕ ಮನೋಭಾವಗಳು ಹಾರಿ ಹೋಗಲಿ.. ಎಲ್ಲರೂ ಒಂದಾಗಿ ಒಗ್ಗಟ್ಟಾಗಿ ಇಲ್ಲಿ ಜೀವಿಸುವ. ಭಾರತಕ್ಕೆ ಅನ್ಯಾಯ ಮಾಡುವವರನ್ನು ಬ್ರಿಟಿಷರನ್ನು ಓಡಿಸಿದಂತೆ ಓಡಿಸುವ.

ಸರ್ವರಿಗೂ ಸ್ವಾತಂತ್ರ್ಯೋತ್ಸವದ ಹಾರ್ದಿಕ ಶುಭಾಶಯಗಳು.

  • Blogger Comments
  • Facebook Comments

0 comments:

Post a Comment

Item Reviewed: ನೆಮ್ಮದಿಯ ವಾತಾವರಣ ನಿರ್ಮಾಣವಾಗಲಿ, ಸ್ವತಂತ್ರ ಭಾರತದಲ್ಲಿ Rating: 5 Reviewed By: karavali Times
Scroll to Top