ಮಂಗಳೂರು, ಜುಲೈ 08, 2024 (ಕರಾವಳಿ ಟೈಮ್ಸ್) : ಇಸ್ಲಾಮೀ ಕ್ಯಾಲೆಂಡರ್ ಪ್ರಕಾರ ಹೊಸ ವರ್ಷವಾಗಿರುವ ಮುಹರ್ರಂ ತಿಂಗಳ ಪ್ರಥಮ ದಿನವಾಗಿರುವ ಸೋಮವಾರ (ಜುಲೈ 8) ಬೆಳಿಗ್ಗೆಯೇ ಸುನ್ನೀ ಮುಸ್ಲಿಮರ ಪಾಲಿಗೆ ಅತ್ಯಂತ ಆಘಾತಕರ ಸುದ್ದಿ ಬರಸಿಡಿಲಿನಂತೆ ಬಂದೆರಗಿದೆ. ಸುನ್ನೀ ಮುಸ್ಲಿಮರ ಪಾಲಿಗೆ ಹಲವು ವರ್ಷಗಳ ಕಾಲ ನೇತೃತ್ವ ನೀಡಿದ್ದ ಉಳ್ಳಾಲ ತಂಙಳ್ ಎಂದೇ ಸುಪ್ರಸಿದ್ದರಾಗಿದ್ದ ಅಹ್ಲ್ ಬೈತ್ ನಾಯಕ ಮರ್ ಹೂಂ ಸಯ್ಯಿದ್ ಅಬ್ದುರ್ರಹ್ಮಾನ್ ಕುಂಞÂ ಕೋಯ ತಂಙಳ್ ಅವರ ಸುಪುತ್ರ ಸಯ್ಯಿದ್ ಫಝಲ್ ಕೋಯಮ್ಮ ತಂಙಳ್ (ಕೂರತ್ ತಂಙಳ್) ಅವರು ಹೃದಯಾಘಾತದಿಂದ ಸೋಮವಾರ ಬೆಳಿಗ್ಗೆ ಕೇರಳ-ಕಣ್ಣೂರಿನ ಎಟ್ಟಿಕ್ಕುಳದ ಅವರ ಸ್ವಗೃಹದಲ್ಲಿ ವಫಾತ್ ಆಗಿದ್ದಾರೆ.
“ಮೌತುಲ್ ಆಲಿಂ, ಮೌತುಲ್ ಆಲಂ” (ಪಂಡಿತರ ಮರಣ ಅದು ಲೋಕದ ಮರಣ) ಎಂಬ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ ಅವರ ವಚನದಂತೆ ಇದೀಗ ಸುನ್ನೀ ಪಂಡಿತ ಲೋಕದ ಮತ್ತೊಂದು ಕೊಂಡಿ ಕಳಚಿ ಬೀಳುವ ಮೂಲಕ ಸುನ್ನೀ ಲೋಕ ಮತ್ತೊಮ್ಮೆ ಅನಾಥವಾಗಿದೆ. 65 ವರ್ಷ ಪ್ರಾಯದ ತಂಙಳ್ ಅವರು ಸೋಮವಾರ ಬೆಳಿಗ್ಗೆ 10 ಗಂಟೆ ಸುಮಾರಿಗೆ ಹೃದಯ ಸಂಬಂಧಿ ಅನಾರೋಗ್ಯಕ್ಕೊಳಗಾಗಿ ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ.
ಸೋಮವಾರ ಸಂಜೆ ಉಳ್ಳಾಲ ಸಯ್ಯಿದ್ ಮದನಿ ದರ್ಗಾ ವಠಾರದಲ್ಲಿ ನಡೆಯಬೇಕಿದ್ದ ಶರೀಅತ್ ಕಾಲೇಜು ವಿದ್ಯಾರ್ಥಿಗಳ ನೂತನ ಹಾಸ್ಟೆಲ್ ಕಟ್ಟಡ ಉದ್ಘಾಟನೆ ಸಹಿತ ವಿವಿಧ ಕಾರ್ಯಕ್ರಮಗಳಲ್ಲಿ ಇಂಡಿಯನ್ ಗ್ರ್ಯಾಂಡ್ ಮುಫ್ತಿ ಶೈಖುನಾ ಎಪಿ ಅಬೂಬಕ್ಕರ್ ಮುಸ್ಲಿಯಾರ್ ಕಾಂತಪುರಂ ಅವರ ಜೊತೆ ಭಾಗವಹಿಸಬೇಕಿದ್ದ ಕೂರತ್ ತಂಙಳ್ ಅವರು ಈ ಎಲ್ಲಾ ಕಾರ್ಯಕ್ರಮಗಳಿಗೆ ತೆರಳಲು ಸಿದ್ದತೆ ನಡೆಸುತ್ತಿದ್ದಾಗಲೇ ಹಠಾತ್ ಆಗಿ ಉಂಟಾದ ಹೃದಯಸ್ಥಂಭನದಿಂದಾಗಿ ನಿಧನರಾಗಿದ್ದಾರೆ.
ಸೋಮವಾರ ಅಪರಾಹ್ನ 2 ಗಂಟೆವರೆಗೆ ತಂಙಳ್ ಅವರ ಜನಾಝವನ್ನು ಎಟ್ಟಿಕ್ಕುಳಂ ಮನೆಯಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಿದ ಬಳಿಕ ಸಂಜೆ 7 ಗಂಟೆಗೆ ಉಳ್ಳಾಲ ಮಸೀದಿ ಹಾಗೂ ಸಯ್ಯಿದ್ ಮದನಿ ದರ್ಗಾ ವಠಾರಕ್ಕೆ ತರಲಾಗುತ್ತಿದ್ದು, ಅಲ್ಲಿ ಸಾರ್ವಜನಿಕರ ಅಂತಿಮ ದರ್ಶನದ ಬಳಿಕ ರಾತ್ರಿ 9 ಗಂಟೆ ವೇಳೆ ಪುತ್ತೂರು-ಕೂರತ್ ಜುಮಾ ಮಸೀದಿಯ ದಫನ ಭೂಮಿಯಲ್ಲಿ ದಫನ ಕಾರ್ಯ ನೆರವೇರಲಿದೆ ಎಂದು ಮಾಹಿತಿ ತಿಳಿಸಿದೆ.
ಉಳ್ಳಾಲ ಖಾಝಿ ಸಹಿತ ಹಲವು ಧಾರ್ಮಿಕ ವ್ಯವಸ್ಥೆಗಳ ನೇತೃತ್ವ ವಹಿಸಿದ್ದ ಸಯ್ಯಿದ್ ಕೂರತ್ ತಂಙಳ್ ಅವರು 2014 ರಲ್ಲಿ ಸಯ್ಯಿದ್ ಉಳ್ಳಾಲ ತಂಙಳ್ ವಫಾತ್ ಆದ ಬಳಿಕ ಉಳ್ಳಾಲ ಖಾಝಿಯಾಗಿ ನಿಯುಕ್ತಿಗೊಂಡಿದ್ದರು.
ಗಣ್ಯರ ಸಂತಾಪ
ಉಳ್ಳಾಲ ಖಾಝಿ ಸಯ್ಯಿದ್ ಕೂರತ್ ತಂಙಳ್ ಅವರ ನಿಧನಕ್ಕೆ ಉಳ್ಳಾಲ ಶಾಸಕರೂ, ವಿಧಾನಸಭಾ ಸ್ಪೀಕರ್ ಆಗಿರುವ ಯು ಟಿ ಖಾದರ್, ದಕ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಮಾಜಿ ಸಚಿವ ಬಿ ರಮಾನಾಥ ರೈ, ಉಳ್ಳಾಲ ಸಯ್ಯಿದ್ ಮದನಿ ದರ್ಗಾ ಸಮಿತಿ ಅಧ್ಯಕ್ಷ ಹನೀಫ್ ಹಾಜಿ, ಬಂಟ್ವಾಳ ತಾಲೂಕು ಸಂಯುಕ್ತ ಜಮಾಅತ್ ಅಧ್ಯಕ್ಷ ಹಾಜಿ ಜಿ ಮುಹಮ್ಮದ್ ಹನೀಫ್, ಪದಾಧಿಕಾರಿಗಳಾದ ಹಾಜಿ ಪಿ ಎಸ್ ಅಬ್ದುಲ್ ಹಮೀದ್, ಬಿ ಎಂ ಅಬ್ಬಾಸ್ ಅಲಿ ಮೊದಲಾದವರು ತೀವ್ರ ಸಂತಾಪ ಸೂಚಿಸಿದ್ದಾರೆ.
0 comments:
Post a Comment