ಪೀರನಗುಡ್ಡೆ ಸೇವಾ ಟ್ರಸ್ಟ್ ಅದ್ಯಕ್ಷ ಕೆ ಅಮೀರ್ ಪಂಜಾ ಅರಗ |
ಐತಿಹಾಸಿಕ ದರ್ಗಾಕ್ಕೆ ತೆರಳುವ ದಾರಿ ದುರ್ಗಮ : ಸರಕಾರ ಸೂಕ್ತ ಸಹಕಾರ ನೀಡಿ ಅಭಿವೃದ್ದಿಪಡಿಸಲು ಆಗ್ರಹ
ತೀರ್ಥಹಳ್ಳಿ, ಜುಲೈ 04, 2024 (ಕರಾವಳಿ ಟೈಮ್ಸ್) : ತಾಲೂಕಿನ ಆರಗ-ಅಗಳಬಾಗಿಲು ಪೀರನಗುಡ್ಡೆ ದರ್ಗಾ ಕಮಿಟಿ ಸೇವಾ ಟ್ರಸ್ಟ್ (ರಿ) ಇದರ ಅಧೀನದಲ್ಲಿರುವ ಸೈಯ್ಯದ್ ಕುತುಬ್ ಷಾ ವಲಿ, ಸಯ್ಯದ್ ದಾವುದ್ ಷಾ ವಲಿ, ಮಾಮಾ ಜಿಗ್ನಿ ಸನ್ನಿಧಾನದಲ್ಲಿ ಪ್ರಪ್ರಥಮ ವಾರ್ಷಿಕ ಸ್ವಲಾತ್ ಕಾರ್ಯಕ್ರಮವು ಜುಲೈ 14 ರಂದು ಭಾನುವಾರ ನಡೆಯಲಿದೆ.
ಐಬಿಟಿ ಗಾರ್ಡನ್ ಚೇರ್ ಮ್ಯಾನ್ ಸೈಯದ್ ಜಾಫರ್ ಅಸ್ಸಗಾಫ್ ತಂಙಳ್ ಕೋಟೇಶ್ವರ ಅಧ್ಯಕ್ಷತೆಯಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಮಧ್ಯಾಹ್ನ 12 ಗಂಟೆಗೆ ದುವಾ ಸ್ವಲಾತ್ ನೇತೃತ್ವವನ್ನು ಪೀರನಗುಡ್ಡೆ ಧರ್ಮಗುರು ಮಾಲ್ಬಾನ್ ಮಹಮ್ಮದ್ ಇಮ್ರಾನ್ ವಹಿಸಲಿದ್ದಾರೆ ಎಂದು ಪೀರನಗುಡ್ಡೆ ಸೇವಾ ಟ್ರಸ್ಟ್ ಅದ್ಯಕ್ಷ ಕೆ ಅಮೀರ್ ಪಂಜಾ ಅರಗ, ಕಾರ್ಯದರ್ಶಿ ಹಸನ್ ಸಾಬ್ ಹಾಗೂ ಕೋಶಾಧಿಕಾರಿ ವಜೀರ್ ಅಹಮದ್ ಅವರು ಜಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ದರ್ಗಾ ದುರ್ಗಮ ದಾರಿಗೆ ಕಾಯಕಲ್ಪಕ್ಕೆ ಆಗ್ರಹ
ಪ್ರಾಚೀನ ಐತಿಹಾಸಿಕ ಹಿನ್ನಲೆ ಹೊಂದಿರುವ ಪೀರನಗುಡ್ಡೆ ದರ್ಗಾಕ್ಕೆ ನಿತ್ಯ ಸಾವಿರಾರು ಮಂದಿ ಭೇಟಿ ನೀಡಿ ತಮ್ಮ ಇಷ್ಟಾರ್ಥ ಸಿದ್ದಿಗಾಗಿ ಪ್ರಾರ್ಥನೆ ಸಲ್ಲಿಸುತ್ತಿರುವುದಲ್ಲದೆ ಹರಕೆಯನ್ನೂ ನೀಡುತ್ತಾರೆ. ಇಂತಹ ಐತಿಹಾಸಿಕ ಹಿನ್ನಲೆ ಹೊಂದಿರುವ ಈ ದರ್ಗಾಗೆ ಭೇಟಿ ನೀಡಲು ಬರುವ ಭಕ್ತಾದಿಗಳಿಗೆ ಸೂಕ್ತ ದಾರಿ ಹಾಗೂ ರಸ್ತೆ ವ್ಯವಸ್ಥೆ ಇಲ್ಲದೆ ತೀವ್ರ ಅನಾನುಕೂಲತೆ ಎದುರಿಸುತ್ತಿದ್ದಾರೆ.
ಇಲ್ಲಿನ ದರ್ಗಾ ಹಾಗೂ ಇಲ್ಲಿಗೆ ಬರುವ ಭಕ್ತಾದಿಗಳ ಸಹಿತ ಸ್ಥಳೀಯ ಸಾರ್ವಜನಿಕರ ಹಿತದೃಷ್ಟಿಯಿಂದ ಸ್ಥಳೀಯ ಶಾಸಕರು ಹಾಗೂ ಸರಕಾರ ಸೂಕ್ತವಾಗಿ ಸ್ಪಂದಿಸಿ ಆಧ್ಯಾತ್ಮಿಕ ತಾಣವಾಗಿರುವ ಈ ದರ್ಗಾದ ಅಭಿವೃದ್ದಿಗೆ ಕ್ರಮ ಕೈಗೊಳ್ಳುವಂತೆ ದರ್ಗಾ ಸಮಿತಿ ಹಾಗೂ ಸ್ಥಳೀಯರು ಆಗ್ರಹಿಸಿದ್ದಾರೆ.
0 comments:
Post a Comment