ಬಂಟ್ವಾಳ, ಜುಲೈ 02, 2024 (ಕರಾವಳಿ ಟೈಮ್ಸ್) : ಸ್ಮಶಾನ ಕಾಮಗಾರಿಯ ಸಿಲಿಕಾನ್ ಛೇಂಬರಿನ ಬಿಡಿ ಭಾಗ ಹಾಗೂ ಕಾಮಗಾರಿ ಸಾಮಾಗ್ರಿಗಳನ್ನು ಕಳವುಗೈದ ಘಟನೆ ಬಡಗಕಜೆಕಾರು ಗ್ರಾಮದ ಮಾಡಪಲ್ಕೆ ಎಂಬಲ್ಲಿ ಸೋಮವಾರ ಬೆಳಕಿಗೆ ಬಂದಿದೆ.
ಈ ಬಗ್ಗೆ ಬಡಗಕಜೆಕಾರು ಗ್ರಾಮ ಪಂಚಾಯತ್ ಪಿಡಿಒ, ಉಜಿರೆ ನಿವಾಸಿ ಶ್ರೀಮತಿ ದೇವಕಿ ಅವರು ಪೂಂಜಾಲಕಟ್ಟೆ ಪೊಲೀಸರಿಗೆ ದೂರು ನೀಡಿದ್ದು, ಗ್ರಾಮ ಪಂಚಾಯತ್ ವ್ಯಾಪ್ತಿಯ ಬಡಗಕಜೆಕಾರು ಗ್ರಾಮದ ಮಾಡಪಲ್ಕೆ ಎಂಬಲ್ಲಿ ಸಾರ್ವಜನಿಕ ಸ್ಮಶಾನದ ಕಾಮಗಾರಿಗಾಗಿ ಕಳೆದ ಮಾರ್ಚ್ 8 ರಂದು ಸಿಲಿಕಾನ್ ಛೇಂಬರ್ ಅಳವಡಿಸಲಾಗಿರುತ್ತದೆ. ಜುಲೈ 1 ರಂದು ಬೆಳಿಗ್ಗೆ, ಕಟ್ಟಡ ಕಾಮಗಾರಿಯ ಕಂಟ್ರಾಕ್ಟರ್ ನೋಡಿದಾಗ, ಸದ್ರಿ ಸಿಲಿಕಾನ್ ಛೇಂಬರ್ ಬಿಡಿ ಭಾಗ ಮತ್ತು ಕಾಮಗಾರಿ ಸಾಮಾಗ್ರಿಗಳು ಕಳವಾಗಿರುವುದು ಕಂಡು ಬಂದಿರುತ್ತದೆ. ಈ ಬಗ್ಗೆ ಮಾಹಿತಿ ಬಂದ ಮೇರೆಗೆ ಪಿಡಿಒ ಹಾಗೂ ಪಂಚಾಯತ್ ಆಡಳಿತ ಮಂಡಳಿಯವರು ಹೋಗಿ ಪರೀಶೀಲಿಸಲಾಗಿ, ಕಳ್ಳತನ ನಡೆದಿರುವುದು ದೃಢಪಟ್ಟಿರುತ್ತದೆ. ಕಳವಾದ ಸೊತ್ತಿನ ಮೌಲ್ಯ 70 ಸಾವಿರ ರೂಪಾಯಿ ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಪೂಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
0 comments:
Post a Comment