ಬೆಂಗಳೂರು, ಜುಲೈ 17, 2024 (ಕರಾವಳಿ ಟೈಮ್ಸ್) : ರಾಜ್ಯ ಸರಕಾರವು ಹಲವು ವರ್ಷಗಳಿಂದ ಎಸ್ಸೆಸ್ಸೆಲ್ಸಿಯಲ್ಲಿ ಮೊದಲ ಪ್ರಯತ್ನದಲ್ಲಿ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾದ ಪರಿಶಿಷ್ಟ ಸಮುದಾಯದ ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ಪ್ರೋತ್ಸಾಹ ಧನವನ್ನು ಯಾವುದೇ ಕಾರಣ ನೀಡದೇ ಸ್ಥಗಿತಗೊಳಿಸಿದ್ದು ಅಲ್ಲದೇ ಪಿಯುಸಿಯಿಂದ ಉನ್ನತ ಮಟ್ಟದ ಕೋರ್ಸುಗಳವರೆಗೆ ನೀಡುತ್ತಿದ್ದ ಪ್ರೋತ್ಸಾಹ ಧನಕ್ಕೆ ವಾರ್ಷಿಕ ಆರು ಲಕ್ಷ ಆದಾಯದ ಮಿತಿ ಹೊರಡಿಸಿದ್ದು ಇದರಿಂದಾಗಿ ಪರಿಶಿಷ್ಟ ಸಮುದಾಯದ ವಿದ್ಯಾರ್ಥಿಗಳಿಗೆ ತೀವ್ರ ಅನ್ಯಾಯವಾಗಿದೆ ಎಂದು ಅಖಿಲ ಭಾರತ ವಿದ್ಯಾರ್ಥಿ ಸಂಘಟನೆ (ಎ ಐ ಎಸ್ ಎ) ತೀವ್ರವಾಗಿ ಖಂಡಿಸಿದೆ.
ಪರಿಶಿಷ್ಟ ಸಮುದಾಯದ ಹೆಚ್ಚಿನ ವಿದ್ಯಾರ್ಥಿಗಳು ಬಡ ವರ್ಗದವರಾಗಿದ್ದು, ಇಂದಿನ ಪರಿಸ್ಥಿತಿಯಲ್ಲಿ ವಿದ್ಯಾಭ್ಯಾಸ ಪಡೆಯಲು ಸಾದ್ಯವಾಗದೇ ಮದ್ಯದಲ್ಲೇ ಶಿಕ್ಷಣ ಮೊಟಕುಗೊಳಿಸುವ ಉದಾಹರಣೆಗಳು ತುಂಬಾ ಇದೆ. ಇಂತಹ ಸಂಧರ್ಭದಲ್ಲಿ ಸರಕಾರದ ಈ ನಿರ್ಧಾರವು ಬಹಳ ಆಘಾತಕಾರಿಯಾಗಿದೆ. ಸಾಮಾಜಿಕ ನ್ಯಾಯದ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಈ ಸರಕಾರವು ಏಕಾಏಕಿ ಪರಿಶಿಷ್ಟ ಸಮುದಾಯದ ವಿದ್ಯಾರ್ಥಿಗಳಿಗೆ ನೀಡುವ ಪ್ರೋತ್ಸಾಹ ಧನ ಕಡಿತಗೊಳಿಸಿರುವುದು ಸರಕಾರವು ದಲಿತ-ದಮನಿತರ ಪರ ಯಾವ ನಿಲುವು ಹೊಂದಿದೆ ಎಂಬುದು ಸ್ಫಷ್ಟವಾಗುತ್ತದೆ ಎಂದು ಐಸಾ ಹೇಳಿದೆ.
ಈ ಪ್ರೋತ್ಸಾಹ ಧನವು ಅನೇಕ ವಿದ್ಯಾರ್ಥಿಗಳಿಗೆ ಮುಂದಿನ ವಿದ್ಯಾಭ್ಯಾಸವನ್ನು ಮಾಡಲು ದಾರಿದೀಪವಾಗಿದ್ದು ಕೂಡಲೇ ತಡೆಹಿಡಿದ ಪ್ರೋತ್ಸಾಹದನವನ್ನು ಬಿಡುಗಡೆಗೊಳಿಸಬೇಕು ಹಾಗೂ ಆದಾಯದ ಮಿತಿಯನ್ನು ಹಿಂಪಡೆದು ಈ ಹಿಂದಿನಂತೆಯೇ ಪ್ರೋತ್ಸಾಹ ಧನವನ್ನು ಮುಂದುವರಿಸಬೇಕೆಂದು ಅಖಿಲ ಭಾರತ ವಿದ್ಯಾರ್ಥಿ ಸಂಘಟನೆ ಸರಕಾರವನ್ನು ಒತ್ತಾಯಿಸುತ್ತದೆ. ಕೂಡಲೇ ಈ ಹೊಸ ಆದೇಶ ಹಿಂಪಡೆಯದಿದ್ದರೆ ರಾಜ್ಯಾದ್ಯಾಂತ ಹೋರಾಟ ಮಾಡಲಾಗುವುದು ಎಂದು ಸರಕಾರವನ್ನು ಅಖಿಲ ಭಾರತ ವಿದ್ಯಾರ್ಥಿ ಸಂಘಟನೆ ಎಚ್ಚರಿಸಿದೆ.
0 comments:
Post a Comment