ಮಂಗಳೂರು, ಜುಲೈ 05, 2024 (ಕರಾವಳಿ ಟೈಮ್ಸ್) : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವರುಣಾರ್ಭಟ ಮುಂದುವರಿಯುವ ಬಗ್ಗೆ ಹವಾಮಾನ ಇಲಾಖೆ ರೆಡ್ ಅಲರ್ಟ್ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಅಂಗನವಾಡಿ, ಪ್ರಾಥಮಿಕ, ಪ್ರೌಡಶಾಲೆಗಳ ಸಹಿತ ಪಿಯುಸಿ ತರಗತಿಗಳಿಗೂ ಜುಲೈ 6 ರಂದು ಶನಿವಾರ ರಜೆ ಘೋಷಿಸಿ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಆದೇಶಿಸಿದ್ದಾರೆ.
ಕಳೆದೆರಡು ದಿನಗಳಿಂದ ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಶನಿವಾರ ಕೂಡಾ ಮಳೆ ಮುಂದುವರಿಯುವ ಬಗ್ಗೆ ಹವಾಮಾನ ಇಲಾಖೆ ನೀಡಿರುವ ಮುನ್ಸೂಚನೆ ಹಾಗೂ ರೆಡ್ ಅಲರ್ಟ್ ಘೋಷಣೆ ಮಾಡಿರುವ ಹಾಗೂ ಜಿಲ್ಲೆಯ ವಿವಿಧೆಡೆ ಮಳೆ ಅನಾಹುತಗಳು ಸಂಭವಿಸುತ್ತಿರುವ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ಈ ಆದೇಶ ಹೊರಡಿಸಿದ್ದು, ಇನ್ನೂ ಹಲವು ಮುಂಜಾಗ್ರತಾ ಕ್ರಮ ಘೋಷಿಸಿದ್ದಾರೆ. ನೀರು ಇರುವ ತಗ್ಗು ಪ್ರದೇಶ, ಮುಳುಗು ಪ್ರದೇಶ, ಕೆರೆ, ನದಿ, ಸಮುದ್ರ ತೀರಗಳಿಗೆ ಸಾರ್ವಜಕನಿಕರು, ಪ್ರವಾಸಿಗರು ತೆರಳದಂತೆ ಮುಂಜಾಗ್ರತೆ ವಹಿಸುವುದು, ಮೀನುಗಾರರು ಮೀನುಗಾರಿಕೆ ಸಮುದ್ರಕ್ಕೆ ತೆರಳದೆ ಇರುವುದು, ಪ್ರಾಕೃತಿಕ ವಿಕೋಪದ ಅಪಾಯಗಳು ಸಂಭವಿಸುವ ಬಗ್ಗೆ ಮುನ್ಸೂಚನೆ ಇದ್ದರೆ ಸಾರ್ವಜನಿಕರು ತಕ್ಷಣ ಸ್ಥಳೀಯಾಡಳಿತವನ್ನು ಸಂಪರ್ಕಿಸುವುದು, ಸಾರ್ವಜನಿಕರು ಜಿಲ್ಲಾಡಳಿತದ ಆದೇಶವನ್ನು ಪಾಲಿಸುವ ಮೂಲಕ ಸಂಭಾವ್ಯ ಮಳೆ ಹಾನಿ, ಪ್ರಾಕೃತಿಕ ವಿಕೋಪ ತಡೆಗಟ್ಟಲು ನೆರವಾಗುವಂತೆ ಜಿಲ್ಲಾಧಿಕಾರಿಗಳು ತಮ್ಮ ಆದೇಶದಲ್ಲಿ ಸೂಚಿಸಿದ್ದಾರೆ. ಪ್ರಕೃತಿ ವಿಕೋಪಕ್ಕೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆಗಳಿದ್ದಲ್ಲಿ ಜಿಲ್ಲಾ ತುರ್ತು ಸೇವೆ ಟೋಲ್ ಫ್ರೀ ಸಂಖ್ಯೆ 24*7 ಕಂಟ್ರೋಲ್ ರೂಂ 1077 ಅಥವಾ ದೂರವಾಣಿ ಸಂಖ್ಯೆ 0824-2442590 ಗೆ ಸಂಪರ್ಕಿಸುವಂತೆ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಸಾರ್ವಜನಿಕರಿಗೆ ತಿಳಿಸಿದ್ದಾರೆ.
0 comments:
Post a Comment