ಬಂಟ್ವಾಳ, ಜುಲೈ 06, 2024 (ಕರಾವಳಿ ಟೈಮ್ಸ್) : ತಾಲೂಕಿನ ಮಣಿನಾಲ್ಕೂರು ಗ್ರಾಮದ ನೇಲ್ಯಪಲ್ಕೆ ಎಂಬಲ್ಲಿ ಶನಿವಾರ ಬೆಳಿಗ್ಗೆ ಭಾರಿ ಬಿರುಗಾಳಿ ಸಹಿತ ಮಳೆಯಾಗಿದೆ. ಬಿರುಗಾಳಿ ತೀವ್ರತೆಯಿಂದ ಕೂಡಿದ್ದು, ಸ್ಥಳೀಯ ನಿವಾಸಿಗಳಲ್ಲಿ ಆತಂಕ ಉಂಟು ಮಾಡಿತ್ತು. ಗಾಳಿಯ ರಭಸಕ್ಕೆ ಸ್ಥಳೀಯವಾಗಿ ಹಲವು ಮನೆ-ಅಂಗಡಿಗಳ ಮೇಲ್ಛಾವಣಿ, ತಗಟು, ಸಿಮೆಂಟ್ ಶೀಟುಗಳು ಹಾರಿ ನೆಲಕ್ಕುರಳಿದೆ. ಶಾಲಾ-ಕಾಲೇಜುಗಳಿಗೆ ಶುಕ್ರವಾರ ರಾತ್ರಿಯೇ ಜಿಲ್ಲಾಧಿಕಾರಿ ರಜೆ ಘೋಷಿಸಿದ್ದರಿಂದಾಗಿ ಶಾಲಾ ಮಕ್ಕಳು ಬಿರುಗಾಳಿಯ ಹೊಡೆತಕ್ಕೆ ಸಿಲುಕುವುದು ತಪ್ಪಿ ಹೋಗಿದೆ. ಮಕ್ಕಳು ಶಾಲೆಗೆ ಹೊರಡುವ ಅದೇ ಸಮಯದಲ್ಲಿ ಈ ಬಿರುಗಾಳಿ ಬೀಸಿದ್ದು, ಭಾರೀ ಮಳೆಯಾಗಿದೆ.
ಇಲ್ಲಿನ ನಿವಾಸಿ ಅಬ್ದುಲ್ ಖಾದರ್ ಅವರ ಮನೆಗೆ ಬಿರುಗಾಳಿಯಿಂದ ಭಾಗಶಃ ಹಾನಿಯಾಗಿದೆ. ಯೂನುಸ್ ಅವರ ಮನೆಗೆ ಮರ ಬಿದ್ದು ಭಾಗಶಃ ಹಾನಿಯಾಗಿರುವುದು ಬಿಟ್ಟರೆ ಹೆಚ್ಚಿನ ಅನಾಹುತ ಯಾವುದೂ ಸಂಭವಿಸಿಲ್ಲದೆ ಇರುವುದರಿಂದ ಸ್ಥಳೀಯರು ನಿಟ್ಟುಸಿರು ಬಿಟ್ಟಿದ್ದಾರೆ.
0 comments:
Post a Comment