ಕಡಬ, ಜುಲೈ 01, 2024 (ಕರಾವಳಿ ಟೈಮ್ಸ್) : ತಾಲೂಕಿನ ಎಡಮಂಗಲ ಗ್ರಾಮದ ದಡ್ಡು ಎಂಬಲ್ಲಿ 2 ವರ್ಷಗಳ ಹಿಂದೆ ನಡೆದ ಕಳವು ಪ್ರಕರಣ ಬೇಧಿಸಿರುವ ಬೆಳ್ಳಾರೆ ಪೊಲೀಸರು ಆರೋಪಿಯನ್ನು ಬಂಧಿಸಿ ಕಳವಾದ ಸೊತ್ತುಗಳನ್ನು ವಶಪಡಿಸಿಕೊಳ್ಳುವಲ್ಲಿ ಸಫಲರಾಗಿದ್ದಾರೆ.
ಬಂಧಿತ ಆರೋಪಿಯನ್ನು ಬೆಳ್ತಂಗಡಿ ತಾಲೂಕು, ನೆರಿಯಾ ನಿವಾಸಿ ಶರತ್ (24) ಎಂದು ಹೆಸರಿಸಲಾಗಿದೆ. ಬೆಳ್ಳಾರೆ ಪೊಲೀಸ್ ಠಾಣಾ ವ್ಯಾಪ್ತಿಯ ಕಡಬ ತಾಲೂಕು ಎಡಮಂಗಲ ಗ್ರಾಮದ ದಡ್ಡು ಎಂಬಲ್ಲಿ 2 ವರ್ಷಗಳ ಹಿಂದೆ ಸುಮಾರು 1.48 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳು ಹಾಗೂ 30 ಸಾವಿರ ರೂಪಾಯಿ ನಗದು ಹಣ ಕಳವು ಪ್ರಕರಣ ನಡೆದಿದ್ದು, ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 22/2022 ಕಲಂ 457,380 ಐಪಿಸಿಯಂತೆ ಪ್ರಕರಣ ದಾಖಲಾಗಿತ್ತು.
ಕಳೆದ ಎರಡು ವರ್ಷಗಳಿಂದ ತನಿಖೆ ಮುಂದುವರಿಸಿದ ಪೊಲೀಸರು ಇದೀಗ ಕೊನೆಗೂ ಆರೋಪಿಯನ್ನು ಹೆಡೆಮುರಿ ಕಟ್ಟುವಲ್ಲಿ ಸಫಲರಾಗಿದ್ದಾರೆ. ಬಂಧಿತ ಆರೋಪಿಯಿಂದ ಕಳವು ಮಾಡಿದ ಸೊತ್ತುಗಳನ್ನು ಪೊಲೀಸರು ಪತ್ತೆ ಮಾಡಿ ಸ್ವಾದೀನಪಡಿಸಿಕೊಂಡಿದ್ದಾರೆ.
ಪ್ರಕರಣದ ಪತ್ತೆ ಕಾರ್ಯದಲ್ಲಿ ಜಿಲ್ಲಾ ಎಸ್ಪಿ ಸಿ ಬಿ ರಿಷ್ಯಂತ್, ಎಡಿಶನಲ್ ಎಸ್ಪಿ ಜಗದೀಶ್ ಎಂ ಮತ್ತು ರಾಜೇಂದ್ರ ಅವರುಗಳ ಮಾರ್ಗದರ್ಶನದಲ್ಲಿ ಪುತ್ತೂರು ಸಹಾಯಕ ಪ್ರಭಾರ ಎಎಸ್ಪಿ ವಿಜಯ ಪ್ರಸಾದ್, ಸುಳ್ಯ ವೃತ್ತ ನಿರೀಕ್ಷಕ ಸತ್ಯನಾರಾಯಣ ಕೆ ಅವರ ನೇತೃತ್ವದಲ್ಲಿ, ಬೆಳ್ಳಾರೆ ಪೊಲೀಸ್ ಠಾಣಾ ಪಿಎಸ್ಸೈ ಸಂತೋಷ್ ಬಿ ಪಿ, ಠಾಣಾ ಸಿಬ್ಬಂಧಿಗಳಾದ ನವೀನ ಕೆ, ಚಂದ್ರಶೇಖರ್ ಗೌಡ, ಸಂತೋಷ್ ಜಿ, ಚಾಲಕ ಪುರಂದರ ಹಾಗೂ ಬೆರಳು ಮುದ್ರೆ ಘಟಕದ ಪ್ರಶಾಂತ್ ಹೊಸಮನಿ ಮತ್ತು ಸಚಿನ್ ಬಿ ಬಿ ಅವರನ್ನೊಳಗೊಂಡ ವಿಶೇಷ ತನಿಖಾ ತಂಡ ಕಾರ್ಯನಿರ್ವಹಿಸಿದೆ.
0 comments:
Post a Comment