ಬಂಟ್ವಾಳ, ಜುಲೈ 14, 2024 (ಕರಾವಳಿ ಟೈಮ್ಸ್) : ಇಲ್ಲಿನ ಗ್ರಾಮಾಂತರ ಠಾಣಾ ವ್ಯಾಪ್ತಿಯ ಇರಾ ಗ್ರಾಮದಲ್ಲಿ ದಂಪತಿ ಮನೆಗೆ ಬೀಗ ಹಾಕಿ ಕೆಲಸಕ್ಕೆ ಹೋಗಿದ್ದ ವೇಳೆ ಒಳ ಪ್ರವೇಶಿಸಿದ ಕಳ್ಳರು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಎಗರಿಸಿದ ಘಟನೆ ಶನಿವಾರ ಸಂಜೆ ಬೆಳಕಿಗೆ ಬಂದಿದೆ.
ಇರಾ ಗ್ರಾಮದ ನಿವಾಸಿ ವನಿತಾ (38) ಎಂಬವರ ಮನಯಲ್ಲಿ ಈ ಕಳವು ಕೃತ್ಯ ನಡೆದಿದೆ. ಇವರು ಹಾಗೂ ಪತಿ ಶನಿವಾರ ಬೆಳಿಗ್ಗೆ ಮನೆಯ ಮುಖ್ಯ ಬಾಗಿಲಿಗೆ ಬೀಗ ಹಾಕಿ ಕೆಲಸಕ್ಕೆ ಹೋಗಿದ್ದರು. ಸಂಜೆ ವೇಳೆ ವನಿತಾ ಅವರು ಕೆಲಸದಲ್ಲಿರುವಾಗ ಅವರ ಅಕ್ಕ ಸುಜಾತ ಅವರು ಪೋನ್ ಮಾಡಿ ಮನೆಯ ಎದುರಿನ ಬಾಗಿಲಿನ ಬೀಗವನ್ನು ಯಾರೋ ಮುರಿದು ಕಳ್ಳರು ನುಗ್ಗಿರುವಂತೆ ಕಂಡು ಬರುವುದಾಗಿ ತಿಳಿಸಿದ ಹಿನ್ನಲೆಯಲ್ಲಿ ತಕ್ಷಣ ಮನೆಗೆ ಬಂದು ನೋಡಿದಾಗ ಮನೆಯ ಬಾಗಿಲಿಗೆ ಹಾಕಿದ ಬೀಗವನ್ನು ಯಾವುದೋ ಸಾಧನದಿಂದ ತೆರೆದಿರುವುದು ಕಂಡು ಬಂದಿರುತ್ತದೆ. ಬಳಿಕ ಮನೆಯ ಒಳಗೆ ಹೋಗಿ ನೋಡಿದಾಗ ಬೆಡ್ ರೂಮ್ ನಲ್ಲಿದ್ದ ಕಪಾಟನ್ನು ಯಾರೋ ಕಳ್ಳರು ಸಾಧನದಿಂದ ತೆರೆದಿದ್ದು, ಅದರಲ್ಲಿದ್ದ ಬಟ್ಟೆ ಬರೆ ಹಾಗೂ ಇನ್ನಿತರ ವಸ್ತುಗಳು ಚೆಲ್ಲಾಪಿಲ್ಲಿಯಾಗಿತ್ತು. ಕಪಾಟಿನ ಸೇಫ್ ಲಾಕರ್ ನಲ್ಲಿದ್ದ ಸುಮಾರು 4.14 ಲಕ್ಷ ರೂಪಾಯಿ ಮೌಲ್ಯದ ಒಟ್ಟು 69 ಗ್ರಾಂ ತೂಕದ ಚಿನ್ನಾಭರಣಗಳು ಕಳವಾಗಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
0 comments:
Post a Comment