ಬಂಟ್ವಾಳ, ಜುಲೈ 20, 2024 (ಕರಾವಳಿ ಟೈಮ್ಸ್) : ಪುತ್ತೂರು-ಸುಳ್ಯ ವಿಧಾನಸಭಾ ಕ್ಷೇತ್ರಗಳಿಗೆ ಕುಡಿಯುವ ನೀರಿನ ಉದ್ದೇಶದ ಬಹುಗ್ರಾಮ ಯೋಜನೆಗೆ ಬಾಳ್ತಿಲ-ಶಂಭೂರು ಗ್ರಾಮದ ಗಡಿ ಪ್ರದೇಶದ ಕಂದಾಯಮಜಲುನಲ್ಲಿ ಅನುಷ್ಠಾನಗೊಳ್ಳುತ್ತಿರುವ ಜಾಕ್ ವೆಲ್‍ಗಾಗಿ ಬಂಡೆ ಸ್ಪೋಟಿಸಿ ಸ್ಥಳೀಯ ಮನೆಗಳಿಗೆ ಹಾನಿಯಾಗಿರುವ ಹಿನ್ನೆಲೆಯಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬಳಿಕ ಸ್ಥಳೀಯ ಜನಪ್ರತಿನಿಧಿಗಳು, ಗ್ರಾಮಸ್ಥರು ಹಾಗೂ ಅಧಿಕಾರಿಗಳ ಜತೆ ಸಮಾಲೋಚನೆ ನಡೆಸಿದ ಅವರು ಮನೆ ಹಾನಿಯಾಗಿರುವ ಎಲ್ಲಾ ಮನೆಗಳನ್ನು ಕಂದಾಯ ಇಲಾಖೆ ಪಂಚಾಯತ್‍ರಾಜ್ ಎಂಜಿನಿಯರಿಂಗ್ ವಿಭಾಗದ ಮೂಲಕ ಸ್ಥಳೀಯ ಪ್ರಮುಖರೊಂದಿಗೆ ಸರ್ವೇ ನಡೆಸಿ ವರದಿ ಸಿದ್ಧಪಡಿಸಬೇಕು. ಆ ವರದಿ ಆಧಾರದಲ್ಲಿ ಮುಂದೆ ಮನೆಗಳ ದುರಸ್ತಿಗೆ ಸಂಬಂಧಿಸಿ ಕಾಮಗಾರಿ ನಡೆಸುವರೇ ಕ್ರಮಕೈಗೊಳ್ಳಬೇಕು ಎಂದರು. ಈ ಬಗ್ಗೆ ಸ್ಥಳೀಯ 5 ಮಂದಿಗೆ ಜವಾಬ್ದಾರಿ ನೀಡಲಾಯಿತು.
ಅದೇ ರೀತಿ ಕಾಮಗಾರಿ ನಡೆಸುವ ಗುತ್ತಿಗೆ ಸಂಸ್ಥೆಯ ಘನ ವಾಹನಗಳು ತೆರಳಿ ರಸ್ತೆ ಹದಗೆಟ್ಟಿದೆ ಎಂದು ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಅದರ ದುರಸ್ತಿಗೂ ಕ್ರಮಕೈಗೊಳ್ಳುವಂತೆ ಎಇಇ ಜಿ ಕೆ ನಾಯ್ಕ್ ಅವರಿಗೆ ಶಾಸಕರು ಸೂಚಿಸಿದರು. ಸ್ಥಳೀಯ ವರ್ಗ ಜಾಗಗಳಿಗೆ ತೊಂದರೆಯಾಗದಂತೆ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾಮಗಾರಿ ಮುಂದುವರಿಸಬೇಕು, ಜತೆಗೆ ಮುಂದೆ ಸ್ಪೋಟ ನಡೆಸುವ ವೇಳೆ ಮನೆಗಳ ಪಕ್ಕದಲ್ಲಿ ಒಬ್ಬ ವ್ಯಕ್ತಿಯನ್ನು ನಿಲ್ಲಿಸುವಂತೆ ಯೋಜನೆಯ ಪ್ರಾಜೆಕ್ಟ್ ಮ್ಯಾನೇಜರ್ ಶ್ರೀನಿವಾಸ್ ಅವರಿಗೆ ಸೂಚಿಸಿದರು. ಯೋಜನೆಯ ನೀಲ ನಕಾಶೆಯನ್ನು ಗ್ರಾ ಪಂ ಗಳಿಗೆ ನೀಡುವಂತೆ ಸೂಚಿಸಿದರು.
ಈ ಸಂದರ್ಭ ಕಂದಾಯ ನಿರೀಕ್ಷಕ ವಿಜಯ್ ಆರ್, ಗ್ರಾಮ ಆಡಳಿತ ಅಧಿಕಾರಿ ಯಶ್ವಿತಾ, ಬಂಟ್ವಾಳ ಬಿಜೆಪಿ ಅಧ್ಯಕ್ಷ ಚೆನ್ನಪ್ಪ ಆರ್ ಕೋಟ್ಯಾನ್, ಜಿಲ್ಲಾ ಕಾರ್ಯದರ್ಶಿ ದಿನೇಶ್ ಅಮ್ಟೂರು, ಕ್ಷೇತ್ರ ಪ್ರಧಾನ ಕಾರ್ಯದರ್ಶಿ ಸುದರ್ಶನ್ ಬಜ, ತಾ ಪಂ ಮಾಜಿ ಉಪಾಧ್ಯಕ್ಷ ಅನಂದ ಶಂಭೂರು, ನರಿಕೊಂಬು ಗ್ರಾ ಪಂ ಅಧ್ಯಕ್ಷ ಸಂತೋಷ್ ಶಂಭೂರು, ಸದಸ್ಯರಾದ ಪ್ರಕಾಶ್ ಮಡಿಮುಗೇರು, ಯೋಗೀಶ್ ಶಾಂತಿಲ, ಬಾಳ್ತಿಲ ಗ್ರಾ ಪಂ ಉಪಾಧ್ಯಕ್ಷೆ ರಂಜಿನಿ, ಸದಸ್ಯರಾದ ಶಿವರಾಜ್ ಕಾಂದಿಲ, ಚಂದ್ರಶೇಖರ್, ಆನಂದ ಶೆಟ್ಟಿ, ವಿಠಲ ನಾಯ್ಕ್, ಶರತ್ ಮೊದಲಾದವರು ಉಪಸ್ಥಿತರಿದ್ದರು.
0 comments:
Post a Comment