ಬಂಟ್ವಾಳ, ಜುಲೈ 19, 2024 (ಕರಾವಳಿ ಟೈಮ್ಸ್) : ತಾಲೂಕಿನಾದ್ಯಂತ ಕಳೆದ ಕೆಲ ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ನೇತ್ರಾವತಿ ನದಿ ಅಪಾಯದ ಮಟ್ಟದ ಸನಿಹದಲ್ಲಿ ಹರಿಯುತ್ತಿದೆ. ಮಧ್ಯಾಹ್ನ ವೇಳೆಗೆ ಅಪಾಯದ ಮಟ್ಟವಾಗಿರುವ 8.6ರಲ್ಲಿ ಹರಿಯುತ್ತಿದ್ದ ನೇತ್ರಾವತಿ ನದಿ ರಾತ್ರಿ 9 ಗಂಟೆ ವೇಳೆಗೆ ಕೊಂಚ ಇಳಿಮುಖವಾಗಿದ್ದು, 8.3ರಲ್ಲಿ ಹರಿಯುತ್ತಿದೆ.
ಈಗಾಗಲೇ ತಾಲೂಕಿನ ಪಾಣೆಮಂಗಳೂರು ಸಮೀಪದ ಆಲಡ್ಕ ಪಡ್ಪು, ಬಂಟ್ವಾಳ ಸಮೀಪದ ಬಡ್ಡಕಟ್ಟೆ, ಜಕ್ರಿಬೆಟ್ಟು, ಗೂಡಿನಬಳಿ ಸಮೀಪದ ಕಂಚಿಕಾರಪೇಟೆ ಮೊದಲಾದ ತಗ್ಗು ಪ್ರದೇಶಗಳಿಗೆ ನೆರೆ ನೀರು ಆವರಿಸಿದ್ದು, ನೆರೆಬಾಧಿತ ಪ್ರದೇಶಗಳ ನಿವಾಸಿಗಳು ಸ್ವಯಂಪ್ರೇರಣೆಯಿಂದ ಸ್ಥಳಾಂತರಗೊಂಡಿದ್ದಾರೆ. ಸಾಮಾನ್ಯ ನೆರೆ ನೀರು ಆವರಿಸಿರುವುದು ಬಿಟ್ಟರೆ ಯಾವುದೇ ಅನಾಹುತಗಳು ಸಂಭವಿಸಿಲ್ಲ. ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ತಾಲೂಕು ತಹಶೀಲ್ದಾರ್ ಸಹಿತ ವಿವಿಧ ಇಲಾಖಾಧಿಕಾರಿಗಳು ಇಲಾಖಾ ಸಿಬ್ಬಂದಿಗಳೊಂದಿಗೆ ತಂಡ ಕಟ್ಟಿಕೊಂಡು ಆಹೋರಾತ್ರಿ ಸಂಚಾರ ನಡೆಸುವ ಮೂಲಕ ಜನರ ಪ್ರಾಣ ಹಾಗೂ ಆಸ್ತಿ ರಕ್ಷಣೆಯ ನಿಟ್ಟಿನಲ್ಲಿ ಸದಾ ಕಾರ್ಯನಿರತರಾಗಿದ್ದಾರೆ.
ತಾಲೂಕಿನ ವಿವಿಧೆಡೆ ಮಳೆ ಸಂಬಂಧಿ ನಷ್ಟಗಳು ಸಂಭವಿಸಿರುವುದು ಕೂಡಾ ವರದಿಯಾಗಿದೆ. ಬಾಳ್ತಿಲ ಗ್ರಾಮದ ಕಂಟಿಕ ನಿವಾಸಿ ಸೋಮಪ್ಪ ನಾಯ್ಕ ಬಿನ್ ದುಗ್ಗ ನಾಯ್ಕ ಅವರ ಮನೆಯ ಮೇಲೆ ಅಡಿಕೆ ಮರ ಬಿದ್ದು ಸಿಮೆಂಟ್ ಛಾವಣಿಗೆ ಹಾನಿಯಾಗಿದೆ. ಬಾಳ್ತಿಲ ಗ್ರಾಮದ ನೀರಪಾದೆ ನಿವಾಸಿ ಸುಮತಿ ಕೋಂ ಭಾಸ್ಕರ ಅವರ ಮನೆಯ ಹಂಚು ಛಾವಣಿ ಮೇಲೆ ಅಡಿಕೆ ಮರ ಬಿದ್ದು ಹಾನಿ ಸಂಭವಿಸಿದೆ.
ಸಂಗಬೆಟ್ಟು ಗ್ರಾಮದ ಪರನೀರು ನಿವಾಸಿ ನಾಗೇಶ /ಧರ್ಣಪ್ಪ ಪೂಜಾರಿ ಅವರ ವಾಸ್ತವ್ಯದ ಮನೆಯ ಸಮೀಪ ರೂಟ್ಟಿ ತಯಾರಿಕ ಕೊಠಡಿಗೆ ಮರ ಬಿದ್ದು ಹಾನಿಯಾಗಿದೆ. ಕೇಪು ಗ್ರಾಮದ ಚೆಲ್ಲಡ್ಕ ನಿವಾಸಿ ಶಶಿಶೇಖರ ಭಂಡಾರಿ ಬಿನ್ ಮಾಯಿಲಪ್ಪ ಭಂಡಾರಿ ಅವರ ಮನೆಗೆ ಸಿಡಿಲು ಮಿಂಚು ಆಘಾತದಿಂದ ಶಾರ್ಟ್ ಸರ್ಕ್ಯುಟ್ ಉಂಟಾಗಿ ಮನೆಯ ಭಾಗಶ ಮಾಡು ಮತ್ತು ಗೃಹಪಯೋಗಿ ವಸ್ತುಗಳು ಹಾನಿಗೊಂಡಿದೆ. ಕೊಯಿಲ ಗ್ರಾಮದ ಅಂತರಾ ಎಂಬಲ್ಲಿ ಗ್ರಾಮ ಪಂಚಾಯತ್ ರಸ್ತೆಯ ಬದಿಯಲ್ಲಿರುವ ಗುಡ್ಡ ಕುಸಿದಿದ್ದು, ಗ್ರಾಮ ಪಂಚಾಯತ್ ವತಿಯಿಂದ ತೆರವು ಕಾರ್ಯಾಚರಣೆ ನಡೆಯುತ್ತಿದೆ. ಕುಳ ಗ್ರಾಮದ ಸೇಕೆಹಿತ್ಲು ನಿವಾಸಿ ರಾಘವ ಎಂಬವರಿಗೆ ಸೇರಿದ ಕೋಳಿ ಫಾರಂ ಶೆಡ್ ಕುಸಿದು ಬಿದ್ದು ಸಂಪೂರ್ಣ ಹಾನಿ ಸಂಭವಿಸಿದೆ.
0 comments:
Post a Comment