ಪುತ್ತೂರು, ಜುಲೈ 29, 2024 (ಕರಾವಳಿ ಟೈಮ್ಸ್) : ಯುವಕರ ತಂಡವೊಂದು ತಲವಾರು ಹಿಡಿದು ಬೀದಿ ಕಾಳಗ ನಡೆಸಿದ ಘಟನೆ ನೆಟ್ಟಣಿಗೆ ಮುಡ್ನೂರು ಗ್ರಾಮದ ಪಂಚೋಡಿ ಎಂಬಲ್ಲಿ ಭಾನುವಾರ ರಾತ್ರಿ ನಡೆದಿದ್ದು, ಆರೋಪಿಗಳ ಪೈಕಿ ಇಬ್ಬರನ್ನು ಪುತ್ತೂರು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಇತರ ಆರೋಪಿಗಳು ಓಡಿ ಪರಾರಿಯಾಗಿದ್ದಾರೆ.
ಬಂಧಿತ ಆರೋಪಿಗಳನ್ನು ರಾಜೇಶ್ ಪಂಚೋಡಿ ಹಾಗೂ ಸಂಜನ್ ರೈ ಎಂದು ಹೆಸರಿಸಲಾಗಿದ್ದು, ಪರಾರಿಯಾದವರನ್ನು ಪ್ರವೀಶ್ ನಾಯರ್, ರಾಕೇಶ್ ಪಂಚೋಡಿ, ಜಯರಾಜ್, ಪ್ರಜ್ವಲ್ ಮಡ್ಯಾಳ ಮಜಲು, ಚರಣ್ ಮಡ್ಯಾಳ ಮಜಲು ಹಾಗೂ ಇತರರು ಎಂದು ಗುರುತಿಸಲಾಗಿದೆ.
ಆರೋಪಿಗಳ ತಂಡ ಭಾನುವಾರ ರಾತ್ರಿ ಪರಸ್ಪರ ಬೈದಾಡಿಕೊಂಡು ಹೊಡೆದಾಟ ನಡೆಸುತ್ತಿದ್ದು, ಆರೋಪಿತರ ಪೈಕಿ ರಾಕೇಶ್ ಪಂಚೋಡಿ ಎಂಬಾತ ತಲ್ವಾರ್ ಹಿಡಿದುಕೊಂಡು ಹಲ್ಲೆಗೆ ಯತ್ನಿಸುತ್ತಿದ್ದಾಗ, ಸ್ಥಳಕ್ಕೆ ತೆರಳಿದ ಪುತ್ತೂರು ಗ್ರಾಮಾಂತರ ಠಾಣಾ ಪಿಎಸ್ಸೈ ಜಂಬೂರಾಜ್ ಬಿ ಮಹಾಜನ್ ಅವರ ನೇತೃತ್ವದ ಪೊಲೀಸರು ಹಾಗೂ ಹೋಮ್ ಗಾರ್ಡ್ ಸೇರಿ ಆತನ ಕೈಯಿಂದ ತಲ್ವಾರನ್ನು ಕಸಿದುಕೊಂಡಿದ್ದು, ರಾಜೇಶ್ ಪಂಚೋಡಿ ಮತ್ತು ಸಂಜನ್ ರೈ ರವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಉಳಿದವರು ಓಡಿ ಹೋಗಿರುತ್ತಾರೆ.
ಸಾರ್ವಜನಿಕ ರಸ್ತೆಯಲ್ಲಿ ಶಾಂತಿ ಭಂಗವಾಗುವಂತೆ ಪರಸ್ಪರ ಅವಾಚ್ಯ ಶಬ್ಧಗಳಿಂದ ಬೈದುಕೊಂಡು, ಕೈ ಕೈ ಮಿಲಾಯಿಸಿಕೊಂಡು, ಮಾರಕ ಆಯುಧವಾದ ತಲ್ವಾರನ್ನು ಹಿಡಿದುಕೊಂಡು ಸಾರ್ವಜನಿಕ ಸ್ಥಳದಲ್ಲಿ ಕಲಹವನ್ನುಂಟು ಮಾಡಿ ಅಪರಾಧ ಎಸಗಿರುವ ಆರೋಪಿಗಳ ವಿರುದ್ದ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 90/2024 ಕಲಂ : 194(2) ಬಿ ಎನ್ ಎಸ್ ಎಸ್ 352, ಆರ್/ಡಬ್ಲುö್ಯ 190 ಬಿ ಎನ್ ಎಸ್ 25(1ಬಿ)(ಬಿ) ಶಸ್ತಾಸ್ತ್ರ ಕಾಯ್ದೆಯಂತೆ ಪ್ರಕರಣ ದಾಖಲಿಸಲಾಗಿದೆ.
0 comments:
Post a Comment