ಬಂಟ್ವಾಳ, ಜುಲೈ 24, 2024 (ಕರಾವಳಿ ಟೈಮ್ಸ್) : ಸಾರ್ವಜನಿಕ ಸ್ಥಳದಲ್ಲಿ ಮಾದಕ ವಸ್ತು ಸೇವಿಸಿ ಅಸಭ್ಯವಾಗಿ ವರ್ತಿಸುತ್ತಿದ್ದ ಮೂವರು ಆರೋಪಿಗಳನ್ನು ಸಾರ್ವಜನಿಕರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಮಂಚಿ ಗ್ರಾಮದ ಕುಕ್ಕಾಜೆ ಜಂಕ್ಷನ್ನಿನಲ್ಲಿ ಮಂಗಳವಾರ ಬೆಳಿಗ್ಗೆ ನಡೆದಿದೆ.
ಬಂಧಿತ ಆರೋಪಿಗಳನ್ನು ಸಜಿಪಮುನ್ನೂರು ಗ್ರಾಮದ ನಂದಾವರಕೋಟೆ ನಿವಾಸಿ ಮಹಮ್ಮದ್ ರಾಫಿ (19), ಬಿ ಮೂಡ ಗ್ರಾಮದ ನಿವಾಸಿ ಮಹಮ್ಮದ್ ಇರ್ಷಾದ್ (23) ಹಾಗೂ ಮಂಚಿ ಗ್ರಾಮದ ನಿವಾಸಿ ದಾವುದುಲ್ ಅಮೀರ್ (26) ಎಂದು ಹೆಸರಿಸಲಾಗಿದೆ.
ಇವರು ಮಂಗಳವಾರ ಬೆಳಿಗ್ಗೆ ಕುಕ್ಕಾಜೆ ಜಂಕ್ಷನ್ನಿನಲ್ಲಿ ಮಾದಕ ವಸ್ತು ಸೇವಿಸಿ ಅನುಚಿತವಾಗಿ ಹಾಗೂ ಸಂಶಯಾಸ್ಪದವಾಗಿ ವರ್ತಿಸುತ್ತಿದ್ದರು. ಇವರನ್ನು ಗಮನಿಸಿ ಸಂಶಯಿತರಾದ ಸ್ಥಳೀಯರು ಅವರನ್ನು ಹಿಡಿದು ಪೊಲೀಸರಿಗೆ ಕರೆ ಮಾಡಿದ್ದಾರೆ. ಖಚಿತ ಮಾಹಿತಿ ಬಂದ ಮೇರೆಗೆ ಸ್ಥಳಕ್ಕಾಗಮಿಸಿದ 112 ಸಹಾಯವಾಣಿ ವಾಹನದ ಪೊಲೀಸರು ಪರಿಶೀಲಿಸಿದಾಗ ಮೂವರು ಆಸಾಮಿಗಳು ಮಾದಕ ವಸ್ತು ಸೇವನೆ ಮಾಡಿರುವಂತೆ ಕಂಡು ಬಂದ ಹಿನ್ನೆಲೆಯಲ್ಲಿ ಅವರನ್ನು ಹೆಚ್ಚಿನ ವಿಚಾರಣೆಗಾಗಿ ಠಾಣೆಗೆ ಕರೆತಂದು ವಿಚಾರಿಸಿದ ಬಳಿಕ ವೈದ್ಯಕೀಯ ತಪಾಸಣೆಗೆ ಒಳಪಡಿಸಿದಾಗ ಅವರು ಮಾದಕ ವಸ್ತು ಸೇವನೆ ಮಾಡಿರುವುದು ದೃಢಪಟ್ಟ ಹಿನ್ನಲೆಯಲ್ಲಿ ಆರೋಪಿಗಳ ವಿರುದ್ದ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 76/2024 ಕಲಂ 27 (ಬಿ) ಎನ್ ಡಿ ಪಿ ಎಸ್ ಕಾಯ್ದೆಯಂತೆ ಪ್ರಕರಣ ದಾಖಲಾಗಿದೆ.
0 comments:
Post a Comment