ಬಂಟ್ವಾಳ, ಜುಲೈ 30, 2024 (ಕರಾವಳಿ ಟೈಮ್ಸ್) : ತಾಲೂಕಿನ ಜೀವನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಹಲವು ತಗ್ಗು ಪ್ರದೇಶಗಳು ಜಲಾವೃತಗೊಂಡಿದೆ. ರಸ್ತೆ-ಗದ್ದೆಗಳು ನೀರಿನಂದ ಆವೃತವಾಗಿದ್ದು, ಇನ್ನಷ್ಟು ಹೆಚ್ಚಿನ ಪ್ರಮಾಣದ ನೆರೆಭೀತಿ ಎದುರಾಗಿದೆ.
ನೆರೆಬಾಧಿತ ಪ್ರದೇಶಗಳಿಗೆ ಬಂಟ್ವಾಳ ಶಾಸಕ ಯು ರಾಜೇಶ್ ನಾಯ್ಕ್ ಅವರು ಬೇಟಿ ನೀಡಿ ಸಂತ್ರಸ್ತ ಕುಟುಂಬಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡುವಂತೆ ತಹಶಿಲ್ದಾರ್ ಅವರಿಗೆ ಸೂಚಿಸಿದ್ದಾರೆ. ನಾವೂರ ಗ್ರಾಮದ ಮೈಂದಾಳ ಎಂಬಲ್ಲಿ ಸುಮಾರು 8 ಮನೆಗಳಿಗೆ ನೆರೆ ನೀರು ನುಗ್ಗಿದ್ದು, ಅಲ್ಲಿಗೆ ಶಾಸಕರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ತಾಲೂಕಿನ ಪಾಣೆಮಂಗಳೂರು, ಆಲಡ್ಕ, ಬೋಗೋಡಿ, ಜೈನರಪೇಟೆ, ಬಂಟ್ವಾಳ, ಜಕ್ರಿಬೆಟ್ಟು, ಬಡ್ಡಕಟ್ಟೆ, ನಾವೂರು, ಸರಪಾಡಿ, ಮಣಿನಾಲ್ಕೂರು ಪ್ರದೇಶಗಳು ನೆರೆ ಬಾಧಿತವಾಗಿದೆ. ಕೃಷಿ ತೋಟಗಳು, ಗದ್ದೆಗಳು ಮುಳುಗಡೆಯಾಗಿದೆ. ಬಂಟ್ವಾಳ-ಜಕ್ರಿಬೆಟ್ಟು ರಸ್ತೆಯ ಕೋಟೆಕಣಿ, ಬಿ ಸಿ ರೋಡಿನ ಬಸ್ತಿಪಡ್ಪು, ಆಲಡ್ಕ ಪ್ರದೇಶ ಮೊದಲಾದ ಪ್ರದೇಶದಲ್ಲಿ ರಸ್ತೆಗೆ ನೀರು ಬಿದ್ದು ಸಂಚಾರ ಕಡಿತಗೊಂಡಿದೆ.
ಕಳೆದ ಕೆಲವು ದಿನಗಳಿಂದ ಅತಿಯಾಗಿ ಮಳೆಯಾಗುತ್ತಿದ್ದು, ತಗ್ಗು ಪ್ರದೇಶಗಳ ಮನೆಗಳಿಗೆ ನೀರು ನುಗ್ಗಿದೆ, ಅಂತಹ ಅಪಾಯಕಾರಿ ಮನೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ಸುರಕ್ಷಿತವಲ್ಲದ ಮತ್ತು ನೀರು ನುಗ್ಗಿ ಅಪಾಯವಿರುವ ಮನೆಗಳ ಕುಟುಂಬಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡುವಂತೆ ತಾಲೂಕಿನ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದ ಶಾಸಕರು, ಅಗತ್ಯವಿರುವ ಎಲ್ಲಾ ವ್ಯವಸ್ಥೆಗಳನ್ನು ತಾಲೂಕಾಡಳಿತದ ಮೂಲಕ ಮಾಡಲು ತಿಳಿಸಿದ್ದೇನೆ. ಮಳೆ ಕಡಿಮೆಯಾದ ಬಳಿಕ ನೆರೆ ಬಂದು ಹೋದ ಬಳಿಕ ಮನೆಗಳಲ್ಲಿ ಕೆಸರು ತುಂಬಿಕೊAಡಿರುತ್ತದೆ. ಅಂತಹ ಮನೆಗಳ ಕೆಸರನ್ನು ತೆಗೆಯಲು ತಾಲೂಕು ಆಡಳಿತ ಸೂಕ್ತವಾದ ವ್ಯವಸ್ಥೆ ಮಾಡುವಂತೆ ತಹಶಿಲ್ದಾರ್ ಅವರಿಗೆ ಸೂಚನೆ ನೀಡಿದ್ದೇನೆ ಎಂದರು.
ಈ ಸಂದರ್ಭ ತಾಲೂಕು ತಹಶಿಲ್ದಾರ್ ಅರ್ಚನಾ ಭಟ್, ಕಂದಾಯ ನಿರೀಕ್ಷಕ ಜನಾರ್ದನ, ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ಹರೀಶ್ ಸಹಿತ ಅಧಿಕಾರಿಗಳು ಸಿಬ್ಬಂದಿಗಳು ಉಪಸ್ಥಿತರಿದ್ದರು.
0 comments:
Post a Comment