ಬಂಟ್ವಾಳ, ಜುಲೈ 30, 2024 (ಕರಾವಳಿ ಟೈಮ್ಸ್) : ತಾಲೂಕಿನಾದ್ಯಂತ ಮಂಗಳವಾರ ಭಾರೀ ಮಳೆಯಿಂದಾಗಿ ಇಲ್ಲಿನ ಜೀವನದಿ ನೇತ್ರಾವತಿ ಉಕ್ಕಿ ಬರುತ್ತಿದ್ದು, ಅಪಾಯದ ಮಟ್ಟವನ್ನೂ ಮೀರಿ ಹರಿಯುತ್ತಿದ್ದು, ಪೇಟೆ-ಪಟ್ಟಣಗಳಿಗೂ ನೆರೆ ನೀರು ಆವರಿಸಿದೆ. ಈ ಮಧ್ಯೆ ಪಾಣೆಮಂಗಳೂರು ಸಮೀಪದ ಆಲಡ್ಕ ಎಂಬಲ್ಲಿ ಮೆಸ್ಕಾಂ ಅಧಿಕಾರಿಗಳ ಅಚಾತುರ್ಯದಿಂದಾಗಿ ಪ್ರವಾಹದ ಮಧ್ಯೆ ಇಡೀ ಊರೇ ಕತ್ತಲಲ್ಲಿ ಮುಳುಗಿ ಹೋಗಿದೆ.
ಆಲಡ್ಕದಲ್ಲಿ ಪ್ರವಾಹ ನೀರು ಮಂಗಳವಾರ ಬೆಳಿಗ್ಗೆಯಿಂದಲೇ ಜನವಸತಿ ಪ್ರದೇಶಕ್ಕೆ ನುಗ್ಗಿದೆ. ಪರಿಣಾಮ ಬೆಳಗ್ಗಿನಿಂದಲೇ ವಿದ್ಯುತ್ ಕಡಿತಗೊಂಡಿದೆ. ಪ್ರವಾಹ ಏರಿ ಬರುವ ತೋಡಿನ ಸಮೀಪದಲ್ಲೇ ಇಲ್ಲಿನ ವಿದ್ಯುತ್ ಟ್ರಾನ್ಸ್ ಫಾರ್ಮರನ್ನು ಮೆಸ್ಕಾಂ ಅಧಿಕಾರಿಗಳು ಅಳವಡಿಸಿರುವುದೇ ಈ ಆವಾಂತರಕ್ಕೆ ಕಾರಣವಾಗಿದೆ ಎನ್ನಲಾಗುತ್ತಿದೆ. ಈ ಹಿಂದೆ ಇಲ್ಲಿನ ವಿದ್ಯುತ್ ಪರಿವರ್ತಕ ನೆರೆ ನೀರಿನಿಂದ ಸುರಕ್ಷಿತ ಪ್ರದೇಶದಲ್ಲಿ ಅಳವಡಿಸಲಾಗಿತ್ತು. ಆ ಸಂದರ್ಭದಲ್ಲಿ ವರ್ಷಕ್ಕೆ 2-3 ಬಾರಿ ನೇತ್ರಾವತಿ ನದಿ 10-11 ಮೀಟರ್ ಉಕ್ಕಿ ಹರಿದು ಪ್ರವಾಹ ಬಂದರೂ ಈ ಪ್ರದೇಶಗಳಲ್ಲಿ ಯಾವುದೇ ವಿದ್ಯುತ್ ಸಮಸ್ಯೆ ಉಂಟಾಗುತ್ತಿರಲಿಲ್ಲ. ಆದರೆ ಇದೀಗ ಇಲ್ಲಿನ ವಿದ್ಯುತ್ ಸಂಪರ್ಕವನ್ನು ನೆರೆ ನೀರು ನಿಲ್ಲುವ ಪ್ರದೇಶದಲ್ಲೇ ಅಳವಡಿಸಲಾಗಿರುವ ವಿದ್ಯುತ್ ಪರಿಷರ್ತಕಕ್ಕೆ ಜೋಡಿಸಿರುವ ಪರಿಣಾಮ ಅನಿವಾರ್ಯವಾಗಿ ವಿದ್ಯುತ್ ಕಡಿತಗೊಳಿಸಬೇಕಾಗಿ ಬಂದಿದೆ.
ದಿನವಿಡೀ ವಿದ್ಯುತ್ ಇಲ್ಲದೆ ಇದೀಗ ಈ ಪ್ರದೇಶದ ಜನ ಕಂಗೆಡುವAತಾಗಿದೆ. ಒಂಡೆದೆ ಪ್ರವಾಹದ ನೀರು ನಿರಂತರವಾಗಿ ಏರುತ್ತಲೇ ಇರುವ ಆತಂಕದ ಮಧ್ಯೆ ಇನ್ನೊಂದೆಡೆ ವಿದ್ಯುತ್ ಕೈಕೊಟ್ಟಿದೆ. ಮತ್ತೊಂದೆಡೆ ಕುಡಿಯುವ ನೀರಿನ ಸಮಸ್ಯೆಯೂ ಎದುರಾಗಿದೆ. ಪ್ರವಾಹದಿಂದ ಮನೆಗಳಿಗೆ ನೆರೆ ನೀರು ನುಗ್ಗಿದ ಪರಿಣಾಮ ಆ ಮನೆ ಮಂದಿಗಳೂ ಸಹಿತ ನಿರಾಶ್ರಿತರೂ ಕೂಡಾ ಕೆಲ ಮನೆಗಳಲ್ಲಿ ವಾಸ್ತವ್ಯ ಇರುವುದರಿಂದ ಮನೆಗಳಲ್ಲಿ ಜನಸಂಖ್ಯೆ ಜಾಸ್ತಿ ಇರುವುದರಿಂದ ತೀವ್ರ ಸಮಸ್ಯೆ ಉಂಟಾಗಿದೆ. ಅಲ್ಲದೆ ದಿನವಿಡೀ ವಿದ್ಯುತ್ ಸ್ಥಗಿತಗೊಂಡ ಪರಿಣಾಮ ಇಲ್ಲಿನ ನಿವಾಸಿಗಳ ಮೊಬೈಲ್ ಫೋನ್ ಗಳೆಲ್ಲವೂ ಜಾರ್ಜ್ ಇಲ್ಲದೆ ಸ್ಥಬ್ಧಗೊಂಡಿದೆ. ಅಗತ್ಯ ಹಾಗೂ ಅನಿವಾರ್ಯ ಸಂದರ್ಭಗಳಲ್ಲಿ ಕಾರ್ಯಾಚರಣೆಗೆ ಹಾಗೂ ಇತರ ಸೇವೆಗೆ ಸಂಬAಧಪಟ್ಟವರನ್ನು ಸಂಪರ್ಕಿಸಲೂ ಇದರಿಂದ ಸಾದ್ಯವಾಗುತ್ತಿಲ್ಲ. ನೆರೆ ನೀರು ಏರುತ್ತಲೇ ಇರುವುದರಿಂದ ರಾತ್ರಿ-ಮಧ್ಯರಾತ್ರಿಯಲ್ಲಿ ಸ್ವಯಂ ಸೇವಕರ ಕಾರ್ಯಾಚರಣೆಗೂ ಅಡ್ಡಿಯಾಗುತ್ತಿದೆ ಎಂಬ ಆರೋಪಗಳೂ ಕೇಳಿ ಬರುತ್ತಿದೆ.
0 comments:
Post a Comment