ಮಂಗಳೂರು, ಜುಲೈ 09, 2024 (ಕರಾವಳಿ ಟೈಮ್ಸ್) : ಅಂಚೆ ಮೂಲಕ ಕೂಪನ್ ಕಳಿಸಿ ಬಳಿಕ ಟಿಡಿಎಸ್, ಜಿ ಎಸ್ ಟಿ ಹಾಗೂ ಎನ್ ಒ ಸಿ ಮತ್ತಿತರ ಚಾರ್ಜ್ ಎಂದೇಳಿ ವ್ಯಕ್ತಿಯಿಂದ ಲಕ್ಷಾಂತರ ರೂಪಾಯಿ ಹಣ ಪೀಕಿಸಿದ ಬಗ್ಗೆ ಮಂಗಳೂರು ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವ್ಯಕ್ತಿಯೊಬ್ಬರಿಗೆ 2024ನೇ ಎಪ್ರಿಲ್ ತಿಂಗಳಲ್ಲಿ ಮೀಶೋ ನಲ್ಲಿ ಕ್ಯಾಶ್ ಪ್ರೈಝ್ ಬಂದಿರುವುದಾಗಿ ಅಂಚೆ ಮುಖೇನಾ ಕೂಪನ್ ಬಂದಿದ್ದು, ಅದರಲ್ಲಿದ್ದ ಕೂಪನ್ ನಲ್ಲಿ 14.75 ಲಕ್ಷ ರೂಪಾಯಿ ಕ್ಯಾಶ್ ಪ್ರೈಝ್ ವಿನ್ ಆಗಿರುತ್ತೀರಿ ಎಂಬುದಾಗಿ ನಮೂದಿಸಿತ್ತು. ಸದ್ರಿ ಕೂಪನ್ ನೊಂದಿಗೆ ಇದ್ದ ಮೊಬೈಲ್ ಸಂಖ್ಯೆಗೆ ಕರೆ ಮಾಡಿ ವಿಚಾರಿಸಿದಾಗ, ಅಪರಿಚಿತ ವ್ಯಕ್ತಿಯು ಬ್ಯಾಂಕ್ ಮಾಹಿತಿಗಳನ್ನು ಹಾಗೂ ಗುರುತಿನ ಚೀಟಿಗಳನ್ನು ಕೇಳಿದ್ದು, ಅದರಂತೆ ವ್ಯಕ್ತಿ ತನ್ನ ವಾಟ್ಸಪ್ ಮುಖೇನಾ ಕಳುಹಿಸಿರುವುದಾಗಿದೆ. ಅಪರಿಚಿತ ವ್ಯಕ್ತಿಗಳು ಕರೆ ಮಾಡಿ ಕ್ಯಾಶ್ ಪ್ರೈಝ್ ನಲ್ಲಿ ಬಂದಿರುವ ಹಣ ಪಡೆಯಬೇಕಾದರೆ ಟಿಡಿಎಸ್, ಜಿ ಎಸ್ ಟಿ, ಎನ್ ಒ ಸಿ ಹಾಗೂ ಇನ್ನಿತರ ಚಾರ್ಜ್ ಗಳಿಗೆ ಹಣ ಕಟ್ಟಬೇಕೆಂದು ತಿಳಿಸಿದ ಹಿನ್ನಲೆಯಲ್ಲಿ ತನ್ನ ಬ್ಯಾಂಕ್ ಖಾತೆಯಿಂದ ಅಪರಿಚಿತ ವ್ಯಕ್ತಿಗಳು ತಿಳಿಸಿದ ವಿವಿಧ ಬ್ಯಾಂಕ್ ಖಾತೆಗಳಿಗೆ ಹಂತ ಹಂತವಾಗಿ 6,62,450/- ರೂಪಾಯಿ ಹಣ ಕಳುಹಿಸಿರುತ್ತಾರೆ. ಸದ್ರಿ ಅಪರಿಚಿತ ಆರೋಪಿಗಳು ಪಡೆದ ಹಣವನ್ನು ಹಿಂತಿರುಗಿಸದೇ ವಂಚಿಸಿರುತ್ತಾರೆ ಎಂಬುದಾಗಿ ನೀಡಿದ ದೂರಿನ ಮೇರೆಗೆ ಸಿ.ಇ.ಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 21/2024 ಕಲಂ 66(ಸಿ), 66(ಡಿ) ಐಟಿ ಆಕ್ಟ್ ಪ್ರಕಾರ ಪ್ರಕರಣ ದಾಖಲಾಗಿದೆ
0 comments:
Post a Comment