ಬಂಟ್ವಾಳ, ಜುಲೈ 13, 2024 (ಕರಾವಳಿ ಟೈಮ್ಸ್) : ರಾಜ್ಯ ಹಾಗೂ ಕೇಂದ್ರ ಸರಕಾರದ ಯಾವುದೆ ಇಲಾಖಾ ಕಚೇರಿಗಳಲ್ಲಿ ಪ್ರಾದೇಶಿಕ ಭಾಷೆ ಗೊತ್ತಿರುವ ಅಧಿಕಾರಿ-ಸಿಬ್ಬಂದಿಗಳನ್ನೇ ನೇಮಕಗೊಳಿಸಬೇಕು ಎಂಬುದು ಸರಕಾರದ ಸಾಮಾನ್ಯ ನಿಯಮ. ಇಲ್ಲದಿದ್ದರೆ ಕಚೇರಿ ಅಧಿಕಾರಿ-ಸಿಬ್ಬಂದಿಗಳು ಹಾಗೂ ಗ್ರಾಹಕರ ನಡುವೆ ಸಂಪರ್ಕ ಸಮಸ್ಯೆ ಉಂಟಾಗುತ್ತದೆ. ಇದು ಹಲವು ಸಮಸ್ಯೆಗಳಿಗೆ ಕಾರಣವಾಗುತ್ತದೆ ಎಂಬುದೇ ಇದಕ್ಕೆ ಕಾರಣ. ಆದರೆ ಪಾಣೆಮಂಗಳೂರು ಕೆನರಾ ಬ್ಯಾಂಕ್ ಶಾಖೆಯಲ್ಲಿ ಕಳೆದ ಕೆಲವು ವರ್ಷಗಳಿಂದ ಕನ್ನಡ ಭಾಷೆ ಬಗ್ಗೆ ಪರಿಜ್ಞಾನವೆ ಇಲ್ಲದ ಬ್ಯಾಂಚ್ ಮ್ಯಾನೇಜರ್ ಹಾಗೂ ಸಿಬ್ಬಂದಿಗಳೇ ಕಾರ್ಯನಿರ್ವಹಿಸುತ್ತಿರುವುದು ಇಲ್ಲಿನ ಗ್ರಾಹಕರ ಪಾಲಿಗೆ ದೊಡ್ಡ ಸಮಸ್ಯೆಯಾಗಿದೆ.
ಪ್ರಸ್ತುತ ಬ್ಯಾಂಕ್ ಶಾಖೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಡವರು ಹಾಗೂ ಸಾಮಾನ್ಯ ಸಾರ್ವಜನಿಕರೇ ಗ್ರಾಹಕರಾಗಿದ್ದು, ಕನ್ನಡ-ತುಳುವಿನಂತಹ ಪ್ರಾದೇಶಿಕ ಭಾಷೆ ಬಿಟ್ಟರೆ ಇತರ ಭಾಷೆಗಳ ಮೇಲೆ ಇಲ್ಲಿನ ಸಾಮಾನ್ಯ ನಾಗರಿಕರಿಗೆ ಹಿಡಿತವಿಲ್ಲ. ಆದರೆ ಇಲ್ಲಿನ ಶಾಖೆಯಲ್ಲಿರುವ ಅಧಿಕಾರಿ-ಸಿಬ್ಬಂದಿಗಳು ಹಿಂದಿ ಅಥವಾ ಮಳಯಾಳಂ ಭಾಷೆಯವರಾಗಿದ್ದಾರೆ. ಇವರ ಭಾಷೆ ಗ್ರಾಹಕರಿಗೆ ಅರ್ಥವಾಗುತ್ತಿಲ್ಲ. ಗ್ರಾಹಕರ ಪ್ರಾದೇಶಿಕ ಭಾಷೆ ಅಧಿಕಾರಿ-ಸಿಬ್ಬಂದಿಗಳಿಗೆ ಅರ್ಥವಾಗುತ್ತಿಲ್ಲ. ಪರಿಣಾಮ ನಿತ್ಯವೂ ಇಲ್ಲಿ ಬ್ಯಾಂಕ್ ಹಾಗೂ ಗ್ರಾಹಕರ ನಡುವೆ ಸಂವಹನ ಕಿರಿ ಕಿರಿ ನಡೆಯುತ್ತಲೇ ಇರುತ್ತದೆ.
ಬದಲಾದ ಬ್ಯಾಂಕ್ ನಿಯಮಗಳಂತೆ ಇದೀಗ ಹಲವು ಸಮಸ್ಯೆಗಳು, ಬದಲಾವಣೆಗಳಿದ್ದು, ಈ ಬಗ್ಗೆ ಸ್ವತಃ ಬ್ಯಾಂಕ್ ಶಾಖೆಗೆ ಬಂದು ತಿಳಿದುಕೊಳ್ಳುವ ಗ್ರಾಹಕರಿಗೆ ಇಲ್ಲಿನ ಕನ್ನಡ ಭಾಷೆ ಗೊತ್ತಿಲ್ಲದ ಇಲ್ಲಿನ ಅಧಿಕಾರಿ-ಸಿಬ್ಬಂದಿಗಳೇ ಸಮಸ್ಯೆಯಾಗುತ್ತಿದ್ದಾರೆ.
ಅಲ್ಲದೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಬದಲಾವಣೆ ಬಂದ ನಂತರ ಪ್ರತಿ ತಿಂಗಳ 2ನೇ ಶನಿವಾರ ಹಾಗೂ 4ನೇ ಶನಿವಾರ ಸಂಪೂರ್ಣವಾಗಿ ಬ್ಯಾಂಕ್ ಬಂದ್ ಆಗುತ್ತಿದ್ದು, ಉಳಿದೆಲ್ಲಾ ಕೆಲಸದ ದಿನಗಳಲ್ಲಿ ಪೂರ್ಣ ದಿನ ಬೆಳಿಗ್ಗೆಯಿಂದ ಸಂಜೆವರೆಗೆ (ಊಟ, ಚಾ ವಿರಾಮವೂ ಇಲ್ಲದೆ) ಗ್ರಾಹಕರ ಎಲ್ಲಾ ಸೇವೆಗಳನ್ನು ನಿರ್ವಹಿಸುವ ಬಗ್ಗೆ ರಿಸರ್ವ್ ಬ್ಯಾಂಕ್ ಆದೇಶವಿದ್ದರೂ ಪಾಣೆಮಂಗಳೂರು ಕೆನರಾ ಬ್ಯಾಂಕ್ ಶಾಖೆಯಲ್ಲಿ ಮಾತ್ರ ಮಧ್ಯಾಹ್ನವರೆಗೆ ಮಾತ್ರ ಸೇವೆ ನಿರ್ವಹಿಸುತ್ತಿದ್ದು, ಇದು ಇಲ್ಲಿನ ಗ್ರಾಹಕರಿಗೆ ತೀವ್ರ ಸಮಸ್ಯೆ ಉಂಟು ಮಾಡುತ್ತಿರುವ ಬಗ್ಗೆಯೂ ಗ್ರಾಹಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಂಬಂಧಪಟ್ಟ ಬ್ಯಾಂಕ್ ಮೇಲಧಿಕಾರಿಗಳು ಈ ಬಗ್ಗೆ ತಕ್ಷಣ ಮಧ್ಯಪ್ರವೇಶಿಸಿ ಪಾಣೆಮಂಗಳೂರು ಕೆನರಾ ಬ್ಯಾಂಕ್ ಶಾಖೆಯ ಸಮಸ್ಯೆಗಳನ್ನು ಪರಿಹರಿಸಿ ಇಲ್ಲಿನ ಗ್ರಾಹಕರಿಗೆ ಶೀಘ್ರದಲ್ಲೇ ಗ್ರಾಹಕಸ್ನೇಹಿ ಬ್ಯಾಂಕಿಂಗ್ ಸೇವೆ ಒದಗಿಸಿಕೊಡುವ ನಿಟ್ಟಿನಲ್ಲಿ ಸ್ಪಂದಿಸಬೇಕಾಗಿದೆ.
0 comments:
Post a Comment