ಬಂಟ್ವಾಳ, ಜುಲೈ 18, 2024 (ಕರಾವಳಿ ಟೈಮ್ಸ್) : ತಾಲೂಕಿನಾದ್ಯಂತ ಕಳೆದೊಂದು ವಾರದಿಂದ ಭಾರೀ ಮಳೆಯಾಗುತ್ತಿದ್ದು, ನೇತ್ರಾವತಿ ನದಿ ಸಹಿತ ನೀರಿನ ಮೂಲಗಳು ತುಂಬಿ ಹರಿಯುತ್ತಿದೆ. ಗುರುವಾರ ಅಪರಾಹ್ನದ ವೇಳೆ ನೇತ್ರಾವತಿ ನದಿ ನೀರಿನ ಮಟ್ಟ 7.6ರಲ್ಲಿದೆ. 8.5 ಅಪಾಯದ ಮಟ್ಟ ಎಂದು ತಾಲೂಕಾಡಳಿತ ಗುರುತಿಸಿದ್ದು, ನದಿ ತೀರದ ಮನೆ ಮಂದಿಗೆ ಕಟ್ಟೆಚ್ಚರದ ಸೂಚನೆ ನೀಡಲಾಗಿದೆ. ಈಗಾಗಲೆ ಆಲಡ್ಕ ಮಿಲಿಟ್ರಿ ಕ್ಯಾಂಪಿಂಗ್ ಮೈದಾನದಲ್ಲಿ ವಾಸ್ತವ್ಯ ಹೂಡಿರುವ ಸುಮಾರು 10ರಷ್ಟು ಮನೆ ಮಂದಿ ಮುಂಜಾಗ್ರತಾ ಕ್ರಮವಾಗಿ ಸ್ವಯಂಪ್ರೇರಣೆಯಿಂದ ಸ್ಥಳಾಂತರಗೊಂಡಿದ್ದಾರೆ. ಈ ಮಧ್ಯೆ ಮಳೆ ಬಿರುಸಾಗಿದ್ದು, ನೇತ್ರಾವತಿ ನೀರಿನ ಮಟ್ಟ ಕೂಡಾ ಏರುತ್ತಿರುವ ಹಿನ್ನಲೆಯಲ್ಲಿ ನದಿ ಬದಿಗಳಲ್ಲಿ ಮೀನು ಹಿಡಿಯುವುದಾಗಲೀ, ಸೆಲ್ಫಿ ಫೋಟೋಗ್ರಫಿ ಮಾಡುವುದಾಗಲೀ, ನೀರಾಟ ಆಡುವುದಾಗಲೀ ಮಾಡಬಾರದಾಗಿ ಬಂಟ್ವಾಳ ತಹಶೀಲ್ದಾರ್ ಅರ್ಚನಾ ಭಟ್ ಅವರು ಸೂಚನೆ ನೀಡಿದ್ದು, ಇಂತಹ ಕೃತ್ಯ ಕಂಡುಬಂದಲ್ಲಿ ಕಠಿಣ ಕ್ರಮ ಜರುಗಿಸುವುದಾಗಿ ಎಚ್ಚರಿಸಿದ್ದಾರೆ. ಮಳೆ ಹಾಗೂ ನೆರೆ ಸಂಬಂಧಿ ಪ್ರಕರಣಗಳಲ್ಲಿ ಸಂತ್ರಸ್ತರಾಗುವವರ ಪಾಲಿಗೆ ಆಶ್ರಯ ಒದಗಿಸುವ ನಿಟ್ಟಿನಲ್ಲಿ ಪಾಣೆಮಂಗಳೂರು ಶ್ರೀ ಶಾರದಾ ಪ್ರೌಢಶಾಲೆಯಲ್ಲಿ ಕಾಳಜಿ ಕೇಂದ್ರವನ್ನು ತೆರೆಯಲಾಗಿದೆ.
ಕೊಳ್ನಾಡು ಗ್ರಾಮದ ಸುರಿಬೈಲ್-ಖಂಡಿಗ ರಸ್ತೆ ಮಧ್ಯೆ ಇರುವ ಸೇತುವೆಯ ಕೆಳಗಿನ ಮೋರಿಯು ಮಳೆ ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದು ಸೇತುವೆಯು ಅಪಾಯಕಾರಿ ಸ್ಥಿತಿಯಲ್ಲಿದೆ. ಈಗಾಗಲೇ ಈ ರಸ್ತೆಯಲ್ಲಿ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ, ಈ ಬಗ್ಗೆ ತಾತ್ಕಾಲಿಕವಾಗಿ ರಸ್ತೆ ಸಂಚಾರವನ್ನು ಮುಚ್ಚಲಾಗಿದ್ದು, ಸಂಚಾರ ನಿರ್ಬಂಧದ ಬಗ್ಗೆ ರಸ್ತೆಯ ಎರಡೂ ಬದಿಗಳಲ್ಲಿ ಬ್ಯಾರಿಕೇಡ್ ಅಳವಡಿಸಿ ಎಚ್ಚರಿಕೆ ನೀಡಲಾಗಿದೆ.
ಮಾಣಿ ಗ್ರಾಮದ ಕೊಡಾಜೆ-ಕೋಚಪಲ್ಕೆ ನಿವಾಸಿ ಸಂಜೀವ ಬಿನ್ ತನಿಯ ಮೇರ ಎಂಬವರು ಏಕಾಂಗಿಯಾಗಿ ವಾಸ್ತವ್ಯವಿದ್ದ ಶಿಥಿಲಗೊಂಡ ಮನೆಯು ಮಳೆಗೆ ಬಿದ್ದು ಪೂರ್ಣ ಹಾನಿಗೊಂಡಿದೆ. ಸಂಜೀವ ಅವರು ಸಂಬಂಧಿಕರ ಮನೆಯಲ್ಲಿ ವಾಸ್ತವ್ಯ ಹೊಂದಿದ್ದದರಿಂದ ಯಾವುದೇ ಅಪಾಯ ಸಂಭವಿಸಿಲ್ಲ. ಬಾಳ್ತಿಲ ಗ್ರಾಮದ ಪಳನೀರು ನಿವಾಸಿ ಕಮಲ ಕೋಂ ಕೇಶವ ಕೊಟ್ಟಾರಿ ಅವರ ಮನೆಗೆ ಹಾನಿಯಾಗಿದೆ. ಕಾವಳಪಡೂರು ಗ್ರಾಮದ ಮಧ್ವ ಕೊಮ್ಮಾಲೆ ನಿವಾಸಿ ಮೀನಾಕ್ಷಿ ಅವರ ಮನೆಗೆ ತಾಗಿಕೊಂಡಿರುವ ಬಚ್ಚಲು ಮನೆ ಸಂಪೂರ್ಣ ಹಾನಿಯಾಗಿರುತ್ತದೆ.
ವಿಟ್ಲ ಮುಡ್ನೂರು ಗ್ರಾಮದ ಕಂಬಳಬೆಟ್ಟು-ಶಾಂತಿನಗರ ನಿವಾಸಿ ನಿಜಾಮುದ್ದಿನ್ ಬಿನ್ ಅಬ್ದುಲ್ ಕೆ ಎಚ್ ಅವರ ಮನೆಗೆ ಭಾಗಶಃ ಹಾನಿ ಸಂಭವಿಸಿದೆ. ನೆಟ್ಲಮುಡ್ನೂರು ಗ್ರಾಮದ ನಿವಾಸಿ ಕಮಲಾಕ್ಷಿ ಕೋಂ ನವೀನ್ ಕುಮಾರ್ ಅವರ ವಾಸ್ತವ್ಯದ ಮನೆ ಭಾಗಶಃ ಹಾನಿಯಾಗಿದೆ.
0 comments:
Post a Comment