ಬಂಟ್ವಾಳ, ಜುಲೈ 12, 2024 (ಕರಾವಳಿ ಟೈಮ್ಸ್) : ಮಣ್ಣು ಸಾಗಾಟದ ಲಾರಿಯೊಂದು ಚಾಲಕನ ನಿಯಂತ್ರಣ ಮೀರಿ ಹಿಮ್ಮುಖವಾಗಿ ಚಲಿಸಿಸಿದ ಪರಿಣಾಮ ಅಟೋ ರಿಕ್ಷಾ ಪಾರ್ಕ್ ಗೆ ನುಗ್ಗಿದ ಪರಿಣಾಮ ಪಾರ್ಕ್ ಹಾಗೂ ಅಟೋ ರಿಕ್ಷಾ ಜಖಂಗೊಂಡ ಘಟನೆ ಪೊಳಲಿ ಸಮೀಪದ ಬಡಕಬೈಲು ಎಂಬಲ್ಲಿ ಸಂಭವಿಸಿದೆ.
ಇಲ್ಲಿಗೆ ಸಮೀಪದ ಕೆಂಪು ಕಲ್ಲಿನ ಕೋರೆಯಿಂದ ಕಳೆದ ಕೆಲವು ಸಮಯಗಳಿಂದ ಲಾರಿಗಳಲ್ಲಿ ಮಣ್ಣು ತುಂಬಿಸಿ ಕೇರಳ ಕಡೆ ಸಾಗಿಸಲಾಗುತ್ತಿದ್ದು, ಗುರುವಾರವೂ ಕೂಡಾ ಇದೇ ರೀತಿ ಲಾರಿಯಲ್ಲಿ ಮಣ್ಣು ತುಂಬಿಸಿ ಸಾಗಾಟ ಮಾಡುತ್ತಿದ್ದ ವೇಳೆ ಬಡಕಬೈಲು ಜಂಕ್ಷನ್ನಿನಲ್ಲಿ ಲಾರಿ ಚಾಲಕನ ನಿಯಂತ್ರಣ ಮೀರಿ ರಸ್ತೆ ಬದಿಯ ಮನೆಗೆ ಡಿಕ್ಕಿ ಹೊಡೆಯುವ ಹಂತದಲ್ಲಿರುವಾಗ ಅದನ್ನು ತಪ್ಪಿಸಲು ಚಾಲಕ ಯತ್ನಿಸಿದ ವೇಳೆ ಲಾರಿ ನೇರವಾಗಿ ರಸ್ತೆ ಬದಿಯ ಅಟೋ ರಿಕ್ಷಾ ಸ್ಟಾಂಡಿಗೆ ನುಗ್ಗಿದೆ. ಸ್ಟಾಂಡಿನಲ್ಲಿದ್ದ ಅಟೋ ರಿಕ್ಷಾವೊಂದಕ್ಕೆ ಲಾರಿ ಡಿಕ್ಕಿ ಹೊಡೆದು ಅಟೋ ರಿಕ್ಷಾ ಹಾಗೂ ಅಟೋ ಸ್ಟಾಂಡ್ ಜಖಂಗೊಂಡಿದೆ. ಅದಷ್ಟವಶಾತ್ ಸಂಭಾವ್ಯ ಭಾರೀ ಅನಾಹುತವೊಂದು ಸ್ವಲ್ಪದರಲ್ಲೇ ತಪ್ಪಿ ಹೋಗಿದೆ.
ಇಲ್ಲಿನ ಕೋರೆಯಿಂದ ನಿತ್ಯ ಮಣ್ಣು ಸಾಗಾಟ ನಡೆಸುತ್ತಿರುವ ಲಾರಿಗಳಿಂದ ಈ ಭಾಗದಲ್ಲಿ ಹಲವು ಅಪಘಾತಗಳು ನಡೆದಿವೆ. ಇತ್ತೀಚೆಗೆ ಗಂಜಿಮಠ ಬಳಿ ಹಾಗೂ ಕೊಡ್ಮಾನ್ ಬಳಿಯೂ ಇಂತಹದೇ ಅಪಘಾತ ನಡೆದಿದ್ದು, ವಾಹನಗಳು ಜಖಂಗೊಂಡಿತ್ತು ಎಂದು ಮಾಹಿತಿ ನೀಡಿರುವ ಸ್ಥಳೀಯರು ಬಿ ಸಿ ರೋಡು, ವಿಟ್ಲ ಮಾರ್ಗವಾಗಿ ಸಾಗುವ ಈ ಮಣ್ಣು ತುಂಬಿದ ಲಾರಿಗಳು ಓವರ್ ಲೋಡ್ ಅಲ್ಲದೆ ಸೂಕ್ತ ಸುರಕ್ಷತಾ ಕ್ರಮಗಳೂ ಇಲ್ಲದೆ ಸಾಗುತ್ತಿದೆ ಎಂದು ಆರೋಪಿಸಿದ್ದಾರೆ.
0 comments:
Post a Comment