ಬಂಟ್ವಾಳ, ಜುಲೈ 09, 2024 (ಕರಾವಳಿ ಟೈಮ್ಸ್) : ಬಿ ಸಿ ರೋಡಿನಲ್ಲಿ ಫ್ಲೈ ಓವರ್ ನಿರ್ಮಾಣಗೊಂಡ ಬಳಿಕ ನಿರಂತರವಾಗಿ ಮೇಲ್ಸೆತುವೆ ಮೇಲಿನಿಂದ ಕೆಳಗೆ ಸಂಚರಿಸುತ್ತಿರುವ ವಾಹನ ಸವಾರರ ಮೇಲೆ ನೀರು ಅಭಿಷೇಕವಾಗುತ್ತಿರುವ ದೃಶ್ಯ ನಿತ್ಯ ನಿರಂತರವಾಗಿದೆ. ಫ್ಲೈ ಓವರ್ ನಿರ್ಮಾಣದ ಅವೈಜ್ಞಾನಿಕ ಕಾಮಗಾರಿಯೆ ಇದಕ್ಕೆ ಕಾರಣ ಎಂದು ಮಾಧ್ಯಮಗಳು ಹಲವು ಬಾರಿ ಸಚಿತ್ರ ವರದಿ ಮಾಡಿದರೂ ಈ ಸಮಸ್ಯೆ ಇನ್ನೂ ಪರಿಹಾರಗೊಂಡಂತೆ ಕಂಡು ಬರುತ್ತಿಲ್ಲ.
ಕಳೆದ ಮಳೆಗಾಲದಲ್ಲಿ ಇಲ್ಲಿನ ಮೇಲ್ಸೇತುವೆ ಮೇಲೆ ತೇಪೆ ಕಾಮಗಾರಿ ನಡೆಸಲಾಗಿತ್ತಾದರೂ ಅದ್ಯಾವುದೂ ಪರಿಣಾಮ ಬೀರಿಲ್ಲ. ಈ ಬಾರಿಯ ಮಳೆಗಾಲದಲ್ಲೂ ಇಲ್ಲಿನ ಫ್ಲೈ ಓವರ್ ಮೇಲಿನ ನೀರು ಕೆಳಗೆ ಹೆದ್ದಾರಿಯಲ್ಲಿ ಸಂಚರಿಸುತ್ತಿರುವ ವಾಹನ ಸವಾರರ ಮೇಲೆ ಅಭಿಷೇಕ ಅಗುತ್ತಲೇ ಇದೆ. ಇಲ್ಲಿನ ಈ ನೀರಾಭಿಷೇಕ ಸಮಸ್ಯೆಯಿಂದ ದ್ವಿಚಕ್ರ ವಾಹನ ಸವಾರರು ಪಡಬಾರದ ಕಷ್ಟ ಪಡುತ್ತಿದ್ದಾರೆ. ಜೋರಾಗಿ ಮಳೆ ಬರುವಾಗ ಹಾಗೂ ಮಳೆ ಬಂದು ನಿಂತಾಗಲೂ ಕೆಲ ಹೊತ್ತುಗಳ ಕಾಲ ಫ್ಲೈ ಓವರ್ ಮೇಲಿಂದ ನೀರು ಸುರಿಯುತ್ತಿದ್ದು, ದ್ವಿಚಕ್ರ ವಾಹನ ಸವಾರರು ಪೂರ್ಣವಾಗಿ ಒದ್ದೆಯಾಗುತ್ತಿದ್ದಾರೆ. ಇತರ ವಾಹನ ಸವಾರರು ಕೂಡಾ ಇಲ್ಲಿನ ನೀರಾಭಿಷೇಕದಿಂದ ಸಮಸ್ಯೆ ಹಾಗೂ ಅಪಾಯವನ್ನು ಎದುರಿಸುತ್ತಿರುವು ಕಂಡು ಬರುತ್ತಿದೆ.
ಇನ್ನಾದರೂ ಸಂಬಂಧಪಟ್ಟ ಇಲಾಖಾಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಈ ಬಗ್ಗೆ ಗಮನ ಹರಿಸಿ ಇಲ್ಲಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಜನ ಆಗ್ರಹಿಸುತ್ತಿದ್ದಾರೆ.
0 comments:
Post a Comment