ಬಂಟ್ವಾಳ, ಜೂನ್ 07, 2024 (ಕರಾವಳಿ ಟೈಮ್ಸ್) : ತಾಲೂಕಿನ ಪುದು ಗ್ರಾಮದ ಎಲ್ಲೆಂದರಲ್ಲಿ ತ್ಯಾಜ್ಯಗಳೇ ತುಂಬಿದ್ದು, ಇಡೀ ಗ್ರಾಮ ಗಬ್ಬೆದ್ದು ಹೋಗಿದೆ. ರಾಷ್ಟ್ರೀಯ ಹೆದ್ದಾರಿಯಲ್ಲೇ ಇರುವ ಈ ಗ್ರಾಮದ ಹೆದ್ದಾರಿ ಬದಿಗಳ ಸಹಿತ ಬಹುತೇಕ ಒಳಪ್ರದೇಶಗಳೆಲ್ಲವೂ ತ್ಯಾಜ್ಯ, ಕಸ-ಕಡ್ಡಿಗಳಿಂದಲೇ ಆವೃತವಾಗಿದ್ದು, ಪಂಚಾಯತಿಯ ತ್ಯಾಜ್ಯ ವಿಲೇವಾರಿ ವಾಹನ ಕಸ-ತ್ಯಾಜ್ಯ ಸಂಗ್ರಹ ಮಾಡುತ್ತಿರುವುದಾದರೂ ಎಲ್ಲಿಂದ ಎಂಬ ಪ್ರಶ್ನೆ ಇದೀಗ ಗ್ರಾಮಸ್ಥರಿಂದಲೇ ಕೇಳಿ ಬರುತ್ತಿದೆ. ಗುತ್ತಿಗೆ ಮುಖಾಂತರ ಕಸ ಸಂಗ್ರಹದ ವಾಹನ ಮನೆ ಮನೆಗೆ ತೆರಳುತ್ತಿದೆ ಎಂದು ಪಂಚಾಯತ್ ಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಹೇಳುತ್ತಿದ್ದರೆ, ಸಮಯಕ್ಕೆ ಸರಿಯಾಗಿ ಪಂಚಾಯತಿಯ ಕಸ ಸಂಗ್ರಹ ವಾಹನ ಬರುತ್ತಿಲ್ಲವಾದ್ದರಿಂದ ಮನೆ, ಅಂಗಡಿಗಳಲ್ಲಿ ಸಂಗ್ರಹವಾಗುತ್ತಿರುವ ಕಸ-ತ್ಯಾಜ್ಯಗಳನ್ನು ಕನಿಷ್ಠ ಒಂದು ದಿನವೂ ಇಟ್ಟುಕೊಳ್ಳಲಾಗದೆ ಈ ಪರಿಸ್ಥಿತಿ ಉಂಟಾಗುತ್ತಿದೆ ಎಂಬುದು ಗ್ರಾಮಸ್ಥರ ಅಳಲು.
ಪುದು ಪಂಚಾಯತ್ ವ್ಯಾಪ್ತಿಯ ತ್ಯಾಜ್ಯ ಸಮಸ್ಯೆ ಇಂದು ನಿನ್ನೆಯದಲ್ಲ. ಕಳೆದ ಹಲವು ವರ್ಷಗಳಿಂದಲೂ ಇಲ್ಲಿನ ಪಂಚಾಯತ್ ವ್ಯಾಪ್ತಿಯ ಹೆದ್ದಾರಿ ಸಹಿತ ಎಲ್ಲ ಒಳ ಪ್ರದೇಶಗಳ ರಸ್ತೆ, ಚರಂಡಿ, ರಸ್ತೆ ಬದಿ ಇತ್ಯಾದಿ ಸ್ಥಳಗಳು ನಿತ್ಯವೂ ತ್ಯಾಜ್ಯಗಳಿಂದ ಕೊಳೆಯುತ್ತಲೇ ಇರುತ್ತದೆ. ಈ ಬಗ್ಗೆ ಮಾಧ್ಯಮಗಳು ಹಲವು ಬಾರಿ ಗಮನ ಸೆಳೆದರೂ ಪಂಚಾಯತ್ ಪ್ರತಿನಿಧಿಗಳಾಗಲೀ, ಅಧಿಕಾರಿ ವರ್ಗವಾಗಲೀ ಇಲ್ಲಿನ ತ್ಯಾಜ್ಯ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡಿಕೊಳ್ಳುವಲ್ಲಿ ವಿಫಲವಾಗಿತ್ತು. ಇದರ ಮುಂದುವರಿದ ಭಾಗವಾಗಿ ಇದೀಗ ಕೂಡಾ ಪಂಚಾಯತ್ ವ್ಯಾಪ್ತಿಯ ಬಹುತೇಕ ಕಡೆ ತ್ಯಾಜ್ಯದಿಂದ ತುಂಬಿ ತುಳುಕುತ್ತಿದೆ.
ಪಂಚಾಯತ್ ವ್ಯಾಪ್ತಿಯ ಫರಂಗಿಪೇಟೆ ಹೆದ್ದಾರಿ ಬದಿ, ಕುಂಪಣಮಜಲು, ಅಮೆಮಾರು, ಹತ್ತನೇ ಮೈಲುಕಲ್ಲು ಮೊದಲಾದ ಪರಿಸರಗಳ ಅಲ್ಲಲ್ಲಿ ಅಂದರೆ ರಸ್ತೆಯ ಎಲ್ಲಾ ಬದಿಗಳಲ್ಲಿ, ಫರಂಗಿಪೇಟೆ ಜಂಕ್ಷನ್ನಿನ ರೈಲ್ವೇ ಜಾಗದಲ್ಲಿ, ಸೇತುವೆ ಬದಿ ಹಾಗೂ ಕೆಳಗೆ ಎಲ್ಲೆಂದರಲ್ಲಿ ತ್ಯಾಜ್ಯಗಳು ತುಂಬಿ ತುಳುಕುತ್ತಿದೆ. ಈಗಾಗಲೇ ಮಳೆಗಾಲ ಆರಂಭವಾಗಿದ್ದು, ಕನಿಷ್ಠ ಪಕ್ಷ ಮಳೆಗಾಲದ ಸಿದ್ದತೆಯನ್ನೂ ಇಲ್ಲಿನ ಪಂಚಾಯತ್ ಕೈಗೊಂಡಿಲ್ಲ. ಮಳೆ ಜೋರಾಗಿ ಸುರಿದಲ್ಲಿ ಇಲ್ಲಿನ ತ್ಯಾಜ್ಯ ರಾಶಿಗಳು ಮಳೆ ನೀರಿನಲ್ಲಿ ಕೊಚ್ಚಿಕೊಂಡು ಬಂದು ಸಾಂಕ್ರಾಮಿಕ ರೋಗ ಭೀತಿಯೂ ಎದುರಾಗಿದೆ. ಈಗಾಗಲೇ ಬೀದಿ ನಾಯಿಗಳು, ಜಾನುವಾರುಗಳು ತ್ಯಾಜ್ಯವನ್ನು ಅರ್ಧಂಬರ್ದ ತಿಂದು ಎಲ್ಲೆಂದರಲ್ಲಿ ಎಳೆದಾಡಿ ಇಡೀ ಪರಿಸರವನ್ನೇ ಮಲಿನಗೊಳಿಸುತ್ತಿರುವ ದೃಶ್ಯಗಳೂ ಕಂಡು ಬರುತ್ತಿದ್ದು, ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.
ಮಳೆಗಾಲ ಬಿರುಸು ಪಡೆಯುವುದಕ್ಕೆ ಮುಂಚೆಯಾದರೂ ಸಂಬಂಧಪಟ್ಟ ಪಂಚಾಯತ್ ಆಡಳಿತ ಇಲ್ಲಿನ ತ್ಯಾಜ್ಯ ಸಮಸ್ಯೆಗೆ ಸೂಕ್ತ ಪರಿಹಾರ ಕಂಡುಕೊಳ್ಳುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
0 comments:
Post a Comment