ಬಂಟ್ವಾಳ, ಜೂನ್ 25, 2024 (ಕರಾವಳಿ ಟೈಮ್ಸ್) : ಬಂಟ್ವಾಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ವಿವಿಧ ಭಜನಾ ಮಂದಿರ ಹಾಗೂ ದೇವಸ್ಥಾನಗಳಲ್ಲಿ ಕಳ್ಳರು ಕೈಚಳಕ ತೋರಿದ್ದು, ಕಾಣಿಕೆ ಡಬ್ಬಿಯ ನಗದು ಹಣ ಎಗರಿಸಿದ ಘಟನೆ ಸೋಮವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ.
ನರಿಕೊಂಬು ಗ್ರಾಮದ ಭಜನಾ ಮಂದಿರ ಹಾಗೂ ಕೊಪ್ಪಳಕೋಡಿ ಎಂಬಲ್ಲಿನ ಶಿಶು ಮಂದಿರಕ್ಕೆ ನುಗ್ಗಿದ ಕಳ್ಳರು ಕಾಣಿಕೆ ಡಬ್ಬಿ ಹಾಗೂ ಗೋದ್ರೆಜ್ ಕಪಾಟಿನ ಬೀಗ ಮುರಿದು ಸುಮಾರು 3,600/- ರೂಪಾಯಿ ನಗದು ಹಣವನ್ನು ಕಳವು ಮಾಡಿದ್ದಾರೆ. ಅಲ್ಲದೆ ಗೋಡ್ರೆಜ್ ನಲ್ಲಿದ್ದ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿದ್ದಾರೆ. ಭಾನುವಾರ ಸಂಜೆಯಿಂದ ಸೋಮವಾರ ಬೆಳಗ್ಗಿನ ಅವಧಿಯಲ್ಲಿ ಈ ಕಳ್ಳತನ ಕೃತ್ಯ ನಡೆದಿದ್ದು, ಈ ಬಗ್ಗೆ ಮಂದಿರ ಕಮಿಟಿ ಸದಸ್ಯ, ನರಿಕೊಂಬು ನಿವಾಸಿ ಕಿಶೋರ್ ಶೆಟ್ಟಿ ಅವರು ನೀಡಿದ ದೂರಿನಂತೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಾಳ್ತಿಲ ಗ್ರಾಮದ ಸುದೇಕಾರು ಎಂಬಲ್ಲಿನ ದೇವಸ್ಥಾನಕ್ಕೂ ನುಗ್ಗಿದ ಕಳ್ಳರು ಕಾಣಿಕೆ ಡಬ್ಬಿಯ ಹಾಗೂ ಭಜನೆಯ ಬಾಬ್ತು ಇರಿಸಲಾಗಿದ್ದ ಸುಮಾರು 10 ಸಾವಿರ ರೂಪಾಯಿ ನಗದು ಹಣ ಕಳವುಗೈದ ಘಟನೆ ಸೋಮವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ. ಈ ಬಗ್ಗೆ ದೇವಸ್ಥಾನದ ಅರ್ಚಕ ಜಯರಾಮ ಮೂಲ್ಯ ಅವರು ನೀಡಿದ ದೂರಿನ ಮೇರೆಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನರಿಕೊಂಬು ಗ್ರಾಮದ ಅಂತರ ಎಂಬಲ್ಲಿರುವ ಸಾಲ್ಯಾನ ಕುಟುಂಬದ ತರವಾಡು ದೈವಸ್ಥಾನದೊಳಗೆ ಭಾನುವಾರ ರಾತ್ರಿ ಪ್ರವೇಶಿಸಿದ ಕಳ್ಳರು ಕಾಣಿಕೆ ಡಬ್ಬಿಯ ಬೀಗ ಮುರಿದು ಅದರಲ್ಲಿದ್ದ 1 ಸಾವಿರ ರೂಪಾಯಿ ಕಳ್ಳತನ ಮಾಡಿದ್ದಾರೆ. ಈ ಬಗ್ಗೆ ದೈವಸ್ಥಾನದ ಅಧ್ಯಕ್ಷ, ಕಲ್ಲಡ್ಕ ನಿವಾಸಿ ಕೊರಗಪ್ಪ ಸಾಲ್ಯಾನ್ ಅವರು ನೀಡಿದ ದೂರಿನಂತೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 comments:
Post a Comment