ಬಂಟ್ವಾಳ, ಜೂನ್ 08, 2024 (ಕರಾವಳಿ ಟೈಮ್ಸ್) : ನರಿಕೊಂಬು ಗ್ರಾಮದ ನೆಹರುನಗರ ಸಮೀಪದ ಮಾರುತಿ ನಗರ ನಿವಾಸಿ ರಾಜ ಯಾನೆ ರಾಜ್ ಕೋಟ್ಯಾನ್ ಎಂಬವರ ಮನೆಯ ಕಂಪೌಂಡ್ ಶನಿವಾರ ಸುರಿದ ನಿರಂತರ ಮಳೆಗೆ ಕುಸಿದು ಬಿದ್ದಿದ್ದು, ಮನೆ ಕೂಡಾ ಅಪಾಯದಂಚಿನಲ್ಲಿದೆ. ಗಂಭೀರ ಪ್ರಮಾಣದಲ್ಲಿ ಇಲ್ಲಿ ಗುಡ್ಡ ಕುಸಿತ ಉಂಟಾಗಿದ್ದು, ಮನೆ ಕುಸಿತದ ಭೀತಿಯಲ್ಲಿ ಮನೆ ಮಂದಿ ಆತಂಕ ವ್ಯಕ್ತಪಡಿಸಿದ್ದಾರೆ.
ಮನೆಯ ಕೆಳಭಾಗದಲ್ಲಿ ಕೂಡಾ ಹಲವು ವಾಸ್ತವ್ಯದ ಮನೆಗಳಿದ್ದು, ಅದಕ್ಕೂ ಅಪಾಯದ ಕರೆಗಂಟೆ ಭಾರಿಸುತ್ತಿದೆ ಎನ್ನಲಾಗಿದೆ. ಈ ಬಗ್ಗೆ ಸ್ಥಳೀಯರು ಬಂಟ್ವಾಳ ಶಾಸಕರ ಸಹಿತ ಪಂಚಾಯತ್, ಕಂದಾಯ ಅಧಿಕಾರಿಗಳ ಗಮನಕ್ಕೆ ಅಪಾಯದ ಗಂಭೀರತೆಯನ್ನು ತಕ್ಷಣ ತಂದಿದ್ದಾರಾದರೂ ಇದುವರೆಗೂ ಯಾವುದೇ ಸ್ಪಂದನೆ ದೊರೆತಿಲ್ಲ ಎಂದು ಸ್ಥಳೀಯರು ದೂರಿದ್ದಾರೆ. ಅದರಲ್ಲೂ ಸ್ವತಃ ಶಾಸಕರ ಗಮನಕ್ಕೆ ನೇರವಾಗಿ ತಂದರೂ ಸೋಮವಾರ ನೋಡುವ ಎಂಬ ತೀರಾ ನಿರ್ಲಕ್ಷ್ಯದ ಹೇಳಿಕೆ ನೀಡಿದ್ದಾರೆ ಎಂದು ಗ್ರಾ ಪಂ ಸದಸ್ಯ ಪ್ರಕಾಶ್ ಕೋಡಿಮಜಲು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರತಿ ಮಳೆಗಾಲದಲ್ಲೂ ಇಂತಹ ಅನಾಹುತಗಳು, ಅಪಾಯಕಾರಿ ಸನ್ನಿವೇಶಗಳು ಕಂಡು ಬರುತ್ತಿದ್ದು, ಈ ಬಗ್ಗೆ ಸ್ಥಳೀಯ ಗ್ರಾಮಸ್ಥರು ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ತರುತ್ತಿದ್ದಾರೆ. ಆದರೆ ಜವಾಬ್ದಾರಿಯುತ ಸ್ಥಾನದಲ್ಲಿರುವವರು ನಿರ್ಲಕ್ಷ್ಯ ವಹಿಸುವ ಪರಿಣಾಮ ಅಂತಿಮವಾಗಿ ಗಂಭೀರ ಅನಾಹುತಗಳು ಸಂಭವಿಸಿ ಪ್ರಾಣ ಹಾನಿಯಂತಹ ಪ್ರಕರಣಗಳು ನಡೆಯುತ್ತದೆ. ಜನರ ಜೀವ ಹೋದ ನಂತರ ಅಥವಾ ಭೀಕರ ಅಪಾಯಗಳು ಸಂಭವಿಸಿದ ಬಳಿಕ ಜನಪ್ರತಿನಿಧಿಗಳು ಹಾಗೂ ಅಧಿಕಾರಿ ವರ್ಗ ತಾ ಮುಂದು ನಾ ಮುಂದು ಎಂದುಕೊಂಡು ತಂಡೋಪತಂಡವಾಗಿ ಸ್ಥಳಕ್ಕಾಗಮಿ ಪತ್ರಿಕಾ ಹೇಳಿಕೆ ಸಾಂತ್ವಮ ಹಾಗೂ ಭರವಸೆ ನೀಡಿ ಕೈತೊಳೆದುಕೊಳ್ಳುತ್ತಾರೆ ಎಂದು ಗ್ರಾಮಸ್ಥರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
0 comments:
Post a Comment