ಬಂಟ್ವಾಳ, ಜೂನ್ 27, 2024 (ಕರಾವಳಿ ಟೈಮ್ಸ್) : ತಾಲೂಕಿನಾದ್ಯಂತ ಗುರುವಾರವೂ ಭಾರೀ ಮಳೆ ಮುಂದುವರಿದಿದ್ದು, ನೇತ್ರಾವತಿ ನದಿ ನೀರಿನ ಮಟ್ಟದಲ್ಲೂ ಏರಿಕೆ ಕಂಡು ಬಂದಿದೆ. ತಾಲೂಕಿನ ವಿವಿಧೆಡೆ ಮಳೆ ಹಾನಿ ಪ್ರಕರಣಗಳೂ ಮುಂದುವರಿದಿದೆ.
ಬಂಟ್ವಾಳ ಕಸಬಾ ಗ್ರಾಮದ ನಿವಾಸಿ ಬೇಬಿ ಕೋಂ ಈಶ್ವರ ಪೂಜಾರಿ ಅವರ ಮನೆಗೆ ತಡೆಗೋಡೆ ಕುಸಿದು ಕಚ್ಚಾ ಮನೆ ಭಾಗಶಃ ಹಾನಿಯಾಗಿದೆ. ಮನೆ ಮಂದಿಯನ್ನು ಸಂಬಂಧಿಕರ ಮನೆಗೆ ಸ್ಥಳಾಂತರ ಮಾಡಲಾಗಿದೆ. ನಾವೂರು ಗ್ರಾಮದ ಪೂಪಾಡಿಕಟ್ಟೆ ನಿವಾಸಿ ಜಯಂತಿ ಕೋಂ ಶೀನ ಮೂಲ್ಯ ಅವರ ಮನೆಯ ಬದಿಯ ಬರೆ ಜರಿದಿದ್ದು, ಮನೆಯವರಿಗೆ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ಸೂಚಿಸಲಾಗಿದೆ. ನಾವೂರು ಗ್ರಾಮದ ಕೆಮ್ಮಟೆ ನಿವಾಸಿ ರೇವತಿ ಕೋಂ ಶ್ರೀಧರ ಅವರ ಮನೆಯ ರಸ್ತೆ ಬದಿ ಬರೆ ಕುಸಿತ ಉಂಟಾಗಿದೆ. ಮನೆಗೆ ಯಾವುದೇ ಅಪಾಯ ಆಗಿರುವುದಿಲ್ಲ. ಕೆದಿಲ ಗ್ರಾಮದ ಕುದುಂಬ್ಲಾಡಿ ನಿವಾಸಿ ಜುಬೈದಾ ಅವರ ಮನೆ ಬದಿ ಬರೆ ಜರಿದಿದೆ. ಮಾಣಿಲ ಗ್ರಾಮದ ಪಳನೀರ್ ನಿವಾಸಿ ದೇವಕಿ ಕೋಂ ಗುರುವ ಮೇರ ಅವರ ಮನೆಗೆ ಭಾಗಶಃ ಹಾನಿಯಾಗಿದೆ. ಮಾಣಿಲ ಗ್ರಾಮದ ಪಳನೀರ್ ನಿವಾಸಿ ಬೇಡು ಬಿನ್ ಚೌಕಾರು ಮೇರ ಅವರ ಮನೆಗೆ ಭಾಗಶಃ ಹಾನಿ ಸಂಭವಿಸಿದೆ.
0 comments:
Post a Comment