ಬಂಟ್ವಾಳ, ಜೂನ್ 22, 2024 (ಕರಾವಳಿ ಟೈಮ್ಸ್) : ಖಾಸಗಿ ಬಸ್ಸುಗಳ ನಡುವೆ ಡಿಕ್ಕಿ ಸಂಭವಿಸಿ ಓರ್ವ ಪ್ರಯಾಣಿಕ ಗಂಭೀರ ಗಾಯಗೊಂಡು ಇತರ ಕೆಲ ಪ್ರಯಾಣಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾದ ಘಟನೆ ತುಂಬೆ ಗ್ರಾಮದ ಕೆಳಗಿನ ತುಂಬೆ ಎಂಬಲ್ಲಿ ಗುರುವಾರ ರಾತ್ರಿ ಸಂಭವಿಸಿದ್ದು, ಈ ಬಗ್ಗೆ ಶುಕ್ರವಾರ ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತದಿಂದ ಗಂಭೀರ ಗಾಯಗೊಂಡವರನ್ನು ಕಾವಳಪಡೂರು ಗ್ರಾಮದ ವಗ್ಗ ನಿವಾಸಿ ಚಿದಾನಂದ (46) ಎಂದು ಹೆಸರಿಸಲಾಗಿದೆ. ಅರಫಾ ಎಂಬ ಖಾಸಗಿ ಬಸ್ಸು ಚಾಲಕ ರಿತೇಶ್ ಅವರು ದುಡುಕುತನ ಹಾಗೂ ನಿರ್ಲಕ್ಷ್ಯತನದ ಚಾಲನೆಯಿಂದ ಓವರ್ ಟೇಕ್ ಮಾಡುವ ಭರದಲ್ಲಿ ಕೆಳಗಿನ ತುಂಬೆ ಎಂಬಲ್ಲಿ ಎದುರಿನಿಂದ ಹೋಗುತ್ತಿದ್ದ ಸೇಫ್ ವೇ ಎಂಬ ಖಾಸಗಿ ಬಸ್ಸಿನ ಹಿಂಬದಿಗೆ ಡಿಕ್ಕಿ ಹೊಡೆದು ಪರಿಣಾಮ ಈ ಅಪಘಾತ ಸಂಭವಿಸಿದೆ ಎಂದು ದೂರಲಾಗಿದೆ.
ಅಪಘಾತದ ತೀವ್ರತೆಗೆ ಅರಫಾ ಬಸ್ಸಿನ ಪ್ರಯಾಣಿಕ ಚಿದಾನಂದ ಅವರು ಮುಂದಕ್ಕೆ ಎಸೆಯಲ್ಪಟ್ಟು ಗಾಯಗೊಂಡಿದ್ದಾರೆ. ಅವರನ್ನು ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಇತರ ಪ್ರಯಾಣಿಕರು ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಗಾಯಾಳು ಚಿದಾನಂದ ಅವರು ನೀಡಿದ ದೂರಿನಂತೆ ಬಂಟ್ವಾಳ ಸಂಚಾರಿ ಠಾಣೆಯಲ್ಲಿ ಶುಕ್ರವಾರ ಪ್ರಕರಣ ದಾಖಲಾಗಿದೆ.
0 comments:
Post a Comment