ಪುತ್ತೂರು, ಜೂನ್ 14, 2024 (ಕರಾವಳಿ ಟೈಮ್ಸ್) : ಸಂಚಾರಕ್ಕೆ ಅಡ್ಡಿಯಾಗುವಂತೆ ನಿಲ್ಲಿಸಿದ್ದ ಓಮ್ನಿ ಕಾರು ತೆಗೆಯುವಂತೆ ಹಾರ್ನ್ ಹಾಕಿದ ಕಾರು ಚಾಲಕಗೆ ಓಮ್ನಿ ಚಾಲಕ ಚೂರಿಯಿಂದ ಇರಿದು ಗಾಯಗೊಳಿಸಿದ ಘಟನೆ ಪುತ್ತೂರು ಕೋರ್ಟ್ ರಸ್ತೆಯ ಬಳಿ ಗುರುವಾರ ಮಧ್ಯಾಹ್ನ ನಡೆದಿದೆ.
ಚೂರಿ ಇರಿತದಿಂದ ಗಾಯಗೊಂಡ ಕಾರು ಚಾಲಕನನ್ನು ದರ್ಬೆ ನಿವಾಸಿ ಸದಾಶಿವ ಪೈ (54) ಎಂದು ಹೆಸರಿಸಲಾಗಿದ್ದು, ಚೂರಿ ಇರಿದ ಆರೋಪಿಯನ್ನು ಗುಣಶೇಖರ ರೈ ಎಂದು ಗುರುತಿಸಲಾಗಿದೆ.
ಸದಾಶಿವ ಪೈ ಅವರು ಗುರುವಾರ ಮಧ್ಯಾಹ್ನ ತನ್ನ ಕಾರಿನಲ್ಲಿ ಪುತ್ತೂರು ಕೋರ್ಟ್ ರಸ್ತೆಯ ಮೂಲಕ ಹೋಗುತ್ತಿರುವಾಗ, ಮುಳಿಯ ಚಿನ್ನದ ಅಂಗಡಿಯ ಬಳಿ, ಜೆಎ 53 ಎಂಸಿ 0618 ನೋಂದಣಿ ಸಂಖ್ಯೆಯ ಒಮ್ನಿ ಕಾರೊಂದು ಚಾಲಕನು ವಾಹನವನ್ನು ಸಂಚಾರಕ್ಕೆ ಅಡ್ಡಿಯಾಗುವಂತೆ ನಿಲ್ಲಿಸಿದ್ದು, ಈ ಬಗ್ಗೆ ಸದಾಶಿವ ಪೈ ಅವರು ಹಾರ್ನ್ ಮಾಡಿದಾಗ ಆರೋಪಿ ಒಮ್ನಿ ಕಾರಿನ ಚಾಲಕ ಗುಣಶೇಖರ ರೈ ಎಂಬವರು ಅವಾಚ್ಯ ಶಬ್ದಗಳಿಂದ ಬೈದಿರುತ್ತಾರೆ. ಈ ಬಗ್ಗೆ ಪ್ರಶ್ನಿಸಲು ಸದಾಶಿವ ಪೈ ಆರೋಪಿತನ ಕಾರಿನ ಬಳಿ ತೆರಳಿದಾಗ, ಆರೋಪಿಯು ಒಮ್ನಿಯಲ್ಲಿದ್ದ ಚೂರಿಯಿಂದ ಹಲ್ಲೆ ಮಾಡಿರುತ್ತಾನೆ. ಹಲ್ಲೆಯಿಂದ ಸದಾಶಿವ ಪೈ ಅವರ ಕೈಗೆ ಗಾಯವಾಗಿದೆ. ಈ ಸಂದರ್ಭ ಸದಾಶಿವ ಪೈ ಬೊಬ್ಬೆ ಹಾಕಿದಾಗ ಅಲ್ಲಿದ್ದ ಜನ ಬರುವುದನ್ನು ನೋಡಿ ಆರೋಪಿಯು ಚೂರಿ ಸಮೇತ ಒಮ್ನಿ ಕಾರಿನಲ್ಲಿ ಹೋಗಿರುತ್ತಾರೆ. ಗಾಯಾಳು ಸದಾಶಿವ ಪೈ ಅವರನ್ನು ಪುತ್ತೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಪುತ್ತೂರು ನಗರ ಪೆÇಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 62/2024 ಕಲಂ 341, 504, 324, ಐಪಿಸಿಯಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.
0 comments:
Post a Comment