ಬಂಟ್ವಾಳ, ಜೂನ್ 08, 2024 (ಕರಾವಳಿ ಟೈಮ್ಸ್) : ವಾಹನ ಅಡ್ಡಗಟ್ಟಿ ಎರಡು ತಂಡಗಳ ಯುವಕರು ಪರಸ್ಪರ ಗಲಾಟೆ ಮಾಡಿಕೊಂಡ ಘಟನೆ ಕನ್ಯಾನದಲ್ಲಿ ಶುಕ್ರವಾರ ಸಂಜೆ ನಡೆದಿದ್ದು, ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ದೂರು-ಪ್ರತಿದೂರು ದಾಖಲಾಗಿದೆ.
ಈ ಬಗ್ಗೆ ದೂರು ನೀಡಿದ ಕನ್ಯಾನ ನಿವಾಸಿ ಪ್ರಕಾಶ್ (46) ಅವರು ಶುಕ್ರವಾರ ಸಂಜೆ ತನ್ನ ಸ್ಕೂಟರಿನಲ್ಲಿ ಗಣೇಶ್ ಎಂಬವರನ್ನು ಕುಳ್ಳಿರಿಸಿಕೊಂಡು ಕನ್ಯಾನ-ಬಾಯಾರು ರಸ್ತೆಯಲ್ಲಿ ಬಾಯಾರು ಕಡೆಗೆ ಹೋಗುತ್ತಿರುವಾಗ ಕನ್ಯಾನ ಶಾಲಾ ಬಳಿ, ಅಪಾಯಕಾರಿಯಾಗಿ ಬಿಳಿ ಬಣ್ಣದ ಕಾರನ್ನು ಚಲಾಯಿಸಿದ ಕಾರಿನ ಚಾಲಕನಲ್ಲಿ ಈ ಬಗ್ಗೆ ಪ್ರಕಾಶ್ ಪ್ರಶ್ನಿಸಿರುತ್ತಾರೆ. ಈ ಸಂಬಂಧ ಕಾರಿನ ಚಾಲಕ ಹಾಗೂ ಅದರಲ್ಲಿದ್ದ ಮೂವರು ಕನ್ಯಾನ ಗ್ರಾಮದ ಒಡಿಯೂರು ಐಟಿಐ ಕಾಲೇಜಿನ ಬಳಿಯಲ್ಲಿ, ಸ್ಕೂಟರಿಗೆ ಬಿಳಿ ಬಣ್ಣದ ಕಾರನ್ನು ಅಡ್ಡವಾಗಿ ಇಟ್ಟು, ತಡೆದು ನಿಲ್ಲಿಸಿ, ಕಾರಿನ ಚಾಲಕ ಹಾಗೂ ಇತರ 3 ಮಂದಿ ಕಾರಿನಿಂದ ಇಳಿದು ಪ್ರಕಾಶ್ ಅವರನ್ನು ಸ್ಕೂಟರಿನಿಂದ ಎಳೆದು ಹಾಕಿ ಹಲ್ಲೆ ನಡೆಸಿ, ಜೀವಬೆದರಿಕೆ ಒಡ್ಡಿ ಕಾರಿನಲ್ಲಿ ಪರಾರಿಯಾಗಿರುತ್ತಾರೆ ಎಂಬುದಾಗಿ ನೀಡಿದ ದೂರಿನಂತೆ ವಿಟ್ಲ ಪೆÇಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 101/2024 ಕಲಂ 341, 323, 506 ಆರ್/ಡಬ್ಲ್ಯು 34 ಐಪಿಸಿ ಮತ್ತು ಕಲಂ 3(1)(ಆರ್), 3(2)(ವಿಎ) ಎಸ್ ಸಿ ಮತ್ತು ಎಸ್ ಟಿ ಅಮೆಂಡ್ಮೆಂಟ್ ಆಕ್ಟ್ 2015ರಂತೆ ಪ್ರಕರಣ ದಾಖಲಾಗಿದೆ.
ಈ ಬಗ್ಗೆ ಪ್ರತಿದೂರು ನೀಡಿರುವ ಕನ್ಯಾನ ನಿವಾಸಿ ಮಹಮ್ಮದ್ ಸಯಾಫ್ (25) ಅವರು, ಶುಕ್ರವಾರ ಸಂಜೆ ತನ್ನ ಕಾರಿನಲ್ಲಿ ಸ್ನೇಹಿತರಾದ ರಾಝಿಕ್ ಮತ್ತು ಅಬ್ದುಲ್ ಖಾದರ್ ಎಂಬವರನ್ನು ಕುಳ್ಳಿರಿಸಿಕೊಂಡು ಕನ್ಯಾನದಿಂದ ತನ್ನ ಮನೆ ಕಡೆಗೆ ಹೋಗುತ್ತಿರುವಾಗ ಕನ್ಯಾನ ಭಜನಾ ಮಂದಿರದ ಬಳಿ ತಲುಪುತ್ತಿದ್ದಂತೆ, ಹಿಂದಿನಿಂದ ಬಿಳಿ ಬಣ್ಣದ ದ್ವಿಚಕ್ರ ವಾಹನದಲ್ಲಿ ಬಂದ ಪರಿಚಯದ ಪ್ರಕಾಶ ಹಾಗೂ ಆತನ ಸ್ನೇಹಿತ ಸಯಾಫ್ ಅವರ ಕಾರನ್ನು ಅಡ್ಡಗಟ್ಟಿ ತಡೆದು ನಿಲ್ಲಿಸಿ ಪ್ರಕಾಶನು ತನ್ನ ದ್ವಿಚಕ್ರ ವಾಹನದಿಂದ ರಾಡ್ ತೆಗೆದು, ಸಯಾಫ್ ಹಾಗೂ ಸ್ನೇಹಿತ ಅಬ್ದುಲ್ ಖಾದರ್ ಅವರಿಗೆ ಹಲ್ಲೆ ನಡೆಸಿರುತ್ತಾರೆ. ಬಳಿಕ ಪ್ರಕಾಶ ಮತ್ತು ಆತನ ಗೆಳೆಯ ಅವಾಚ್ಯ ಶಬ್ದಗಳಿಂದ ಬೈಯುತ್ತಿರುವಾಗ, ಸ್ಥಳಿಯರು ಸೇರುವುದನ್ನು ಕಂಡ, ಪ್ರಕಾಶ್ ಹಾಗೂ ಆತನ ಸ್ನೇಹಿತ ದ್ವಿಚಕ್ರ ವಾಹನ ಸಮೇತ ಹೋಗಿರುತ್ತಾರೆ. ಹಲ್ಲೆಯಿಂದ ಗಾಯಗೊಂಡ ಸಯಾಫ್ ಹಾಗೂ ಆತನ ಸ್ನೇಹಿತ ಅಬ್ದುಲ್ ಖಾದರ್ ಅವರು ಚಿಕಿತ್ಸೆಗೆ ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಾಗಿರುತ್ತಾರೆ ಎಂಬುದಾಗಿ ನೀಡಿದ ದೂರಿನಂತೆ ವಿಟ್ಲ ಪೆÇಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 102/2024 ಕಲಂ 341, 504, 324 ಆರ್/ಡಬ್ಲ್ಯು 34 ಐಪಿಸಿಯಂತೆ ಪ್ರಕರಣ ದಾಖಲಾಗಿದೆ. ಎರಡೂ ಪ್ರಕರಣಗಳನ್ನು ದಾಖಲಿಸಿಕೊಂಡಿರುವ ವಿಟ್ಲ ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.
0 comments:
Post a Comment