ಖ್ಯಾತ ಲೇಖಕಿ ಹಾಗೂ ಮಾಜಿ ಪ್ರಾಧ್ಯಾಪಕ ವಿರುದ್ದ ಯುಎಪಿಎ ಅಡಿ ಕ್ರಮಕ್ಕೆ ಅವಕಾಶ ನೀಡಿರುವುದನ್ನು ಕೈಬಿಡಲು ಸಿಪಿಐಎಂಎಲ್ ಆಗ್ರಹ - Karavali Times ಖ್ಯಾತ ಲೇಖಕಿ ಹಾಗೂ ಮಾಜಿ ಪ್ರಾಧ್ಯಾಪಕ ವಿರುದ್ದ ಯುಎಪಿಎ ಅಡಿ ಕ್ರಮಕ್ಕೆ ಅವಕಾಶ ನೀಡಿರುವುದನ್ನು ಕೈಬಿಡಲು ಸಿಪಿಐಎಂಎಲ್ ಆಗ್ರಹ - Karavali Times

728x90

21 June 2024

ಖ್ಯಾತ ಲೇಖಕಿ ಹಾಗೂ ಮಾಜಿ ಪ್ರಾಧ್ಯಾಪಕ ವಿರುದ್ದ ಯುಎಪಿಎ ಅಡಿ ಕ್ರಮಕ್ಕೆ ಅವಕಾಶ ನೀಡಿರುವುದನ್ನು ಕೈಬಿಡಲು ಸಿಪಿಐಎಂಎಲ್ ಆಗ್ರಹ

ಬಂಟ್ವಾಳ, ಜೂನ್ 21, 2024 (ಕರಾವಳಿ ಟೈಮ್ಸ್) : ಖ್ಯಾತ ಲೇಖಕಿ ಅರುಂಧತಿ ರಾಯ್ ಮತ್ತು ಮಾಜಿ ಪ್ರಾಧ್ಯಾಪಕ ಶೇಖ್ ಶೌಕತ್ ಹುಸೇನ್ ಅವರ ವಿರುದ್ಧ ಭಯೋತ್ಪಾದನಾ ವಿರೋಧಿ ಕಾನೂನು (ಯುಎಪಿಎ) ಅಡಿಯಲ್ಲಿ ಕಾನೂನು ಕ್ರಮಕ್ಕೆ ಅವಕಾಶ ನೀಡಿರುವುದಕ್ಕೆ ಸಿಪಿಐಎಂಎಲ್ ಲಿಬರೇಶನ್ ದ ಕ ಜಿಲ್ಲಾ ಸಮಿತಿ ವತಿಯಿಂದ ಪ್ರಕರಣವನ್ನು ಕೈಬಿಡಲು ಒತ್ತಾಯಿಸಿ ಬಂಟ್ವಾಳ ತಹಶಿಲ್ದಾರ್ ಮೂಲಕ ರಾಷ್ಟ್ರಪತಿಗಳಿಗೆ ಶುಕ್ರವಾರ ಮನವಿ ಸಲ್ಲಿಸಲಾಯಿತು.

ಭಯೋತ್ಪಾದನಾ ವಿರೋಧಿ  ಪ್ರಕರಣದಲ್ಲಿ ಮಾನವ ಹಕ್ಕುಗಳ ಹೋರಾಟಗಾರರನ್ನು ದುರುದ್ದೇಶಪೂರ್ವಕವಾಗಿ ತಳುಕು ಹಾಕಿ ಆರುಂಧತಿ ರಾಯ್ ಮತ್ತಿತರರನ್ನು ಸುಳ್ಳು ಕೇಸ್ ದಾಖಲಿಸುತ್ತಿರುವುದು ಸಿಪಿಐಎಂಎಲ್ ಲಿಬರೇಶನ್ ದ.ಕ ಜಿಲ್ಲಾ ಸಮಿತಿ ಬಲವಾಗಿ ಖಂಡಿಸಿದೆ. ಆರುಂಧತಿ ರಾಯ್ ಅವರು ಸಂವಿಧಾನ ವಿರೋಧಿ, ಜನವಿರೋಧಿ ನೀತಿಗಳು, ಅನ್ಯಾಯಗಳ ವಿರುದ್ಧ ನಿರಂತರ ಧ್ವನಿ ಎತ್ತುತ್ತಾ ಬಂದವರು, ದಮನಿತರ ಮೇಲೆ ದೇಶಾದ್ಯಂತ ನಡೆಯುತ್ತಿರುವ ದೌರ್ಜನ್ಯಗಳನ್ನು ಗುರುತಿಸಿ ಅವುಗಳನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ತಲುಪಿಸಿ ಜನವಿರೋಧಿ, ಅಪ್ರಜಾತಾಂತ್ರಿಕ ಆಳುವ ವರ್ಗಗಳ ನಿಜಬಣ್ಣ ಬಯಲುಗೊಳಿಸಿದ್ದಾರೆ.

ದೇಶದಲ್ಲಿ ಜನಪರ ಹೋರಾಟಗಳನ್ನು ಸಂಘಟಿಸುವ ಯತ್ನ ನಡೆಸಿದರೆ, ಅವರ ಸ್ಥಿತಿ ಏನಾಗುತ್ತದೆ ಎನ್ನುವುದನ್ನು ಜನಪರ ಚಳಿವಳಿಗಾರರಿಗೆ ಎಚ್ಚರಿಕೆಯ ರೂಪದಲ್ಲಿ ತಿಳಿಸುವ ಉದ್ದೇಶದಿಂದ ಸರಣಿ ಬಂಧನ ನಡೆದಿದೆ. ಅಲ್ಲದೇ ದೇಶದ ಜನಪರವಾದ ಜನ ಚಳವಳಿಯನ್ನು ಬಗ್ಗು ಬಡಿಯುವುದು ಸರಕಾರಗಳ ದುರುದ್ದೇಶವಾಗಿದೆ. 14 ವರ್ಷಗಳ ಹಿಂದಿನ ಪ್ರಕರಣದಲ್ಲಿ ಲೇಖಕಿ ಅರುಂಧತಿ ರಾಯ್ ಮತ್ತು ಶಿಕ್ಷಣ ತಜ್ಞ ಶೇಖ್ ಶೌಕತ್ ಹುಸೇನ್ ಅವರನ್ನು ಯುಎಪಿಎ ಅಡಿಯಲ್ಲಿ ವಿಚಾರಣೆಗೆ ಒಳಪಡಿಸಲು ಅವಕಾಶ ನೀಡಿದ ನಿರ್ಧಾರವನ್ನು ಕೈಬೀಡಬೇಕು. ಚುನಾವಣಾ ಫಲಿತಾಂಶದ ನಂತರ ಈ ರೀತಿ ಮಾಡಿರುವುದನ್ನು ನೋಡಿದರೆ ಇದು ಅಭಿವ್ಯಕ್ತಿ ಸ್ವಾತಂತ್ರ್ಯದ ವಿರುದ್ಧ ಪ್ರತೀಕಾರದ ಕ್ರಮ. ಈ ಕ್ರಮದ ವಿರುದ್ಧ ಎಲ್ಲಾ ಪ್ರಜಾತಂತ್ರವಾದಿಗಳು ಧ್ವನಿ ಎತ್ತಬೇಕು. ಯುಎಪಿಎಯಂತಹ ಗಂಭೀರವಾದ ಸೆಕ್ಷನ್‍ಗಳ ಅಡಿಯಲ್ಲಿ ಮೊಕದ್ದಮೆಗೆ ಅವಕಾಶ ನೀಡುವ ಮೂಲಕ ಬಿಜೆಪಿ ಸರಕಾರವು ಜನರ ಪ್ರಜಾತಾಂತ್ರಿಕ ಹಕ್ಕುಗಳ ಧ್ವನಿಯನ್ನು ಹೊಸಕಿ ಹಾಕುವ ಉದ್ದೇಶವನ್ನು ಹೊಂದಿದೆ ಎಂಬುದು ಸ್ಪಷ್ಟವಾಗಿದೆ. ಅರುಂಧತಿ ರಾಯ್ ಅವರ ಮೇಲೆ ಯುಎಪಿಎ ಸೆಕ್ಷನ್ ಅಡಿಯಲ್ಲಿ ಕ್ರಮ ಜರುಗಿಸಲು ನೀಡಿರುವ ಅನುಮತಿಯನ್ನು ಕೂಡಲೇ ಹಿಂಪಡೆಯಬೇಕು ಹಾಗೂ ಕಾಯ್ದೆ ರದ್ದುಗೊಳಿಸಬೇಕೆಂದು ಸಿಪಿಐಎಂಎಲ್ ಲಿಬರೇಶನ್ ಒತ್ತಾಯಿಸಿದೆ. 

2010ರಲ್ಲಿ ನಡೆದಿದ್ದ ಸಮಾರಂಭವೊಂದರಲ್ಲಿ  ಭಾಷಣಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಖ್ಯಾತ ಲೇಖಕಿ ಅರುಂಧತಿ ರಾಯ್ ವಿರುದ್ಧ ಭಯೋತ್ಪಾದನಾ ವಿರೋಧಿ ಕಾನೂನು (ಯುಎಪಿಎ) ಅಡಿಯಲ್ಲಿ ತನಿಖೆ ನಡೆಸಲು ದೆಹಲಿ ಲೆಫ್ಟಿನೆಂಟ್ ಗವರ್ನರ್ ನಿರ್ದೇಶನ ನೀಡಿರುವುದು ಖಂಡನೀಯವಾಗಿದೆ ಎಂದು ಮನವಿಯಲ್ಲಿ ಉಲ್ಲೇಖಿಸಿರುವ ಸಿಪಿಐಎಂಎಲ್ ಸಮಿತಿ ಈ ಘಟನೆಯನ್ನೇ ನೆಪವಾಗಿಟ್ಟುಕೊಂಡು ಅತ್ಯಂತ ಕಠಿಣ ಕಾನೂನಿನಡಿಯಲ್ಲಿ ಯಾವುದೇ ಸಾಕ್ಷ್ಯಾಧಾರಗಳಿಲ್ಲದೇ ಅವರ ವಿರುದ್ಧ ಸುಳ್ಳು ಕೇಸ್ ದಾಖಲಿಸಿರುವುದು ಇದರ ಉದ್ದೇಶ ಎಲ್ಲ ಮಾನವ ಹಕ್ಕು ಹೋರಾಟಗಾರರನ್ನು, ದಲಿತ ಚಿಂತಕರನ್ನು ಜೈಲಿಗಟ್ಟಿ ನ್ಯಾಯವನ್ನು ಶಾಶ್ವತವಾಗಿ ಸಮಾಧಿ ಮಾಡುವುದಾಗಿದೆ. ಹಾಗಾಗಿ ಕೂಡಲೇ ಸುಳ್ಳು ಕೇಸ್‍ಗಳನ್ನು ವಜಾಗೊಳಿಸಿ, ಮಾನವ ಹಕ್ಕುಗಳ ಹೋರಾಟಗಾರರು, ದಲಿತ, ದಮನಿತರ ಪರ ಚಿಂತಕರನ್ನು ಬಿಡುಗಡೆಗೊಳಿಸುವ ಮೂಲಕ ನ್ಯಾಯಪರತೆ ಎತ್ತಿಹಿಡಿಯಬೇಕು. ಆ ಮೂಲಕ ಜನವಿರೋಧಿ ನಿಲುವುಗಳಿಗೆ ಕಡಿವಾಣ ಹಾಕಬೇಕೆಂದು ಆಗ್ರಹಿಸಿದೆ. 

ನಿಯೋಗದಲ್ಲಿ ಸಿಪಿಐಎಂಎಲ್ ಲಿಬರೇಶನ್ ಜಿಲ್ಲಾ ಕಾರ್ಯದರ್ಶಿ ರಾಮಣ್ಣ ವಿಟ್ಲ, ಜಿಲ್ಲಾ ಸಮಿತಿ ಸದಸ್ಯ ಸಜೇಶ್ ವಿಟ್ಲ, ಪ್ರಮುಖರಾದ ರಾಜಾ ಚೆಂಡ್ತಿಮಾರ್, ಅಪ್ಪು ನಾಯ್ಕ, ಸರಸ್ವತಿ ಕಡೇಶಿವಾಲಯ, ತುಳಸೀದಾಸ್ ವಿಟ್ಲ ಮೊದಲಾದವರಿದ್ದರು.

  • Blogger Comments
  • Facebook Comments

0 comments:

Post a Comment

Item Reviewed: ಖ್ಯಾತ ಲೇಖಕಿ ಹಾಗೂ ಮಾಜಿ ಪ್ರಾಧ್ಯಾಪಕ ವಿರುದ್ದ ಯುಎಪಿಎ ಅಡಿ ಕ್ರಮಕ್ಕೆ ಅವಕಾಶ ನೀಡಿರುವುದನ್ನು ಕೈಬಿಡಲು ಸಿಪಿಐಎಂಎಲ್ ಆಗ್ರಹ Rating: 5 Reviewed By: karavali Times
Scroll to Top