ಬಂಟ್ವಾಳ, ಜೂನ್ 17, 2024 (ಕರಾವಳಿ ಟೈಮ್ಸ್) : ಬೇಕರಿ ಹಾಗೂ ತರಕಾರಿ ಮಾರಾಟದ ಅಂಗಡಿಗೆ ನುಗ್ಗಿದ ಕಳ್ಳರು ನಗದು ಸಹಿತ ಅಗತ್ಯ ದಾಖಲೆಗಳನ್ನು ಕಳವುಗೈದ ಘಟನೆ ಬೋಳಂತೂರು ಗ್ರಾಮದ ಕಲ್ಪನೆ-ಮುಡ ಕ್ರಾಸ್ ಎಂಬಲ್ಲಿ ಭಾನುವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ.
ಬೋಳಂತೂರು ನಿವಾಸಿ ಮಹಮ್ಮದ್ ರಫೀಕ್ ಅವರಿಗೆ ಸೇರಿದ ಬೋಳಂತೂರು ಗ್ರಾಮದ ಕಲ್ಪನೆ-ಮೂಡ ಕ್ರಾಸ್ ಬಳಿಯ ಪಂಚಾಯತ್ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿರುವ ಬೇಕರಿ ಹಾಗೂ ತರಕಾರಿ ಮಾರಾಟದ ಅಂಗಡಿಯಲ್ಲಿ ಈ ಕಳವು ಕೃತ್ಯ ನಡೆದಿದೆ. ಇವರು ಶನಿವಾರ ರಾತ್ರಿ ಅಂಗಡಿಗೆ ಬೀಗ ಹಾಕಿ ಮನೆಗೆ ತೆರಳಿದ್ದು, ಭಾನುವಾರ ಬೆಳಿಗ್ಗೆ ಅಂಗಡಿ ತೆರೆಯಲು ಬಂದಾಗ ಅಂಗಡಿಯ ಎದುರಿನ ಮೇಸ್ ನೆಟ್ ಬಾಗಿಲಿಗೆ ಅಳವಡಿಸಿದ ಬೀಗ ತುಂಡರಿಸಿರುವುದು ಕಂಡು ಬಂದಿದೆ. ಈ ಬಗ್ಗೆ ಅಂಗಡಿಯ ಒಳಗೆ ಪರಿಶೀಲಿಸಿದಾಗ ಅಂಗಡಿಯ ಡ್ರಾವರಿನಲ್ಲಿದ್ದ 10 ಸಾವಿರ ರೂಪಾಯಿ ನಗದು, ಅಲ್ಲೇ ಪಕ್ಕದಲ್ಲಿಟ್ಟಿದ್ದ 15 ಸಾವಿರ ರೂಪಾಯಿ ನಗದು ಹಣ, ಅಗತ್ಯ ದಾಖಲಾತಿಗಳು, ಎಟಿಎಂ ಕಾರ್ಡ್ ಹಾಗೂ 650 ರೂಪಾಯಿ ಚಿಲ್ಲರೆ ಹಣ ಮತ್ತು ಹರಿದ ನೋಟುಗಳಿದ್ದ ಡಬ್ಬ ಕಳವಾಗಿರುವುದು ಬೆಳಕಿಗೆ ಬಂದಿದೆ. ಕಳವಾಗಿರುವ ಒಟ್ಟು ಮೌಲ್ಯ 26,650/- ರೂಪಾಯಿ ಆಗಿರುತ್ತದೆ. ಈ ಬಗ್ಗೆ ರಫೀಕ್ ಅವರ ಭಾವ ಅಬ್ದುಲ್ ಲತೀಫ್ ಅವರು ನೀಡಿದ ದೂರಿನಂತೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
0 comments:
Post a Comment