ಬಂಟ್ವಾಳದಲ್ಲಿ ಮುಸ್ಲಿಂ ಬಾಂಧವರಿಂದ ಸಂಭ್ರಮದ ಬಕ್ರೀದ್ ಆಚರಣೆ
ಬಂಟ್ವಾಳ, ಜೂನ್ 17, 2024 (ಕರಾವಳಿ ಟೈಮ್ಸ್) : ಕಾಲಘಟ್ಟವು ಅಂತಿಮ ಹಂತಕ್ಕೆ ತಲುಪುತ್ತಿದ್ದು, ಮರಣಾಧಿಕ್ಯಗೊಳ್ಳುವುದು ಅಂತಿಮ ಕಾಲದ ಲಕ್ಷಣಗಳಲ್ಲಿ ಒಂದಾಗಿದೆ. ಯಾವುದೇ ರೋಗ ಶಯ್ಯೆಯೂ ಇಲ್ಲದೆ, ಮರಣದ ಪ್ರಾಯವೂ ಆಗದೆ ಜನ ಹಠಾತ್ ಆಗಿ ಮರಣ ಹೊಂದುತ್ತಿದ್ದಾರೆ. ಕಳೆದ ಹಬ್ಬದ ಸಂದರ್ಭದಲ್ಲಿದ್ದವರು ಈ ಬಾರಿಯ ಹಬ್ಬದ ಸಂದರ್ಭ ನಮ್ಮ ಜೊತೆಗಿಲ್ಲ. ನಿನ್ನೆ ಇದ್ದವರು ಇಂದು ನಮ್ಮೊಂದಿಗಿಲ್ಲ. ಮನುಷ್ಯದ ಮರಣ ಅಧಿಕಗೊಳ್ಳುತ್ತಿರುವುದು ನಮ್ಮನ್ನು ಬಡಿದೆಬ್ಬಿಸುವ ಅಗತ್ಯವಿದೆ ಎಂದು ಪಾಣೆಮಂಗಳೂರು-ಆಲಡ್ಕ ಮುಹಿಯುದ್ದೀನ್ ಜುಮಾ ಮಸೀದಿ ಮುದರ್ರಿಸ್ ಶೈಖುನಾ ಹಾಜಿ ಬಿ ಎಚ್ ಅಬೂಸ್ವಾಲಿಹ್ ಉಸ್ತಾದ್ ತಾಕೀತು ಮಾಡಿದರು.
ಸೋಮವಾರ ಬಕ್ರೀದ್ ಹಬ್ಬದ ಪ್ರಯುಕ್ತ ಮಸೀದಿಯಲ್ಲಿ ನಡೆದ ಈದ್ ನಮಾಝ್ ಹಾಗೂ ಖುತುಬಾ ನೇತೃತ್ವ ವಹಿಸಿದ ಬಳಿಕ ಉಪನ್ಯಾಸ ನೀಡಿ ಮಾತನಾಡಿದ ಅವರು, ನಮ್ಮಿಂದ ಮರಣ ಹೊಂದಿ ಪರಲೋಕ ಜೀವನಕ್ಕೆ ಒಗ್ಗಿಕೊಂಡವರನ್ನು ಸದಾ ಸ್ಮರಿಸಿಕೊಂಡು ನಾವೂ ಕೂಡಾ ಮರಣ ಹೊಂದಲಿಕ್ಕಿದೆ ಎಂಬ ಪರಿಜ್ಞಾನದೊಂದಿಗೆ ಮಾನವೀಯತೆ ಮೈಗೂಡಿಸಿಕೊಂಡು ಜೀವನ ಧನ್ಯಗೊಳಿಸಬೇಕು ಎಂದು ಕರೆ ನೀಡಿದರು. ಈದ್ ವಿಶೇಷ ಪ್ರಾರ್ಥನೆ ಬಳಿಕ ಮುಸ್ಲಿಮರು ಪರಸ್ಪರ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.
0 comments:
Post a Comment