ಬಂಟ್ವಾಳ, ಮೇ 06, 2024 (ಕರಾವಳಿ ಟೈಮ್ಸ್) : ಕಾರಿಗೆ ಸೈಡ್ ಕೊಡಲಿಲ್ಲ ಎಂಬ ಬಗ್ಗೆ ತಕರಾರು ತೆಗೆದು ಎರಡು ಕಾರುಗಳಲ್ಲಿ ಬಂದ 6 ಮಂದಿ ಆರೋಪಿಗಳು ಕೆ ಎಸ್ ಆರ್ ಟಿ ಸಿ ಬಸ್ಸು ತಡೆದು ಚಾಲಕಗೆ ಹಲ್ಲೆ ನಡೆಸಿ ಜೀವಬೆದರಿಕೆ ಒಡ್ಡಿದ್ದಲ್ಲದೆ ಬಸ್ಸಿನ ಮಿರರ್ ಹಾಗೂ ಗ್ಲಾಸ್ ಪುಡಿಗಟ್ಟಿ ಪುಂಡಾಟ ಮೆರೆದ ಘಟನೆ ಕಲ್ಲಡ್ಕ ಸಮೀಪದ ದಾಸಕೋಡಿ ಎಂಬಲ್ಲಿ ಭಾನುವಾರ ಸಂಜೆ ನಡೆದಿದ್ದು, ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಬಗ್ಗೆ ಬಸ್ಸಿ ಚಾಲಕ, ಪೂಂಜಾಲಕಟ್ಟೆ ನಿವಾಸಿ ಕೃಷ್ಣಪ್ಪ (52) ಅವರು ಪೊಲೀಸರಿಗೆ ದೂರು ನೀಡಿದ್ದು, ಇವರು ಕೆಎ 19 ಎಫ್ 3154 ನೋಂದಣಿ ಸಂಖ್ಯೆಯ ಕೆ ಎಸ್ ಆರ್ ಟಿ ಸಿ ಬಸ್ಸಿನ ಚಾಲಕರಾಗಿದ್ದು, ಸದರಿ ಬಸ್ಸಿನಲ್ಲಿ ಭಾನುವಾರ ಸಂಜೆ ಮಂಗಳೂರಿನಿಂದ ಸೋಮವಾರಪೇಟೆಗೆ ಪ್ರಯಾಣಿಕರನ್ನು ಕರೆದುಕೊಂಡು ಸಾಗುತ್ತಿದ್ದ ವೇಳೆ ದಾಸಕೋಡಿ ಎಂಬಲ್ಲಿಗೆ ತಲುಪಿದಾಗ ಕೆಎ03 ಎಂಕೆ 8149 ಹಾಗೂ ಕೆಎ 05 ಎಎನ್ 6722 ನೋಂದಣಿ ಸಂಖ್ಯೆಯ ಕಾರುಗಳಲ್ಲಿ ಬಂದ ಆರು ಜನರು ಬಸ್ಸನ್ನು ಅಡ್ಡಗಟ್ಟಿ, ಕಲ್ಲಡ್ಕ ಏಕಮುಖ ರಸ್ತೆಯಲ್ಲಿ ಸದರಿ ಕಾರುಗಳಿಗೆ ಮುಂದೆ ಹೋಗಲು ಸೈಡ್ ಕೊಟ್ಟಿಲ್ಲ ಎಂದು ತಗಾದೆ ಎತ್ತಿ ಬಸ್ಸಿನ ಸೈಡ್ ಮಿರರನ್ನು ಹಾಗೂ ಬಸ್ಸಿನ ಎದುರಿನ ಗ್ಲಾಸನ್ನು ಜಖಂಗೊಳಿಸಿರುತ್ತಾರೆ. ಘಟನೆಯಿಂದ ಸುಮಾರು 30 ಸಾವಿರ ರೂಪಾಯಿ ನಷ್ಟ ಉಂಟಾಗಿರುತ್ತದೆ. ಬಳಿಕ ಬಸ್ಸಿನ ಚಾಲಕಗೆ ಆರೋಪಿಗಳು ಅವ್ಯಾಚವಾಗಿ ಬೈದು, ಜೀವ ಬೆದರಿಕೆ ಒಡ್ಡಿ, ಹಲ್ಲೆ ನಡೆಸಿರುತ್ತಾರೆ ಎಂದು ದೂರಲಾಗಿದೆ.
ಈ ಬಗ್ಗೆ ಕಾರುಗಳಲ್ಲಿ ಬಂದ ಆರು ಜನರ ವಿರುದ್ಧ ಬಂಟ್ವಾಳ ನಗರ ಠಾಣೆಯಲ್ಲಿ ಅಪರಾಧ ಕ್ರಮಾಂಕ 83/2024 ಕಲಂ 143, 147, 341, 353, 323, 504, 506, 427 ಜೊತೆಗೆ 149 ಐಪಿಸಿ ಮತ್ತು ಕಲಂ 2(ಎ) ಕೆಪಿಡಿಎಲ್‍ಪಿ ಆಕ್ಟ್ ಪ್ರಕಾರ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳ ಪತ್ತೆಗ ಬಲೆ ಬೀಸಿದ್ದಾರೆ.
0 comments:
Post a Comment